More

    ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ

    ಬಾಳೆಹೊನ್ನೂರು: ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಏಕೆ ಮಾಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.
    ಪಟ್ಟಣದ ಜೇಸಿ ವೃತ್ತದಲ್ಲಿ ಕಾಂಗ್ರೆಸ್ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಫಿ ಬೆಳೆಗಾರರಿಗೆ ವಿದರ್ಭ ಪ್ಯಾಕೇಜ್ ನೀಡಿ ಬೆಳೆಗಾರರ ಪರವಾಗಿತ್ತು ಎಂದರು.
    ಯುಪಿಎ ಅವಧಿಯಲ್ಲಿಯೇ ನಾನು ಗೋರಕ್ ಸಿಂಗ್ ಅವರನ್ನು ಮಲೆನಾಡು ಭಾಗಕ್ಕೆ ಕರೆಯಿಸಿ ಅಡಕೆ ಬೆಳೆಗೆ ಇರುವ ರೋಗದ ಕುರಿತು ಸಾಧಕ ಬಾಧಕ ನೋಡಲು ತಿಳಿಸಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಗೋರಕ್‌ಸಿಂಗ್ ವರದಿ ಜಾರಿಗೆ ಪ್ರಯತ್ನ ಪಡಲಿಲ್ಲ. ಅಡಕೆ ಅಧ್ಯಯನ ಕೇಂದ್ರ ಕ್ಷೇತ್ರದಲ್ಲಿ ಇದ್ದರೂ ಸಹ ಅದರ ಅಭಿವೃದ್ಧಿಗೆ ಮುಂದಾಗಿಲ್ಲ. ಕ್ಷೇತ್ರದ ಸಂಸದರು ಕೃಷಿ ಸಚಿವರಾಗಿದ್ದರೂ ಸಹ ಇದರ ಪ್ರಯತ್ನಕ್ಕೆ ಕೈಜೋಡಿಸಿಲ್ಲ ಎಂದು ದೂರಿದರು.
    ನಾನು ಸಂಸದನಾಗಿದ್ದಾಗ ಅನುಮೋದನೆಗೊಂಡಿದ್ದ ಪ್ರಧಾನಮಂತ್ರಿ ಗಾಮ ಸಡಕ್ ಯೋಜನೆಯ ರಸ್ತೆಗಳು ಇಂದಿಗೂ ಅಭಿವೃದ್ಧಿಯಾಗಿಲ್ಲ. ಕ್ಷೇತ್ರದಲ್ಲಿ ಪ್ರಮುಖವಾಗಿ ಇಎಸ್‌ಐ ಆಸ್ಪತ್ರೆ, ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಹತ್ವವನ್ನು ಮತದಾರರಿಗೆ ತಿಳಿಸಿ ಮತವನ್ನು ಕೇಳಬೇಕಿದೆ ಎಂದರು.
    ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿರುವುದು ಕೇವಲ ಕಾಂಗ್ರೆಸ್. ಬಿಜೆಪಿಯವರು ದೇಶಕ್ಕಾಗಿ ಏನೂ ಮಾಡಿಲ್ಲ. ಬಿಜೆಪಿಯವರು ಸಾವಿರ ಸುಳ್ಳುಗಳನ್ನು ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ಅಂಬಾನಿ, ಆದಾನಿಯಂತಹ ಶ್ರೀಮಂತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದೆ ಎಂದರು.
    ಶಾಸಕ ಟಿ.ಡಿ.ರಾಜೇಗೌಡ, ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ, ಸದಸ್ಯ ಪಿ.ಆರ್.ಸದಾಶಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಚುನಾವಣಾ ವೀಕ್ಷಕ ಭಾರ್ಗವ್, ಮುಖಂಡರಾದ ಇ್ತೆಖಾರ್ ಆದಿಲ್, ಹೇಮಲತಾ, ಚಂದ್ರಮ್ಮ, ಹಿರಿಯಣ್ಣ, ಮಹಮ್ಮದ್ ಹನ್ೀ, ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಸಚಿನಾ ಮೀಗಾ, ನಟರಾಜ್ ಗೇರುಬೈಲು, ಆಶಾ, ಇಬ್ರಾಹಿಂ ಶಾಫಿ, ಶಶಿಕಲಾ, ಬಿ.ಕೆ.ಮಧುಸೂದನ್, ರಾಜೇಶ್ ಕೇಶವತ್ತಿ, ಕಾರ್ತಿಕ್ ಹುಣಸೇಕೊಪ್ಪ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts