More

    ನಮ್ಮಲ್ಲಿ ಚುನಾವಣೆಗಳು ಇಷ್ಟು ಚೆಂದ, ಏಕೆ ಗೊತ್ತಾ?! : ಚಕ್ರವರ್ತಿ ಸೂಲಿಬೆಲೆ ಅವರ ವಿಶ್ವಗುರು ಅಂಕಣ

    ಎಲ್ಲ ಚುನಾವಣೆಗಳನ್ನು ನಡೆಸುವ ಕೇಂದ್ರೀಯ ಚುನಾವಣಾ ಆಯೋಗವೊಂದರ ಕಲ್ಪನೆಯನ್ನು ಕಟ್ಟಿಕೊಟ್ಟ ಅಂಬೇಡ್ಕರರು ಅದು ಯಾರ ಅಧೀನದಲ್ಲೂ ಇಲ್ಲದಂತೆ, ಅದಕ್ಕೊಂದು ಪ್ರತ್ಯೇಕವಾದ ಸ್ಥಾನಮಾನ ದೊರಕುವಂತೆ ನೋಡಿಕೊಂಡರು. ಅವರ ಈ ದೂರದೃಷ್ಟಿಯ ಕಲ್ಪನೆಯಿಂದಾಗಿಯೇ ಇಂದು ಚುನಾವಣೆಗಳು ಸುಸೂತ್ರವಾಗಿ ನಡೆಯುತ್ತಿರುವುದು.

    ನಮ್ಮಲ್ಲಿ ಚುನಾವಣೆಗಳು ಇಷ್ಟು ಚೆಂದ, ಏಕೆ ಗೊತ್ತಾ?! : ಚಕ್ರವರ್ತಿ ಸೂಲಿಬೆಲೆ ಅವರ ವಿಶ್ವಗುರು ಅಂಕಣಅಮೆರಿಕದ ಚುನಾವಣೆ ದಿನ ಕಳೆದಂತೆ ಅಸಹ್ಯವಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಂತೂ ಟ್ರಂಪ್ ‘ಸೋಲನ್ನೊಪ್ಪಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ ಮೋಸದ ಸೋಲು ನನಗೆ ಸಹಮತವಿಲ್ಲ’ ಎಂದಿದ್ದಾರೆ. ಅಂದರೆ ಅಧಿಕೃತವಾಗಿ ಟ್ರಂಪ್ ಅವಧಿ ಮುಗಿಯುವವರೆಗೂ ಅಮೆರಿಕದಲ್ಲಿ ಚಟುವಟಿಕೆಗಳು ರಂಗೇರುತ್ತಲೇ ಇರುತ್ತವೆ ಎಂದಾಯ್ತು. ತಮ್ಮನ್ನು ತಾವು ಬಲು ಬುದ್ಧಿವಂತರೆಂದುಕೊಳ್ಳುವ ಮತ್ತು ಅವಕಾಶ ಸಿಕ್ಕಾಗಲೆಲ್ಲ ಭಾರತೀಯರನ್ನು ಅವಹೇಳನ ಮಾಡುವ ಈ ಪಶ್ಚಿಮದವರಿಗೆ ಒಂದು ಸರಿಯಾದ ಚುನಾವಣೆ ವ್ಯವಸ್ಥೆಯನ್ನು ರೂಪಿಸಲೂ ಸಾಧ್ಯವಾಗಲಿಲ್ಲವೇ? ಈ ನಿಟ್ಟಿನಲ್ಲಿ ಅವರು ನಮ್ಮಿಂದ ಪಾಠ ಕಲಿಯಬೇಕಾಗಿದೆ. ಅಮೆರಿಕದ ಚುನಾವಣೆ ನಂತರ ನಮ್ಮಲ್ಲಿ ಬಿಹಾರದ ಚುನಾವಣೆ ನಡೆಸಿ ಮುಖ್ಯಮಂತ್ರಿಯನ್ನು ಆರಿಸಿ, ಹೈದರಾಬಾದಿನ ಮುನ್ಸಿಪಲ್ ಕಾರ್ಪೆರೇಷನ್​ಗೆ ಚುನಾವಣೆ ಮುಗಿಸಿ, ಫಲಿತಾಂಶವನ್ನೂ ಹೊರಡಿಸಿದ್ದಾಯ್ತು. ಅಮೆರಿಕ ಮಾತ್ರ ಇನ್ನು ತೆವಳುತ್ತಿರುವುದು ಏಕಿರಬಹುದು? ಅಥವಾ ಈ ಪ್ರಶ್ನೆಯನ್ನು ಸರಿಯಾಗಿ ಕೇಳಬೇಕೆಂದರೆ, ಚುನಾವಣೆ ವಿಚಾರದಲ್ಲಿ ಭಾರತ ಇಷ್ಟು ಸಕ್ಷಮವಾಗಿರಲು ಕಾರಣವೇನಿರಬಹುದು? ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಎಲ್ಲವೂ ಡಾ.ಬಾಬಾಸಾಹೇಬ್ ಅಂಬೇಡ್ಕರರ ದೂರದೃಷ್ಟಿಯ ಫಲವಷ್ಟೇ. ಅಚ್ಚರಿಯಾಗುತ್ತದಲ್ಲವೇ?

    ಇದನ್ನೂ ಓದಿ: ಸಾಧಿಸಿ ಇಲ್ಲವೇ ಗಂಟುಮೂಟೆ ಕಟ್ಟಿ! ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ

    ವಾಸ್ತವವಾಗಿ, ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ಸಮಿತಿಯ ಸದಸ್ಯರಷ್ಟೇ ಆಗಿದ್ದರು. ಅವರಿಗೆ ಪ್ರತ್ಯಕ್ಷ ಇದ್ದ ಜವಾಬ್ದಾರಿ ಸಂವಿಧಾನದ ಮೂಲ ಕರಡು ರೂಪವನ್ನು ವಿಶ್ಲೇಷಿಸುವ ಸಮಿತಿಯ ಅಧ್ಯಕ್ಷ ಸ್ಥಾನ ಮಾತ್ರ. ಬೆನಗಲ್ ನರಸಿಂಹರಾಯರು ಮೂಲ ಕರಡು ರೂಪವನ್ನು ರಚಿಸಿದ್ದರಲ್ಲದೆ ಅದರ ಕುರಿತು ಟಿಪ್ಪಣಿಯನ್ನೂ ಮಂಡಿಸಿದ್ದರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಪ್ರಾಂತೀಯ ವಿಧಾನಸಭೆಗಳಿಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದವು. ಸಂವಿಧಾನ ರಚನೆ ವಿಚಾರದಲ್ಲೂ ಇದೇ ರೀತಿ ಜನರಿಂದ ಆಯ್ಕೆಯಾದವರು ಬರಲೆಂಬ ಸಹಜವಾದ ಬಯಕೆ ನೆಹರುಥರದವರಿಗಿತ್ತು. ಆದರೆ ಅದು ಸುಲಭವಲ್ಲ ಮತ್ತು ಸಾಕಷ್ಟು ಸಮಯ ತಿನ್ನುವ ಪ್ರಕ್ರಿಯೆ ಎಂದರಿತು ಒಂದಷ್ಟು ಜನರನ್ನು ಆಯ್ಕೆ ಮಾಡಲಾಯ್ತು. ಸರ್ವಸಾಮಾನ್ಯ, ಮುಸಲ್ಮಾನ, ಸಿಖ್ ಎಂಬ ಮೂರು ಮುಖ್ಯ ವಿಭಾಗಗಳನ್ನು ಮಾಡಿಕೊಳ್ಳಲಾಗಿತ್ತು. ಈ ಕುರಿತಂತೆ ಆಕ್ಷೇಪ ಎತ್ತಿದ ಜಯಪ್ರಕಾಶ ನಾರಾಯಣರು ಇಡಿಯ ಭಾರತವನ್ನು ಪ್ರತಿನಿಧಿಸಬಲ್ಲ ಜನರು ಇದರಲ್ಲಿರಬೇಕು ಎಂದರು. ಈ ಹೊತ್ತಲ್ಲೇ ಹೀಗೆ ಆಯ್ಕೆಯಾದ ಮಂದಿಗೆ ಸಂವಿಧಾನ ಸಮಿತಿಯ ನೈಜ ಸ್ವರೂಪದ ಕಲ್ಪನೆಯೇ ಇರಲಿಲ್ಲ. ಅಂದಿನ ದಿನಗಳಲ್ಲಿ ತುಂಬ ಪ್ರತಿಷ್ಠಿತವಾಗಿದ್ದ ಈ ಸಮಿತಿಯ ಸದಸ್ಯರು ತಾವೆಂಬುದೇ ಅವರಿಗೆ ಆನಂದ. ಹೇಗೆ ಸಂಸತ್ತಿನ ಸಭೆಗಳಲ್ಲಿ ವರ್ತಿಸುತ್ತಿದ್ದರೋ ಹಾಗೆಯೇ ಇಲ್ಲೂ ಕೂಡ. ಇಂಥ ಹೊತ್ತಿನಲ್ಲಿ ಸಂವಿಧಾನ ಎಂದರೇನು ಎಂಬುದರಿಂದ ಹಿಡಿದು ಈ ಸಮಿತಿಗೂ ಸಂಸತ್ತಿಗೂ ಇರುವ ವ್ಯತ್ಯಾಸಗಳನ್ನೆಲ್ಲ ವಿವರಿಸಿ ಹೇಳಬೇಕಾಗಿದ್ದವರು ಸ್ವತಃ ಅಂಬೇಡ್ಕರರೇ!

    ಇದನ್ನೂ ಓದಿ: ಬಹುಕಾಲದ ನಂತರ ಹಿಂದೂ ಜಾಗೃತವಾಗಿದ್ದಾನೆ! : ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ

    ಅಂಬೇಡ್ಕರರ ದೃಷ್ಟಿಕೋನ ನಿಚ್ಚಳವಾಗಿತ್ತು. ಸಂವಿಧಾನ ಸಮಿತಿಯೊಳಗೆ ಪಕ್ಷಪಾತವಿರಬಾರದು, ಯಾವುದೇ ಸ್ವಾರ್ಥ ಸಾಧನೆಗೆ ಅಲ್ಲಿ ಅವಕಾಶವಿರಬಾರದು. ಸಂಸತ್ತು ಹಾಗಲ್ಲ. ಉದ್ದೇಶದ ಸಾಧನೆಯನ್ನು ಲಕ್ಷ್ಯದಲ್ಲಿರಿಸಿಕೊಂಡೇ ಪಕ್ಷಪಾತದ ದೃಷ್ಟಿಯಿಂದ ವ್ಯವಹರಿಸುವವರೇ ಅಲ್ಲಿ ತುಂಬಿಕೊಂಡಿರುತ್ತಾರೆ. ಹೀಗಾಗಿ ಸಂವಿಧಾನ ರಚಿಸುವಾಗ ಶ್ರೇಷ್ಠ ಭಾರತದ ಕಲ್ಪನೆಯಷ್ಟೇ ಕಣ್ಣ ಮುಂದಿರಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಅವರು ಸಂವಿಧಾನ ರಚನೆಯ ನಂತರ ಮಾಡಿದ ಭಾಷಣವೊಂದರಲ್ಲಿ ದೇಶದ ಭವಿಷ್ಯದ ಕುರಿತಂತೆ ಕಳವಳವನ್ನು ವ್ಯಕ್ತಪಡಿಸಿದ್ದರು. ‘1950ರ ಜನವರಿ 26ರಂದು ಭಾರತವು ಸಂಪೂರ್ಣವಾಗಿ ಸ್ವತಂತ್ರವಾಗಲಿದೆ. ಆದರೆ ಇದು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದೇ ಅಥವಾ ಕಳೆದುಕೊಳ್ಳುವುದೇ ಎಂಬುದೇ ನನ್ನನ್ನು ತೀವ್ರವಾಗಿ ಕಾಡುತ್ತಿರುವ ಚಿಂತೆ. ಭಾರತ ಎಂದೂ ಸ್ವತಂತ್ರವಾಗಿರಲಿಲ್ಲವೆಂದಲ್ಲ, ಅದು ಕಳೆದುಕೊಂಡಿತ್ತು ಎನ್ನುವುದನ್ನು ಗಮನಿಸಬೇಕು. ಅದರ ಪುನರಾವರ್ತನೆಯಾಗಬಹುದೇ? ಮತ್ತು ಹೀಗೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದರಲ್ಲಿ ತನ್ನವರದ್ದೇ ದ್ರೋಹವಿತ್ತು ಎನ್ನುವುದು ಆತಂಕದ ಸಂಗತಿ.

    ಇದನ್ನೂ ಓದಿ: ವಿಶ್ವಗುರು: ಕರೊನಾ ಬಗ್ಗೆ ಇನ್ನೆಷ್ಟು ದಿನ ಹೆದರಿಕೆ?!

    ಸಿಂಧ್ ಮೇಲೆ ಮೊಹಮ್ಮದ್ ಬಿನ್ ಕಾಸಿಮ್ ಆಕ್ರಮಣ ನಡೆಸಿದಾಗ ರಾಜ ದಾಹಿರ್​ನ ಸೇನಾಪತಿಗಳೇ ತಮ್ಮ ಅರಸನ ಪರವಾಗಿ ಹೋರಾಡದೇ ಉಳಿದರು. ಪೃಥ್ವಿರಾಜನ ವಿರುದ್ಧ ಮೊಹಮ್ಮದ್ ಘೊರಿಯನ್ನು ಆಹ್ವಾನಿಸಿ ಆತನ ಸೋಲಿಗೆ ಕಾರಣನಾದವ ಜಯಚಂದ. ಹಿಂದೂಗಳ ಮುಕ್ತಿಗಾಗಿ ಶಿವಾಜಿ ಹೋರಾಡುತ್ತಿದ್ದಾಗ ಮೊಘಲ್ ಚಕ್ರವರ್ತಿಗಳ ಪರವಾಗಿ ಯುದ್ಧ ಮಾಡುತ್ತಿದ್ದವರು ಮರಾಠ ಮತ್ತು ರಜಪೂತ ಸರದಾರರೇ. ಸಿಖ್ ಅರಸರ ನಾಶಕ್ಕಾಗಿ ಬ್ರಿಟಿಷರು ಪ್ರಯತ್ನದಲ್ಲಿದ್ದಾಗ ಸಿಖ್ಖರ ಪ್ರಮುಖ ಸೇನಾಪತಿ ಗುಲಾಬ್ ಸಿಂಗ್ ಸಾಮ್ರಾಜ್ಯದ ರಕ್ಷಣೆಗೆ ಧಾವಿಸದೆ ಯುದ್ಧದಿಂದ ದೂರ ಉಳಿದ. ಈ ಚರಿತ್ರೆ ಮರುಕಳಿಸಬಹುದೇ ಎಂಬುದೇ ನನಗಿರುವ ಕಳವಳ! ಇದಕ್ಕೆ ಕಾರಣ ನಮ್ಮ ನಮ್ಮೊಳಗಿರುವ ಜಾತಿ-ಪಂಥಗಳ ಹಳೆಯ ದ್ವೇಷವಷ್ಟೇ ಅಲ್ಲ, ಈಗ ಅವುಗಳ ಜೊತೆ ಕೂಡಿರುವ ವಿಭಿನ್ನ ಪರಸ್ಪರ ದ್ವೇಷಿಸುವ ರಾಜಕೀಯ ಪಕ್ಷಗಳು ಸಹ. ಭಾರತೀಯ ಜನಸಮುದಾಯಕ್ಕೆ ಮುಖ್ಯವಾದದ್ದು ದೇಶವೇ ಅಥವಾ ಪಕ್ಷವೇ? ಪಕ್ಷಗಳು ರಾಜಕೀಯ ಸಿದ್ಧಾಂತವನ್ನೇ ದೇಶಕ್ಕಿಂತ ಹೆಚ್ಚು ಮಾಡಿಕೊಂಡಲ್ಲಿ ಪ್ರಾಯಶಃ ಸ್ವಾತಂತ್ರ್ಯ ಪುನಃ ಕಳೆದುಹೋದೀತು! ನಮ್ಮ ರಕ್ತದ ಕೊನೆಯ ಹನಿಯಿರುವವರೆಗೂ ಸ್ವಾತಂತ್ರ್ಯದ ರಕ್ಷಣೆಗೆ ನಾವು ಸಂಕಲ್ಪ ತೊಡಬೇಕಾಗಿದೆ’.

    ಇದನ್ನೂ ಓದಿ: ವಿಶ್ವಗುರು: ‘ಗೋವು ಉಳಿಸಿ’ ಹಿಂದೂಗಳಿಗೆ ಪಾಠ?!

    ತಮಗೆ ವಹಿಸಿದ ಕೆಲಸದಲ್ಲಿ ಇಷ್ಟು ದೂರದೃಷ್ಟಿ, ಜೊತೆಗೆ ಖಡಕ್ಕುತನ ಮಹಾನಾಯಕನೊಬ್ಬನಿಗೆ ಮಾತ್ರ ಇರಲು ಸಾಧ್ಯ. ಅಂಬೇಡ್ಕರರಿಗೆ ಅವೆಲ್ಲವೂ ಇತ್ತು. ಆದರೆ ಅವರು ಸಂವಿಧಾನ ಸಮಿತಿಯನ್ನು ಸೇರಲು ಒಪ್ಪಿಕೊಂಡಾಗ ಅವರ ಮನಸ್ಸಿನಲ್ಲಿದ್ದುದು ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು ಎನ್ನುವುದು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಅವರೇ ಇಡಿಯ ಸಮಿತಿಯ ನೇತೃತ್ವ ವಹಿಸಬೇಕಾಗಿ ಬಂದದ್ದು ಒಂದು ಅಚ್ಚರಿಯ ಪ್ರಸಂಗ. ಕರಡು ಸಮಿತಿಯ ಸಭೆಗಳು ಹಿಂದೆಯೇ ಆರಂಭವಾಗಿತ್ತಾದರೂ ಅದರ ಪ್ರಾರೂಪ ರಚನೆ 1947ರ ಆರಂಭದಲ್ಲಷ್ಟೇ ಶುರುವಾಗಿದ್ದು. ಸ್ವಾತಂತ್ರ್ಯಕ್ಕೆ ಕೆಲವೇ ದಿನಗಳು ಬಾಕಿಯಿದ್ದಾಗ ಪಂಡಿತ್ ಜವಾಹರ್​ಲಾಲ್ ನೆಹರು ಗಾಂಧೀಜಿಯವರನ್ನು ಭೇಟಿಯಾಗಿ ಸಂವಿಧಾನ ರಚನೆಯ ವೇಗ ಬಲುಕಡಿಮೆ ಇದೆ ಎಂಬುದನ್ನು ಅವರಿಗೆ ವಿವರಿಸಿ ಅದಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸಬೇಕಲ್ಲ ಎಂದು ಕೇಳಿಕೊಂಡರು. ನೆಹರು ತಲೆಯಲ್ಲಿ ಪ್ರೊಫೆಸರ್ ವೋರ್ ಜೆನ್ನಿಂಗ್ಸ್ ಹೆಸರು ಓಡುತ್ತಿತ್ತು. ಗಾಂಧೀಜಿಯವರ ಎದುರಿಗೆ ಲಜ್ಜೆಬಿಟ್ಟು ಇದನ್ನು ಹೇಳಿದರೂ ಕೂಡ. ಗಾಂಧೀಜಿ ತಡಮಾಡಲಿಲ್ಲ. ‘ವಿದೇಶಿಗರನ್ನೆಲ್ಲ ಹೊರಗಟ್ಟುತ್ತಿರುವಾಗ ಈ ಕೆಲಸಕ್ಕೆ ವಿದೇಶಿಗನೇಕೆ?’ ಎಂದರು. ಮತ್ತು ಸಂವಿಧಾನ ತಜ್ಞರೇ ಭಾರತದಲ್ಲಿಲ್ಲ ಎಂಬುದನ್ನು ಜಗತ್ತು ಮುಂದಿನ ದಿನಗಳಲ್ಲಿ ಹೇಗೆ ಆಡಿಕೊಳ್ಳಬಹುದು ಎಂಬುದನ್ನು ಸೂಚ್ಯವಾಗಿ ವಿವರಿಸಿದರು.

    ಇದನ್ನೂ ಓದಿ: ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

    ಹಾಗಂತ ಪರಿಹಾರ ಸುಲಭದ್ದಾಗಿರಲಿಲ್ಲ. ಸಮಯ ತುಂಬ ಕಡಿಮೆಯಿತ್ತು. ಅಷ್ಟರೊಳಗೆ ಪ್ರಕ್ರಿಯೆಯನ್ನು ಮುಗಿಸಿ ಸಮರ್ಥವಾದ ಸಂವಿಧಾನವೊಂದನ್ನು ಪ್ರಸ್ತುತಪಡಿಸಲೇಬೇಕಿತ್ತು. ಗಾಂಧೀಜಿ ಅಷ್ಟೇ ಸ್ಪಷ್ಟವಾಗಿದ್ದರು. ಈ ಕೆಲಸಕ್ಕೆ ಡಾ.ಅಂಬೇಡ್ಕರರೇ ಸೂಕ್ತವೆಂದು ಸೂಚಿಸಿದರು. ನೆಹರು ಒಲ್ಲದ ಮನಸ್ಸಿನಿಂದಲೇ ಒಪ್ಪಬೇಕಾಯ್ತು. ಗಾಂಧೀಜಿ ಪ್ರಭಾವದಿಂದಲೇ ಮುಂದೆ ಅಂಬೇಡ್ಕರರನ್ನು ಕಾನೂನು ಸಚಿವರನ್ನಾಗಿಯೂ ಮಾಡಲಾಯ್ತು. ಅಧಿಕಾರ ಸ್ವೀಕರಿಸಿದ ನಂತರ ಅಂಬೇಡ್ಕರರು ಹಳೆಯ ಎಲ್ಲ ಕಡತಗಳನ್ನು ಮರು ಪರಿಶೀಲಿಸಿದರು, ಅಗತ್ಯವಿದ್ದೆಡೆ ಸ್ವರೂಪವನ್ನು ತಿದ್ದಿದರು, ಕೆಲವೆಡೆ ಪೂರ್ಣ ಬದಲಾಯಿಸಿದರು. ಹಾಗೆ ಬದಲಾಯಿಸಿದ ಒಂದು ಕಾನೂನು ಚುನಾವಣೆಗಳಿಗೆ ಸಂಬಂಧಿಸಿದಂತೆ ಇತ್ತು. ಮೂಲತಃ ಆಟಿರ್ಕಲ್ 289 ಎಂದು ಕರೆಯಲ್ಪಡುವ ಈ ಕಾನೂನು ಅಂಬೇಡ್ಕರರ ಪ್ರವೇಶದಿಂದಾಗಿ ಆರ್ಟಿಕಲ್ 324 ಎಂದಾಯ್ತು. ಅಂಬೇಡ್ಕರರು ಇದನ್ನು ತಿದ್ದುವ ಮುನ್ನ ಚುನಾವಣಾ ಪ್ರಕ್ರಿಯೆ ಕಲ್ಪನೆ ಹೇಗಿತ್ತು ಗೊತ್ತೇನು? ‘ಕೇಂದ್ರದ ಚುನಾವಣೆಗಳನ್ನು, ಕೆಳಮನೆ, ಮೇಲ್ಮನೆ ಇವುಗಳನ್ನು ನಡೆಸಲು ಒಂದು ಚುನಾವಣಾ ಆಯೋಗವಾದರೆ, ಪ್ರತಿಯೊಂದು ರಾಜ್ಯಕ್ಕೂ ರಾಜ್ಯಪಾಲರು ಮತ್ತು ರಾಜ್ಯದ ಆಡಳಿತಗಾರರ ಅಧೀನದಲ್ಲಿರುವ ಮತ್ತೊಂದು ಚುನಾವಣಾ ಆಯೋಗವಿರಬೇಕು’ ಎಂದಿತ್ತು. ಅಂಬೇಡ್ಕರ್ ಅದನ್ನು ಒಪ್ಪಲೇ ಇಲ್ಲ. ಅವರು ಎಲ್ಲ ಚುನಾವಣೆಗಳನ್ನು ನಡೆಸುವ ಕೇಂದ್ರೀಯ ಚುನಾವಣಾ ಆಯೋಗವೊಂದರ ಕಲ್ಪನೆಯನ್ನು ಕಟ್ಟಿಕೊಟ್ಟರು ಮತ್ತು ಅದು ಯಾರ ಅಧೀನದಲ್ಲೂ ಇಲ್ಲದಂತೆ, ಅದಕ್ಕೊಂದು ಪ್ರತ್ಯೇಕವಾದ ಸ್ಥಾನಮಾನ ದೊರಕುವಂತೆ ನೋಡಿಕೊಂಡರು.‘

    ಇದನ್ನೂ ಓದಿ: ವಿಶ್ವಗುರು: ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

    ಅಂಬೇಡ್ಕರರ ಈ ದೂರದೃಷ್ಟಿಯ ಕಲ್ಪನೆಯಿಂದಾಗಿಯೇ ಇಂದು ಚುನಾವಣೆಗಳು ಸುಸೂತ್ರವಾಗಿ ನಡೆಯುತ್ತಿರುವುದಲ್ಲದೆ ರಾಜ್ಯವಾಗಲೀ ರಾಷ್ಟ್ರವಾಗಲೀ ಯಾವ ಸರ್ಕಾರಗಳೂ ತಲೆ ಹಾಕಲು ಸಾಧ್ಯವಿಲ್ಲದಂತೆ ಪ್ರತ್ಯೇಕವಾಗಿ ಬಲಾಢ್ಯವಾಗಿ ನಿಂತಿರೋದು. ಬಹುಶಃ ಅಮೆರಿಕದ ಚುನಾವಣೆಯ ಗೊಂದಲಗಳನ್ನು ನಾವು ನೋಡದೇ ಹೋಗಿದ್ದರೆ ಅಂಬೇಡ್ಕರರ ಈ ದೂರದೃಷ್ಟಿಯ ಸಾಮರ್ಥ್ಯ ಅರಿವಿಗೇ ಬರುತ್ತಿರಲಿಲ್ಲ. ಇದಷ್ಟೇ ಅಲ್ಲದೆ, ಅಂಬೇಡ್ಕರರನ್ನು ಈಗಲೂ ಅಧ್ಯಯನ ಮಾಡುತ್ತ ಹೋದಂತೆ ಅವರು ಕಂಡ ಕನಸುಗಳು ಇಂದು ಅದೆಷ್ಟು ಅಗತ್ಯವಿದ್ದವು ಎಂದು ಅರಿವಾಗುತ್ತದೆ. ಎಲ್ಲೆಲ್ಲಿ ಅವರ ಮಾತುಗಳನ್ನು ಕೇಳುವಲ್ಲಿ ನಾವು ಸೋತೆವೊ ಅಲ್ಲಲ್ಲಿ ಇಂದೂ ಸಂಕಟವನ್ನು ಅನುಭವಿಸುತ್ತಿದ್ದೇವಲ್ಲದೆ ಭಾರತ ವಿರೋಧಿ ಚಟುವಟಿಕೆಗಳನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಫೆಡರಲ್ ಸ್ಟ್ರಕ್ಚರ್​ನ ವಿಚಾರ ಬಂದಾಗ ಅಂಬೇಡ್ಕರರದು ತುಂಬ ಸ್ಪಷ್ಟವಾದ ಆಲೋಚನೆಯಾಗಿತ್ತು ಮತ್ತು ಅದರಷ್ಟೇ ಗಂಭೀರವಾಗಿ ಅವರು ಭಾಷಾವಾರು ಪ್ರಾಂತ ರಚನೆ ಸಂದರ್ಭದಲ್ಲೂ ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಈ ಕುರಿತಂತೆ ಮಾತನಾಡುತ್ತ ಭಾರತದ ಜನಸಂಖ್ಯಾ ಸರ್ವೆಕ್ಷಣೆ ಸಮರ್ಪಕವಲ್ಲ ಎಂದು ಅವರು ಹೇಳುತ್ತಿದ್ದರು. ‘ಜನಗಣತಿ ವರದಿಯಿಂದ ಹಿಂದೂಗಳು, ಮುಸಲ್ಮಾನರು, ಕ್ರೖೆಸ್ತರು ಎಷ್ಟಿದ್ದಾರೆಂದು ಗೊತ್ತಾಗುವುದರೊಟ್ಟಿಗೆ ಅಸ್ಪೃಶ್ಯರೆಷ್ಟಿದ್ದಾರೆ, ಮತಗಳೆಷ್ಟಿವೆ ಎಂಬ ಲೆಕ್ಕವಷ್ಟೇ ತಿಳಿದುಬರುತ್ತದೆ.

    ಇದನ್ನೂ ಓದಿ: ವಿಶ್ವಗುರು ಅಂಕಣ: ಅಧಿಕಾರಕ್ಕಾಗಿ ಕಾದಾಡುವ ರಣಹದ್ದುಗಳು !

    ವಾಸ್ತವವಾಗಿ ನಮಗೆ ತಿಳಿಯಬೇಕಾದ್ದು ಭಾಷಾ ಪ್ರದೇಶಗಳಲ್ಲಿ ಜಾತಿವಾರು ಸಂಖ್ಯೆ’ ಎಂಬುದು ಅವರ ಅಭಿಪ್ರಾಯವಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಪ್ರತಿ ಭಾಷಾವಾರು ಕ್ಷೇತ್ರಗಳಲ್ಲಿ ಯಾವುದೋ ಒಂದೆರಡು ಜಾತಿಯವರು ಬಹುಸಂಖ್ಯಾತರಾಗಿದ್ದರೆ ಉಳಿದವರು ದ್ವಿತೀಯ ದರ್ಜೆಯವರಾಗಿಯೇ ಇದ್ದುಬಿಡುತ್ತಾರೆ. ಇದಕ್ಕೆ ಉದಾಹರಣೆಯಾಗಿ ಪಂಜಾಬಿನಲ್ಲಿ ಪ್ರಮುಖವಾಗಿರುವ ಜಾಟರೆದುರು ದಲಿತರು ಎರಡನೆಯ ದರ್ಜೆಯವರಾಗಿರುವುದನ್ನು, ತೆಲುಗು ಭಾಷಾ ಪ್ರದೇಶದಲ್ಲಿ ರೆಡ್ಡಿ ಮತ್ತು ಕಮ್ಮಾಗಳಡಿಯಲ್ಲಿ ಇತರರೆಲ್ಲರೂ ಅವಲಂಬಿತವಾಗಿರುವುದನ್ನು ಅವರು ತೋರಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಮರಾಠರ ಮರ್ಜಿಗನುಗುಣವಾಗಿ ಬ್ರಾಹ್ಮಣರು, ಗುಜರ್, ಕೋಲಿಗಳು ಬದುಕಬೇಕಾಗುತ್ತದೆ ಎಂಬುದನ್ನು ಅವರು ಮುಲಾಜಿಲ್ಲದೆ ವಿವರಿಸುತ್ತಿದ್ದರು. ಗಾಂಧೀಜಿ ಹತ್ಯೆ ನಂತರ ಮರಾಠರು, ಬ್ರಾಹ್ಮಣರು-ಬನಿಯಾಗಳ ಮೇಲೆ ನಡೆಸಿದ ಹಿಂಸೆಯಿಂದ ಅವರೆಲ್ಲ ಹಳ್ಳಿಗಳನ್ನು ಬಿಟ್ಟು ಓಡಿಹೋದ ಮೇಲೆ ಈಗ ಮರಾಠರ ದೌರ್ಜನ್ಯ ಸಹಿಸಿಕೊಳ್ಳಲು ಉಳಿದಿರುವುದು ಅಸ್ಪ ೃ್ಯರು ಮಾತ್ರ ಎಂದವರು ಹೇಳಲು ಹಿಂಜರಿಯುತ್ತಿರಲಿಲ್ಲ. ಒಟ್ಟಾರೆ ಅವರ ವಾದ ಇಷ್ಟೇ. ಭಾಷಾವಾರು ರಾಜ್ಯಗಳು ನಿರ್ವಣಗೊಂಡಲ್ಲಿ ಸಣ್ಣ ಜಾತಿ ಗುಂಪುಗಳು ವಿಶ್ವಾಸದಿಂದ ಯಾರತ್ತ ನೋಡಬೇಕು ಎನ್ನೋದು. ಅಂಥ ಸಣ್ಣ ಜಾತಿಯವರು ವಿಧಾನಸಭೆಗೋ ಲೋಕಸಭೆಗೋ ಆಯ್ಕೆಯಾಗೋದು, ತಮ್ಮ ಆರ್ಥಿಕ ಏಳ್ಗೆಗಾಗಿ ಒತ್ತಡ ಹೇರುವುದು ಸಾಧ್ಯವೇ? ಯೋಚಿಸಬೇಕಾದ ಪ್ರಶ್ನೆಯೇ. ಭಾಷಾವಾರು ಪ್ರಾಂತ್ಯ ರಚನೆಯೆಂದರೆ ಅಲ್ಲಲ್ಲಿನ ಬಹುಸಂಖ್ಯಾತರ ಕೈಗಳಿಗೆ ಸ್ವರಾಜ್ಯವನ್ನು ಒಪ್ಪಿಸಿದಂತೆಯೇ. ಕಾಲಕ್ರಮದಲ್ಲಿ ಈ ಪ್ರಾಂತಗಳು ಜಾಟ ರಾಜ್ಯ, ರೆಡ್ಡಿ ರಾಜ್ಯ, ಮರಾಠ ರಾಜ್ಯ ಎಂದೂ ಆಗಬಹುದೇನೋ ಎಂದು ಅವರು ಹೇಳುತ್ತಿದ್ದರು! ಅವರ ದೂರದೃಷ್ಟಿಯ ಮಾತುಗಳು ಇಂದು ಕರ್ನಾಟಕದಲ್ಲೂ ಅನುಭವಕ್ಕೆ ಬರುತ್ತಿದೆ. ಸಮಾನತೆಯ ಒಟ್ಟಾರೆ ಪರಿಕಲ್ಪನೆಗಳು ಉಧ್ವಸ್ತಗೊಂಡುಬಿಟ್ಟಿವೆ. ಅಂಬೇಡ್ಕರರ ಚಿಂತನೆಯನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲಿ ಜೀರ್ಣಿಸಿಕೊಳ್ಳಲಾಗಿರಲಿಲ್ಲ. ಆದರೆ ಇಂದು ಅದು ನಿಸ್ಸಂಶಯವಾಗಿ ದೇಶವನ್ನೇ ಕಾಡುತ್ತಿದೆ!

    ಹೇಳಿದೆನಲ್ಲ, ದಿನ ಕಳೆದಂತೆ ಡಾ.ಬಾಬಾಸಾಹೇಬ್ ಅಂಬೇಡ್ಕರರು ಭೀಮಕಾಯರಾಗಿಯೇ ಕಾಣುತ್ತಿದ್ದಾರೆ. ಹಿಮಾಲಯದೆತ್ತರಕ್ಕೆ ಬೆಳೆದು ನಿಂತಂತೆ ಭಾಸವಾಗುತ್ತಿದ್ದಾರೆ. ಅಂದಹಾಗೆ ನಿನ್ನೆ ಅವರ ಸ್ಮೃತಿದಿವಸ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಗೆಲುವು ಅಸಾಧ್ಯವಲ್ಲ, ಆದರೆ ಶ್ರಮ ಹಾಕಬೇಕಲ್ಲ!; ಚಕ್ರವರ್ತಿ ಸೂಲಿಬೆಲೆ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts