More

    ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳಿಗೆ ನಾನಾ ಸವಾಲು

    ಬೆಂಗಳೂರು:
    ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋಗುತ್ತಿರುವ ಅಭ್ಯರ್ಥಿಗಳಿಗೆ ನಾನಾ ತರದ ಸವಾಲುಗಳು ಎದುರಾಗುತ್ತಿವೆ.
    ಮೊದಲ ಹಂತದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನಿಂದ ಓಡಾಟ ನಡೆಸುತ್ತಿದ್ದಾರೆ. ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮುಂದಾಗಿರುವ ಅಭ್ಯರ್ಥಿಗಳು ಪ್ರಚಾರದ ಸಿದ್ಧತೆಯಲ್ಲಿದ್ದಾರೆ.
    ಮತದಾರರ ಮುಂದೆ ಹೋಗುತ್ತಿರುವ ಅಭ್ಯರ್ಥಿಗಳಿಗೆ ದಿನ ನಿತ್ಯ ಆಯಾ ಭಾಗದ ಮುಖಂಡರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಸವಾಲಾಗಿದೆ. ನಾನಾ ಕಾರಣಕ್ಕೆ ಉಂಟಾಗಿರುವ ಸ್ಥಳೀಯ ಅಸಮಾಧಾನಗಳನ್ನು ನಿವಾರಣೆ ಮಾಡಿಕೊಳ್ಳಬೇಕಾಗಿರುವ ಜವಬ್ದಾರಿಯೂ ಅಭ್ಯರ್ಥಿಗಳ ಹೆಗಲಿಗೆ ಬಿದ್ದಿದೆ.
    ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಸರಿಪಡಿಸಿದರೂ, ಕೆಲ ಮುಖಂಡರು ಹಣಕ್ಕೆ ಬೇಡಿಕೆ ಇಟ್ಟು ಡಿಮ್ಯಾಂಡ್ ಮಾಡುತ್ತಿರುವುದು ಅಭ್ಯರ್ಥಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ನಮಗಿಷ್ಟು ಹಣ ಕೊಟ್ಟರೆ ನಾವು ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತೇವೆ. ಇಲ್ಲದಿದ್ದರೆ ನಮ್ಮ ಪಾಡಿಗೆ ಇರುತ್ತೇವೆ ಎಂದು ಹೇಳುತ್ತಿರುವುದು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿದಂತೆ ಮೂರು ರಾಜಕೀಯ ಪಕ್ಷಗಳಿಗೆ ತಲೆನೋವು ತಂದಿದೆ.
    ವಿಧಾನಸಭೆ ಚುನಾವಣೆ ಸಂದರ್ಭವೇ ಬೇರೆ. ಲೋಕಸಭಾ ಚುನಾವಣೆಯಲ್ಲಿ ಮೊದಲು ಆಯಾ ವಿಧಾನಸಭಾ ಕ್ಷೇತ್ರದ ಮುಖಂಡರನ್ನು ಅಭ್ಯರ್ಥಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಎಳೆಂಟು ವಿಧಾನಸಭಾ ಕ್ಷೇತ್ರಗಳು ಬರುವುದರಿಂದ ಅವುಗಳನ್ನು ನಿಭಾಯಿಸುವುದು ಎಲ್ಲಾ ಪಕ್ಷಗಳಿಗೆ ಸವಾಲಾಗಿದೆ.
    ಬೂತ್ ಮಟ್ಟದಲ್ಲಿ ನಮಗೆ ಸಮಸ್ಯೆ ಅಲ್ಲ. ಎಲ್ಲಾ ಪಕ್ಷಗಳು ಬೂತ್ ಹಂತದಲ್ಲಿ ಏನೇನು ಮಾಡಬೇಕು ಅದನ್ನು ಮಾಡಿಯೇ ತೀರುತ್ತೇವೆ. ಆದರೆ, ತಾಲೂಕು, ಹೋಬಳಿ ಹಂತದ ಮುಖಂಡರು ಒಂದೆಡೆಯಾದರೆ, ಮಾಜಿ ಶಾಸಕರು, ಮಾಜಿ ಸಚಿವರನ್ನು ಆರ್ಥಿಕವಾಗಿ ಸಂಬಾಳಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಪ್ರಚಾರದಲ್ಲಿರುವ ಅಭ್ಯರ್ಥಿಗಳು ತಮ್ಮ ಅನುಭವವನ್ನು ಆಪ್ತರ ಬಳಿ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
    ಸಾರ್ವಜನಿಕ ಸಭೆ ನಡೆಸಲು ಜನರನ್ನು ಕರೆ ತರುವುದು ತ್ರಾಸದಾಯಕವಾಗಿದೆ. ಆ ಪಕ್ಷದವರು ಇಷ್ಟು ಕೊಡುತ್ತಿದ್ದಾರೆ. ನೀವು ಯಾಕೆ ಇಷ್ಟು ಕಡಿಮೆ ಎಂದು ಪ್ರಚಾರ ಸಭೆಗೆ ಬರುವ ಜನರೇ ಕೇಳಲು ಮುಂದಾಗಿರುವುದು ಸಂಘಟಕರಿಗೆ ಮುಜುಗರ ತಂದಿದೆ.
    ಲೋಕಸಭೆ ಚುನಾವಣೆ ಮೊದಲಿನಂತಿಲ್ಲ. ಇದನ್ನು ನಿಭಾಯಿಸಿಕೊಂಡು ಹೋಗುವುದು ದೊಡ್ಡ ಹೊರೆಯಾಗುತ್ತಿದೆ. ಹಣದ ಅವರ ನಿರೀಕ್ಷೆಯನ್ನು ನಾವು ತಲುಪುವುದು ಕಷ್ಟವಾಗಿದೆ ಎಂದು ಅಭ್ಯರ್ಥಿಯೊಬ್ಬರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಇದು ಬಹುತೇಕ ಎಲ್ಲ ಅಭ್ಯರ್ಥಿಗಳಿಗೂ ಆಗುತ್ತಿರುವ ಅನುಭವವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts