More

    ರೈತರ ಸಮಸ್ಯೆ ಸ್ಪಂದಿಸುವವರಿಗೆ ಬೆಂಬಲ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿಕೆ

    ಮಂಡ್ಯ: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷಕ್ಕೆ ಈ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರಣಾಳಿಕೆ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ರೈತರಿಗೆ ಸುಳ್ಳು ಭರವಸೆ ನೀಡುತ್ತಾ ಇಲ್ಲಿಯವರೆಗೂ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಮೋಸ ಮಾಡುತ್ತಾ ಬಂದಿವೆ. ಬೆಂಗಳೂರಿನಲ್ಲಿ ಈಗಾಗಲೇ ರೈತರ ಸಮಸ್ಯೆಗಳನ್ನೊಳಗೊಂಡ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಅದರ ಬಗ್ಗೆ ಸಂವಾದ ನಡೆಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್, ಎಎಪಿ ಪಕ್ಷಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್, ಜೆಡಿಎಸ್, ಎಎಪಿ ಪಕ್ಷದ ಮುಖಂಡರು ಭಾಗವಹಿಸಿ ನಮ್ಮ ಬೇಡಿಕೆಯ ಪೈಕಿ ಕೆಲವು ಅಂಶಗಳನ್ನು ತಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಮುಂದೆ ಸರ್ಕಾರ ಬಂದರೆ ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
    ಸಂವಾದದಲ್ಲಿ ಬಿಜೆಪಿ ಪಕ್ಷದಿಂದ ಯಾವುದೇ ಮುಖಂಡರು ಭಾಗವಹಿಸಿರಲಿಲ್ಲ. ಅವರಿಗೆ ರೈತರ ಮತ ಬೇಕಾಗಿಲ್ಲ ಎನ್ನಿಸುತ್ತಿದೆ. ಅದರ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು. ಸ್ವಾಮಿನಾಥನ್ ವರದಿ ಜಾರಿಗೆ ತರುವ ಬಗ್ಗೆ ಕಳೆದ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಸುಪ್ರೀಂಕೋರ್ಟ್‌ಗೆ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದೇಳುವ ಮೂಲಕ ದೇಶದ ರೈತರಿಗೆ ಮೋಸ ಮಾಡಿದರು. ಅಲ್ಲದೆ, ರೈತರ ಮೇಲೆ ಜಿಎಸ್‌ಟಿ ವಿಧಿಸಿ ಸಂಕಷ್ಟಕ್ಕೆ ತಳ್ಳಿದರು. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕೂಡ ಸಿಗುತ್ತಿಲ್ಲ. ಕೇವಲ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
    ಇದುವರೆಗೂ ಆಳಿದ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತಾ, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಈ ಬಾರಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ದಾವಣಗೆರೆಯಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂಬುದನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
    ಪದಾಧಿಕಾರಿಗಳಾದ ದೇವರಾಜ್, ಸಾತನೂರು ವೇಣುಗೋಪಾಲ್, ತುಂಬಕೆರೆ ಮಂಜುನಾಥ್, ಕನ್ನಲಿ ದೇವರಾಜ್, ಶಿವಳ್ಳಿ ಲಕ್ಷ್ಮಣ್, ಹುಲಿವಾನ ಬಾಲರಾಜ್, ಬಾಣಸವಾಡಿ ಪ್ರಸನ್ನ, ಬನ್ನೂರು ಶ್ರೀನಿವಾಸ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts