More

    ಪ್ರಜಾಪ್ರಭುತ್ವ ಬಲಗೊಳಿಸಲು ಮತದಾನ ಮುಖ್ಯ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ 

    ಮಂಡ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣೆ ಸಂಬಂಧ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಗೌಪ್ಯ ಮತದಾನ ಮತ್ತು ಪಾರದರ್ಶಕ ಚುನಾವಣೆಗಾಗಿ ಕಳೆದ 70 ವರ್ಷಗಳ ಅವಧಿಯಲ್ಲಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ಜನಸಂಖ್ಯೆ, ಸಾಕ್ಷರತೆ ಪ್ರಮಾಣ ಕಡಿಮೆಯಿತ್ತು. ಮತದಾನದ ಹಕ್ಕು ಕೂಡ ಎಲ್ಲರಿಗೂ ಇರಲಿಲ್ಲ. ಭಾರತ ಸ್ವಾತಂತ್ರೃದ ನಂತರ ಎಲ್ಲರಿಗೂ ಮತದಾನದ ಹಕ್ಕು ದೊರೆಯಿತು. ಆಗೆಲ್ಲಾ ಚೆನ್ನಾಗಿಯೇ ನೈತಿಕ ಮತದಾನ ನಡೆಯುತ್ತಿತ್ತು. ಅಭ್ಯರ್ಥಿವಾರು ಮತಪಟ್ಟಿಗೆಗಳು ಇಡಲಾಗುತ್ತಿತ್ತು. ಆದರೂ ಅಭ್ಯರ್ಥಿಗಳ ನಡುವೆ ದ್ವೇಷ ಭಾವನೆ ಇರಲಿಲ್ಲ. ನಂತರ ಬದಲಾದ ಪರಿಸ್ಥಿತಿಯಲ್ಲಿ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ತಿಳಿಸಿದರು.
    ಹಣಬಲ, ಜಾತಿಬಲ, ತೋಳ್ಬದ ಪ್ರಾಬಲ್ಯ ಸಾಧಿಸತೊಡಗಿದಾಗ ಅಬ್ಬರದ ಪ್ರಚಾರ ನಡೆಯುತ್ತಿತ್ತು. ನಂತರ ಅದಕ್ಕೂ ಕಡಿವಾಣ ಹಾಕಲಾಯಿತು. ಎಲ್ಲ ಅಭ್ಯರ್ಥಿಗಳಿಗೂ ಒಂದೇ ರೀತಿಯ ಮಾನದಂಡಗಳೊಂದಿಗೆ ವೆಚ್ಚಮಿತಿ ನಿಗದಿಪಡಿಸಲಾಯಿತು. ಜತೆಗೆ, ಹತ್ತಾರು ರೀತಿಯ ನಿಯಮಗಳನ್ನು ಜಾರಿಗೊಳಿಸಲಾಯಿತು. ಮತದಾನ, ಮತದಾರರ ಪಟ್ಟಿಗೆ ಆದ್ಯತೆ ನೀಡಬೇಕು. ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗೆ ಆದ್ಯತೆ ನೀಡಲಾಯಿತು. ಇದರಿಂದ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಆಶಯದೊಂದಿಗೆ ಮತದಾನದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಶೇ.100ರಷ್ಟು ಮತದಾನವಾಗಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ ಎಂದು ವಿವರಿಸಿದರು.
    ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಆದರೆ, ವಿದ್ಯಾವಂತರು, ಮೇಲ್ವರ್ಗದ ಜನರಿರುವ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಕಡಿಮೆ ಇದೆ. ನಗರ/ಪಟ್ಟಣ ಪ್ರದೇಶಗಳಲ್ಲಿ ಮತದಾನ ಕಡಿಮೆ ಇರುವುದಕ್ಕೂ ಆಯೋಗ ಕಾರಣಗಳನ್ನು ಪಟ್ಟಿ ಮಾಡುತ್ತಿದೆ. ಇದಕ್ಕಾಗಿಯೇ ಬ್ಯಾಲೆಟ್ ಯೂನಿಟ್‌ನಲ್ಲಿ ನೋಟಾವನ್ನು ಸೇರ್ಪಡೆ ಮಾಡಿದೆ. ಪ್ರಸ್ತುತ ನೋಟಾಗೆ ಮೌಲ್ಯ ಇಲ್ಲದಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನೋಟಾ ವಿಚಾರವಾಗಿಯೂ ಆಯೋಗ ಸುಧಾರಣೆಗಳನ್ನು ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಎಲ್ಲರೂ ಮತದಾನದಲ್ಲಿ ಭಾಗಿಯಾಗಬೇಕೆಂಬ ಕಾರಣಕ್ಕಾಗಿಯೇ ಅಂಗವಿಕಲರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನದ ಮಾಡಲು ಅವಕಾಶ ಕಲ್ಪಿಸಿದೆ. ಜತೆಗೆ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳಿಗೆ ಆದ್ಯತೆ ನಿಡಲಾಗಿದೆ. ವಾರಾಂತ್ಯ, ಚುನಾವಣೆ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ರಜೆ ಇಲ್ಲದಿರುವುದನ್ನು ಗಮನಿಸಿ ಈ ಬಾರಿ ಬುಧವಾರ ಚುನಾವಣಾ ದಿನಾಂಕ ನಿಗದಿಪಡಿಸಿದೆ. ಮತದಾನಕ್ಕೆ ನೀಡುವ ರಜೆಯನ್ನು ದುರುಪಯೋಗಪಡಿಸಿಕೊಂಡು ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಲು ಕೆಎಸ್‌ಟಿಡಿಸಿ ಮೂಲಕ ಚುನಾವಣೆ ದಿನದಂದು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸುವ ಆಲೋಚನೆ ಮಾಡಲಾಗಿದೆ ಎಂದು ತಿಳಿಸಿದರು.
    ಸಂವಾದದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಕೆ.ಎನ್.ನವೀನ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts