More

    ಗ್ರಾಮ ಸಮರ ಇಂದು ಕೊನೇ ಚರಣ

    ಮಂಗಳೂರು/ಉಡುಪಿ: ಗ್ರಾಮ ಪಂಚಾಯಿತಿ ಚುನಾವಣೆಯ ದ್ವಿತೀಯ ಹಂತದಲ್ಲಿ ಡಿ.27ರಂದು ನಡೆಯುವ ಮತದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1500 ಸ್ಥಾನಗಳಿಗೆ ಸ್ಪರ್ಧಿಸಿರುವ 3421 ಅಭ್ಯರ್ಥಿಗಳು ಹಾಗೂ ಉಡುಪಿ ಜಿಲ್ಲೆಯ 1209 ಸ್ಥಾನಗಳಿಗೆ ಸ್ಪರ್ಧಿಸಿರುವ 2708 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ತೀರ್ಮಾನಿಸಲಿದ್ದಾರೆ. ಡಿ.30ರಂದು ಫಲಿತಾಂಶ ಪ್ರಕಟವಾಗಲಿದೆ.
    ದ.ಕ. ಜಿಲ್ಲೆ ಮೊದಲ ಹಂತದ ಚುನಾವಣೆಯಲ್ಲಿ ಮಂಗಳೂರು, ಮೂಡುಬಿದಿರೆ, ಬಂಟ್ವಾಳ ತಾಲೂಕುಗಳ 106 ಗ್ರಾಪಂಗಳ ಪೈಕಿ 1681 ಸ್ಥಾನಗಳಲ್ಲಿ 50 ಅವಿರೋಧ ಆಯ್ಕೆ ನಡೆದು 1631 ಸ್ಥಾನಗಳಿಗೆ 3854 ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡನೇ ಹಂತದಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕುಗಳ 114 ಗ್ರಾಪಂಗಳಲ್ಲಿ 1541 ಕ್ಷೇತ್ರಗಳಿದ್ದು, 41 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಉಳಿದ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದೆ.
    ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಸಿಬ್ಬಂದಿ ಶನಿವಾರ ಮತಗಟ್ಟೆಗಳಿಗೆ ಭೇಟಿ ನೀಡಿ ಮಸ್ಟರಿಂಗ್ ಮುಗಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಚುನಾವಣಾ ವೀಕ್ಷಕ ಶಾಂತರಾಜು ನಿರ್ದಿಷ್ಟ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪೂರ್ವಸಿದ್ಧತೆ ಅವಲೋಕನ ನಡೆಸಿದರು.
    ಉಡುಪಿ ಜಿಲ್ಲೆ ಮೊದಲ ಹಂತದಲ್ಲಿ ಉಡುಪಿ, ಹೆಬ್ರಿ, ಬೈಂದೂರು, ಬ್ರಹ್ಮಾವರ ತಾಲೂಕುಗಳ 67 ಗ್ರಾಪಂಗಳ ಪೈಕಿ 1122 ಸ್ಥಾನಗಳಲ್ಲಿ 63 ಅವಿರೋಧ ಆಯ್ಕೆ ನಡೆದು 1047 ಸ್ಥಾನಗಳಿಗೆ 2349 ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ, ಕಾಪು ತಾಲೂಕುಗಳ 86 ಗ್ರಾಪಂಗಳಿಗೆ ಮತದಾನ ಭಾನುವಾರ ನಡೆಯುತ್ತಿದ್ದು, 4,16,453 ಮಂದಿ ಮತ ಚಲಾಯಿಸಲಿದ್ದಾರೆ.
    ಜಿಲ್ಲಾಧಿಕಾರಿ ಜಿ.ಜಗದೀಶ್ ಕುಂದಾಪುರ, ಕಾಪು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    600 ಪೊಲೀಸರ ನಿಯೋಜನೆ: ಉಡುಪಿ ಜಿಲ್ಲೆಯ ಮತಗಟ್ಟೆಗಳಲ್ಲಿ ಭದ್ರತೆಗೆ ಕೆಎಸ್‌ಆರ್‌ಪಿ 7, ಜಿಲ್ಲಾ ಸಶಸ್ತ್ರ ಪೊಲೀಸ್ 3 ತುಕಡಿ ಸೇರಿದಂತೆ 600ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಅಧಿಕಾರಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಸೂಕ್ಷ್ಮ ಮತಗಟ್ಟೆಗಳಿಗೆ ಸಶಸ್ತ್ರ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿ 86 ಚುನಾವಣಾಧಿಕಾರಿಗಳನ್ನು, 92 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 3 ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts