More

    ಚುನಾವಣಾ ನೀತಿ ಸಂಹಿತೆ: ಮೋದಿ ಕಾರ್ಯಕ್ರಮದ ಫ್ಲೆಕ್ಸ್ ತೆರವು

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಮಾಡುವ ಖರ್ಚು ವೆಚ್ಚದ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಇದನ್ನು ಪರಿಶೀಲಿಸಲು ವಿಚಕ್ಷಳ ದಳ ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿ, ಖರ್ಚು ವೆಚ್ಚದ ನಿಗಾ ವಹಿಸುವ ಅಧಿಕಾರಿಗಳ ತಂಡ, ಜಿಲ್ಲೆಯಲ್ಲಿ 167 ಸೆಕ್ಟರ್ ಅಧಿಕಾರಿಗಳು, 78 ಫ್ಲೈಯಿಂಗ್ ಸ್ಕ್ವಾಡ್ ರಚನೆಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.


    ಸರ್ಕಾರಿ ಜಾಗದಲ್ಲಿ ರಾಜಕೀಯ ಪಕ್ಷಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ಟಿಕೆಟ್ ಆಕಾಂಕ್ಷಿಗಳು ಅಳವಡಿಸಿರುವ ಫ್ಲೆಕ್ಸ್, ಜಾಹೀರಾತು ಫಲಕಗಳನ್ನು 24 ತಾಸಿನಲ್ಲಿ ತೆರವುಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳ ಜಾಹೀರಾತನ್ನು 48 ತಾಸಿನೊಳಗೆ ತೆರವು ಮಾಡಬೇಕು. ಖಾಸಗಿ ಜಾಗದಲ್ಲಿರುವ ಅನುಮತಿಯಿಲ್ಲದೇ ಅಳವಡಿಸಿರುವ ಪ್ರಚಾರ ಫಲಕಗಳ ತೆರವಿಗೆ 72 ತಾಸು ಗಡುವು ನೀಡಲಾಗುವುದು. ಸಂಬಂಧಪಟ್ಟವರು ತೆರವು ಮಾಡದೇ ಇದ್ದರೆ ಜಿಲ್ಲಾಡಳಿತದಿಂದ ತೆರವು ಮಾಡಿ ತಗುಲುವ ಖರ್ಚನ್ನು ವಸೂಲಿ ಮಾಡಲಾಗುತ್ತದೆ ಎಂದರು ಗುರುದತ್ತ ಹೆಗಡೆ.
    ಮೋದಿ ಕಾರ್ಯಕ್ರಮದ ಫ್ಲೆಕ್ಸ್ ತೆರವು: ಪ್ರಧಾನಿ ನರೇಂದ್ರ ಮೋದಿ ಮಾ.18ರಂದು ಶಿವಮೊಗ್ಗದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬಿಜೆಪಿ ಬಾವುಟಗಳನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಕಾರ್ಯಕ್ರಮ ನಡೆಯುವ (ಅಲ್ಲಮಪ್ರಭು ಮೈದಾನ) ಹಳೇ ಜೈಲು ಮೈದಾನದಲ್ಲಿ ಮಾತ್ರ ಫ್ಲೆಕ್ಸ್ ಹಾಗೂ ಬಾವುಟಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅದನ್ನು ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುವುದು ಎಂದು ಗುರುದತ್ತ ಹೆಗಡೆ ಹೇಳಿದರು.
    ಐವತ್ತು ಸಾವಿರ ರೂ. ಓಕೆ: ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿ 50 ಸಾವಿರ ರೂ. ನಗದು ಹೊಂದಲು ಅವಕಾಶವಿದೆ. ಅದಕ್ಕಿಂತ ಮೇಲ್ಪಟ್ಟು ನಗದು ಹೊಂದಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಣದ ಮೂಲ ಯಾವುದು? ಅದನ್ನು ಯಾವ ಉದ್ದೇಶಕ್ಕಾಗಿ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ಚೆಕ್‌ಪೋಸ್ಟ್‌ಗಳಲ್ಲಿ ಹೇಳಬೇಕಾಗುತ್ತದೆ. ಒಂದು ವೇಳೆ ಆತ ನೀಡುತ್ತಿರುವ ಕಾರಣ, ದಾಖಲೆ ಸಮರ್ಪಕವಾಗಿಲ್ಲ ಎಂಬುದು ದೃಢಪಟ್ಟರೆ ಹಣ ಜಪ್ತಿ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. 10 ಲಕ್ಷ ರೂ. ನಗದು ಹೊಂದಿದ್ದು, ಅದಕ್ಕೆ ದಾಖಲೆಗಳಿದ್ದರೂ ಅದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಬ್ಯಾಂಕ್ ಖಾತೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಸಂದೇಹಾಸ್ಪದ ವಹಿವಾಟುಗಳಿದ್ದರೆ ತನಿಖೆ ನಿಶ್ಚಿತ.
    ಮದುವೆಗೆ ತೊಂದ್ರೆಯಿಲ್ಲ: ಮದುವೆ ಹಾಗೂ ಖಾಸಗಿ ಕಾರ್ಯಕ್ರಮ ನಡೆಸುವವರು ಯಾವುದೇ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ. ಅಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಲೂ ಅಡ್ಡಿಯಿಲ್ಲ. ಆದರೆ ಅಲ್ಲಿ ಮತದಾರರನ್ನು ಸೆಳೆಯುವ, ಅವರಿಗೆ ಆಮಿಷವೊಡ್ಡುವ ಕೆಲಸ ಆಗಬಾರದು. ಸಾರ್ವಜನಿಕ ಕಾರ್ಯಕ್ರಮಗಳು, ಜಾತ್ರೆಗಳನ್ನು ನಡೆಸಲು ಅನುಮತಿ ಕಡ್ಡಾಯ. ಅಲ್ಲಿಯೂ ರಾಜಕೀಯ ವ್ಯಕ್ತಿಗಳು ಭಾಗವಹಿಸಬಹುದು. ರಾಜಕೀಯ ಚಟುವಟಿಕೆ ನಡೆಸಬಾರದು.

    ವಿವಿಧೆಡೆ 26 ಚೆಕ್‌ಪೋಸ್ಟ್
    ಜಿಲ್ಲೆಯ ವಿವಿಧೆಡೆ 26 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮೂರು ಪಾಳಿಗಳಲ್ಲಿ ದಿನದ 24 ತಾಸು ಇಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಅನುಮಾನ ಬಾರದ ಆಂಬುಲೆನ್ಸ್ ಹೊರತುಪಡಿಸಿ ಎಲ್ಲ ವಾಹನಗಳನ್ನೂ ಪರಿಶೀಲನೆ ನಡೆಸುತ್ತೇವೆ. ಅದರ ಚಿತ್ರೀಕರಣ ಮಾಡುತ್ತೇವೆ. ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು. ಮತದಾನ ಕಾರ್ಯ, ಮತ ಎಣಿಕೆ ಕೇಂದ್ರ, ಸ್ಟ್ರಾಂಗ್ ರೂಂ ಭದ್ರತೆ ಸೇರಿದಂತೆ ಒಟ್ಟು ಅಗತ್ಯವಿರುವ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನೀಡುವಂತೆ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಿಆರ್‌ಪಿಎಫ್‌ನ 1 ಕಂಪನಿ ಈಗಾಗಲೇ ಬಂದಿದೆ. ನಮ್ಮ ಇಲಾಖೆಯ ಸುಮಾರು ಮೂರು ಸಾವಿರ ಸಿಬ್ಬಂದಿ ಚುನಾವಣಾ ಬಂದೋಬಸ್ತ್‌ನಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts