More

    ಮೀಸಲು ಕ್ಷೇತ್ರದ ಚುಕ್ಕಾಣಿ ಹಿಡಿಯೋದ್ಯಾರು?: ಮಳವಳ್ಳಿಯಲ್ಲಿ ತ್ರಿಕೋನ ಸ್ಪರ್ಧೆ

    ಮಂಡ್ಯ: ಮೀಸಲು ಕ್ಷೇತ್ರ ಮಳವಳ್ಳಿಯಲ್ಲಿ ಚುನಾವಣಾ ಕಣ ರಂಗೇರಿದೆ. ಅಂತೆಯೇ ಮೂವರ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಇತ್ತು. ಈ ಬಾರಿ ಬಿಜೆಪಿ ಕೂಡ ಕಮಾಲ್ ಮಾಡಲು ಸಜ್ಜಾಗಿದೆ.
    2004ರಿಂದ ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಮತ್ತು ಜೆಡಿಎಸ್‌ನ ಡಾ.ಕೆ.ಅನ್ನದಾನಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಈ ಪೈಕಿ ಇಬ್ಬರು ತಲಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಬಿಜೆಪಿ ಮುನಿರಾಜು ಜೆಡಿಎಸ್, ಕಾಂಗ್ರೆಸ್‌ಗೆ ಟಕ್ಕರ್ ಕೊಡುವಷ್ಟು ಭರವಸೆ ಮೂಡಿಸುತ್ತಿದ್ದಾರೆ.
    ಕ್ಷೇತ್ರದ ಜನರು 16 ಚುನಾವಣೆಯನ್ನು ಕಂಡಿದ್ದಾರೆ. ಅಂತೆಯೇ ಈ ಬಾರಿ 14 ಹುರಿಯಾಳುಗಳು ಅಖಾಡಲ್ಲಿದ್ದಾರೆ. ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳ ಜತೆಗೆ ಬಿಎಸ್ಪಿಯಿಂದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಆಪ್‌ನಿಂದ ಬಿ.ಸಿ.ಮಹದೇವಸ್ವಾಮಿ, ಭಾರತೀಯ ಬೆಳಕು ಪಾರ್ಟಿಯಿಂದ ಸಿ.ಎಂ.ನಾಗರಾಜಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಂ.ನಂದೀಶ್‌ಕುಮಾರ್, ಪಕ್ಷೇತರರಾಗಿ ಸಿ.ಅನ್ನದಾನಿ, ಜೆ.ಉಮಾ, ಎಂ.ಎಸ್.ಮಾಧವ್‌ಕಿರಣ್, ಎಂ.ಎಲ್.ಮೋಹನ್‌ಕುಮಾರ್, ಮಂಟ್ಟಲಿಂಗು, ಟಿ.ಎನ್.ಸತೀಶ್‌ಕುಮಾರ್, ಎಚ್.ಬಿ.ಸುಧಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
    ಅನ್ನದಾನಿಗೆ ಎಚ್‌ಡಿಕೆ ಹೆಸರೇ ಶ್ರೀರಕ್ಷೆ: ಆರನೇ ಬಾರಿಗೆ ಸ್ಪರ್ಧೆ ಮಾಡಿರುವ ಡಾ.ಅನ್ನದಾನಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೇ ಶ್ರೀರಕ್ಷೆಯಾಗಿದೆ. ಇದು 2018ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಾಣಲು ಸಾಧ್ಯವಾಗಿತ್ತು. ಎಚ್‌ಡಿಕೆ ಸಿಎಂ ಆಗಬೇಕೆನ್ನುವ ಅಲೆ ನಿರೀಕ್ಷೆಗೂ ಮೀರಿದ ಮತಗಳು ಜೆಡಿಎಸ್‌ಗೆ ಹರಿದು ಬರುವಂತೆ ಮಾಡಿದ್ದವು. ಅತ್ತ ಬಿಜೆಪಿಯ ಸಾಂಪ್ರಾದಾಯಿಕ ಮತಗಳು ದಳದ ಪಾಲಾಗಿದ್ದವು. ಆದರೆ ಈ ಬಾರಿ ಅಂತಹ ಪೂರಕ ವಾತಾವರಣ ಇನ್ನೂ ಸೃಷ್ಟಿಯಾದಂತೆ ಕಂಡುಬರುತ್ತಿಲ್ಲ.
    ಮೈಷುಗರ್ ಕಾರ್ಖಾನೆ ಉಳಿವಿಗೆ ನಡೆಸಿದ ಪಾದಯಾತ್ರೆ ಸೇರಿದಂತೆ ಒಂದಷ್ಟು ಕೆಲಸಗಳು ಅನ್ನದಾನಿ ಅವರ ವರ್ಚಸ್ಸು ಹೆಚ್ಚಿಸಿತ್ತು. ಆದರೆ ಒಂದೂವರೆ ವರ್ಷ ಜೆಡಿಎಸ್ ಸರ್ಕಾರವಿದ್ದರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ ಎನ್ನುವ ಕೊರಗು ಕ್ಷೇತ್ರದಲ್ಲಿ ಕಾಡುತ್ತಿದೆ. ಇದರೊಟ್ಟಿಗೆ ಪಕ್ಷ ಬಿಟ್ಟವರ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ. ಅದರಲ್ಲಿಯೂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಪ್ರಭಾವಿ ಮುಖಂಡರು ಪಕ್ಷದಿಂದ ಹೊರಬಂದು ಶಾಸಕರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. ಇದು ದಳಕ್ಕೆ ಗುಂಪು ಗುಂಪಾಗಿ ಬರುತ್ತಿದ್ದ ಮತಗಳ ವಿಭಜನೆಯಾಗುವಂತೆ ಮಾಡಿದೆ. ಇನ್ನು ಜೆಡಿಎಸ್ ಕಾರ್ಯಕರ್ತರು ವ್ಯವಸ್ಥಿತವಾಗಿ ಚುನಾವಣೆ ಮಾಡುತ್ತಿರುವುದು ಅನ್ನದಾನಿಗೆ ಫ್ಲಸ್ ಆಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಅಕ್ಕಪಕ್ಕದ ಶಾಸಕರಿಂದ ಸಿಕ್ಕ ಬೆಂಬಲ ಈ ಬಾರಿ ಇದ್ದಂತೆ ಕಾಣುತ್ತಿಲ್ಲ. ಆದರೂ ದೇವೇಗೌಡರು, ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದರೆ ಜೆಡಿಎಸ್‌ನ ವರ್ಚಸ್ಸು ಹೆಚ್ಚುವ ಮಾತನ್ನು ತೆಗೆದು ಹಾಕುವಂತಿಲ್ಲ. ಜತೆಗೆ ಕಾಂಗ್ರೆಸ್‌ನಿಂದಲೂ ಹಲವು ಮುಖಂಡರು ದಳಕ್ಕೆ ಸೇರ್ಪಡೆಯಾಗಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
    ಸೋಲಿನಿಂದ ಹೊರಬರುತ್ತಾರಾ ಪಿಎಂಎನ್?: ಕ್ಷೇತ್ರದಿಂದ ಎರಡು ಶಾಸಕರಾಗಿ, ಒಮ್ಮೆ ಸಚಿವರಾಗಿ ಆಯ್ಕೆಯಾಗಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಈ ಬಾರಿ ಚುನಾವಣೆ ಮಹತ್ವದ್ದಾಗಿದೆ. ಸೋಲಿನಿಂದ ಹೊರಬರಲು ಪೂರಕವಾದ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿದೆ. ಒಕ್ಕಲಿಗ ವಿರೋಧಿ, ಪಕ್ಷದ ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎನ್ನುವ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಕಂಡುಬರುತ್ತಿಲ್ಲ.
    ಒಕ್ಕಲಿಗ ಸಮುದಾಯದ ಘಟಾನುಘಟಿ ನಾಯಕರೇ ನರೇಂದ್ರಸ್ವಾಮಿ ಅವರ ಪರವಾಗಿ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಸಮುದಾಯದ ವಿರೋಧಿ ಎನ್ನುವುದು ಕೇವಲ ಆರೋಪವಷ್ಟೇ ಎನ್ನುವ ಸ್ಪಷ್ಟತೆಯನ್ನು ಒಕ್ಕಲಿಗರ ನಾಯಕರು ಹಾಗೂ ಸ್ಥಳೀಯ ಮುಖಂಡರು ತಮ್ಮವರಿಗೆ ಮನವರಿಕೆ ಮಾಡುತ್ತಿದ್ದಾರೆ. ಇದು ನರೇಂದ್ರಸ್ವಾಮಿ ಮೇಲಿನ ಕೋಪವನ್ನು ತಣ್ಣಗೆ ಮಾಡಿದೆ. ಇದರೊಟ್ಟಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಹುದ್ದೆ ಅಲಂಕರಿಸಬಹುದೆನ್ನುವ ಕಾರಣಕ್ಕೆ ಒಕ್ಕಲಿಗ, ಕುರುಬ ಸಮುದಾಯ ಪಿಎಂಎನ್ ಬೆಂಬಲಕ್ಕೆ ನಿಂತಿದೆ. ಅಂತೆಯೇ ದಲಿತ ಸಮುದಾಯದ ಹಿರಿಯ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ಬಲಪಡಿಸಲು ಸಮುದಾಯ ಬೆನ್ನಿಗಿದೆ. ಇದಕ್ಕೆ ಪೂರಕವೆನ್ನುವಂತೆ ಪಟ್ಟಣದಲ್ಲಿ ಆಯೋಜಿಸಿದ್ದ ಸಭೆಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದರು. ಮಾತ್ರವಲ್ಲದೆ ಮಾಜಿ ಸಚಿವ ಬಿ.ಸೋಮಶೇಖರ್ ಬಿಜೆಪಿ ಬಿಟ್ಟು ಹಾಗೂ ವಿಶೇಷವಾಗಿ ಲಿಂಗಾಯತ ಸಮುದಾಯದ ಪ್ರಭಾವಿ, ಪ್ರಥಮ ರಾಜ್ಯಸಭೆ ಸದಸ್ಯ ಎನ್ನುವ ಹೆಗ್ಗಳಿಕೆ ಹೊಂದಿರುವ ಬಿ.ಪಿ.ನಾಗರಾಜಮೂರ್ತಿ ಅವರ ಕುಟುಂಬ ಕಾಂಗ್ರೆಸ್ ಸೇರುವುದು ವರದಾನವಾಗಿದೆ.
    ಪ್ರಮುಖವಾಗಿ ಜೆಡಿಎಸ್‌ನ ಎಂಎಲ್‌ಸಿ ಮರಿತಿಬ್ಬೇಗೌಡ ಕಾಂಗ್ರೆಸ್ ಬೆನ್ನಿಗಿರುವುದು ್ಲಸ್ ಆಗಿದೆ. ದಳಪತಿಗಳ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿರುವ ಗೌಡರು, ವಿಧಾನಸಭಾ ಚುನಾವಣಾ ಅಖಾಡಕ್ಕೆ ನರೇಂದ್ರಸ್ವಾಮಿ ಅವರ ಪರವಾಗಿ ಶೀಘ್ರದಲ್ಲೇ ಇಳಿಯಲಿದ್ದಾರೆ.
    ಮುನಿರಾಜು ಮಾಡ್ತಾರಾ ಕಮಾಲ್?: ವಿರೋಧದ ನಡುವೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಮುನಿರಾಜು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಮಳವಳ್ಳಿಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಅವರು ಜೆಡಿಎಸ್, ಕಾಂಗ್ರೆಸ್‌ಗೆ ಟಕ್ಕರ್ ಕೊಡುವಷ್ಟು ಮಟ್ಟಿಗೆ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಅವರ ಹೆಸರು ಜೋರಾಗಿಯೇ ಕೇಳಿಬರುತ್ತಿದೆ.
    2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುನಿರಾಜು 26397 ಮತಗಳನ್ನು ಪಡೆದು ತಮ್ಮ ಖದರ್ ತೋರಿಸಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮುನಿರಾಜು ಅವರಿಗೆ ಫ್ಲಸ್ ಆಗಿದೆ. ಇನ್ನು ಬಿಜೆಪಿ ಸಾಂಪ್ರಾದಾಯಿಕ ಮತ ಹಾಗೂ ಜೆಡಿಎಸ್, ಕಾಂಗ್ರೆಸ್‌ನ ಅತೃಪ್ತ ಮತಗಳು ವರದಾನವಾಗಿದೆ. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಅವರು, ಹಲವು ವರ್ಷದಿಂದ ಮಳವಳ್ಳಿಯಲ್ಲಿಯೇ ಇದ್ದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದಿತ್ತೆನ್ನುವ ಮಾತಿದೆ. ಅಂತೆಯೇ ಈ ಬಾರಿ ಅಚ್ಚರಿಯ ಫಲಿತಾಂಶ ನೀಡಬೇಕೆನ್ನುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts