More

    ಗ್ರಾಪಂ ಚುನಾವಣೆ ಪ್ರಕ್ರಿಯೆ ಶುರು

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಹಳ್ಳಿಗಳ ವಿಧಾನಸಭೆಗಳೆಂದೇ ಗುರುತಿಸಲಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.
    ಗ್ರಾಮ ಪಂಚಾಯಿತಿ ಕ್ಷೇತ್ರವಾರು ಮತದಾರರ ಪಟ್ಟಿಗಳ ಮ್ಯಾಟ್ರಿಕ್ಸ್ ತಯಾರಿಸುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶಿಸಿದ್ದು, ಇದಕ್ಕಾಗಿ ವೇಳಾಪಟ್ಟಿ ನಿಗದಿಪಡಿಸಿದೆ.

    ವೇಳಾಪಟ್ಟಿಯಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸುವ ಪ್ರಕ್ರಿಯೆಗೆ ಮಾರ್ಚ್ 9 ರಂದು ಚಾಲನೆ ದೊರೆತ್ತಿದ್ದು, ಏಪ್ರಿಲ್ 20ರಂದು ಅಂತಿಮ ಪಟ್ಟಿ ಬಿಡುಗಡೆಗೊಳ್ಳಲಿದೆ. ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯ ಡಾಟಾವನ್ನು ಅಳವಡಿಸಿಕೊಂಡು ಭಾವಚಿತ್ರವಿರುವ ಮತದಾರರ ಪಟ್ಟಿ ತಯಾರಾಗಲಿದೆ.

    ಮತದಾರರ ನೋಂದಣಿ: ಮತದಾರರ ಪಟ್ಟಿಗೆ ಹೆಸರು ನೋಂದಣಿ ಕಾರ್ಯ ಚಾಲ್ತಿಯಲ್ಲಿದ್ದು, ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸಿದ ಬಳಿಕವೂ ಎರಡು ದಿನ ತನಕ ಸೇರ್ಪಡೆಗೆ ಅವಕಾಶವಿದೆ. ಸಂಬಂಧಪಟ್ಟ ಅರ್ಜಿ ನಮೂನೆ ಅಥವಾ ಆನ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶವಿದೆ. ವಿವಿಧ ರಾಜಕೀಯ ಪಕ್ಷಗಳು ಪ್ರತ್ಯೇಕ ತಂಡದೊಂದಿಗೆ ನೋಂದಣಿ ಕಾರ್ಯದಲ್ಲಿ ತೊಡಗಿವೆ.

    ಕಾಯ್ದೆಗೆ ತಿದ್ದುಪಡಿ ಪ್ರಯತ್ನ: ಜಾರಿಯಲ್ಲಿರುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಹಾಗೂ ಮೀಸಲಾತಿಯನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಶೀಘ್ರ ಈ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು ಐದು ವರ್ಷ ಬದಲು 30 ತಿಂಗಳಿಗೆ ಸೀಮಿತಗೊಳಿಸುವುದು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಈಗ ಇರುವ 10 ವರ್ಷಗಳ(ಎರಡು ಅವಧಿ) ಮೀಸಲಾತಿ ಅವಧಿಯನ್ನು ಐದು ವರ್ಷಕ್ಕೆ (ಒಂದೇ ಅವಧಿ) ಮೀಸಲಿಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇವೆರಡರಲ್ಲಿ ಅಧ್ಯಕ್ಷರು-ಉಪಾಧ್ಯಕ್ಷರ ಅವಧಿಯನ್ನು ಮೊಟಕುಗೊಳಿಸುವ ಬಗ್ಗೆ ಹೆಚ್ಚು ವಿರೋಧ ಸಾಧ್ಯತೆ ಕಂಡುಬಂದಿದೆ.

    ಯಾವಾಗ ಚುನಾವಣೆ?: 2015, ಜೂನ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆದಿದ್ದು, ಅಧಿಕಾರ ಅವಧಿ ಪೂರ್ಣಗೊಳ್ಳುವ ಮೊದಲು ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಚುನಾವಣಾ ಆಯೋಗದ ಅಧಿಸೂಚನೆ ನಿರೀಕ್ಷಿಸಲಾಗಿದೆ.

    ಮತದಾರರ ಪಟ್ಟಿಗೆ ಸೇರ್ಪಡೆ ನಿರಂತರ ಪ್ರಕ್ರಿಯೆ. ಚುನಾವಣೆ ಅಧಿಸೂಚನೆಯಾಗಿ ಎರಡು ದಿನ ತನಕ ಅರ್ಹ ಮತದಾರರು ಸೇರ್ಪಡೆಯಾಗಬಹುದು. ಏಪ್ರಿಲ್ ಎರಡನೇ ವಾರದ ಬಳಿಕ ಚುನಾವಣೆ ಅಧಿಸೂಚನೆ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಬಹುದು.
    – ಮಾಣಿಕ್ಯ ಎಂ. ತಹಸೀಲ್ದಾರ್(ಚುನಾವಣೆ),ಮಂಗಳೂರು

    ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳ ಅವಧಿಯನ್ನು ಐದು ವರ್ಷ ಬದಲು 30 ತಿಂಗಳಿಗೆ ಸೀಮಿತಗೊಳಿಸುವ ಪ್ರಯತ್ನ ಸರಿಯಲ್ಲ. ಇದು ಪಂಚಾಯಿತಿರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾದೀತು. ಇಂತಹ ಪ್ರಯತ್ನದ ಬಗ್ಗೆ ಸರ್ಕಾರದ ಮರು ಚಿಂತನೆ ಅಗತ್ಯ. ಅವಧಿ ಮೊಟಕುಗೊಳ್ಳುವುದರಿಂದ ಅಧಿಕಾರ ಪಡೆದವರು ಅಭಿವೃದ್ಧಿ ಯೋಜನೆಗಳನ್ನು ಯೋಜಿತ ರೀತಿಯಲ್ಲಿ ನಡೆಸಲು ತೊಡಕಾಗಬಹುದು.
    – ಶೀನ ಶೆಟ್ಟಿ ಮಾಜಿ ಒಂಬುಡ್ಸ್‌ಮೆನ್, ನರೇಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts