More

    ಚುನಾವಣೆ ಬಹಿಷ್ಕಾರದ ಎಚ್ಚರಿಕೆ

    ಲಕ್ಷ್ಮೇಶ್ವರ: ಗ್ರಾಪಂ ಚುನಾವಣೆ ಒಳಗಾಗಿ ಹಕ್ಕುಪತ್ರ ನೀಡಬೇಕು ಮತ್ತು ಮೂಲಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ, ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗೊಜನೂರ ಗ್ರಾಮದ ಗುಡ್ಡದ ಅಂಚಿನ ಗುಡಿಸಲು ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಹಕ್ಕುಪತ್ರದ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ರಿ.ನಂ 214 ಮತ್ತು 215 ರ ಗುಡ್ಡದಂಚಿನಲ್ಲಿ 30 ವರ್ಷಗಳಿಂದ 350 ಕ್ಕೂ ಹೆಚ್ಚು ನಿವಾಸಿಗಳು ಗುಡಿಸಲು ಹಾಕಿಕೊಂಡು ಬದುಕುತ್ತಿದ್ದೇವೆ. ಸರ್ಕಾರಕ್ಕೆ ಕರ ಪಾವತಿ ಮಾಡುತ್ತಿದ್ದೇವೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ, ರೇಷನ್ ಕಾರ್ಡ್ ಎಲ್ಲ ದಾಖಲೆಗಳನ್ನು ಹೊಂದಿದ್ದೇವೆ. ಆದರೆ, ಗುಡಿಸಲು ಹಾಗೂ ಕಚ್ಚಾ ಮನೆಗಳಿಗೆ ಯಾವುದೇ ದಾಖಲೆಗಳು ಇಲ್ಲದ್ದರಿಂದ ಆಶ್ರಯ ಯೋಜನೆ ಸೇರಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಹಕ್ಕುಪತ್ರಕ್ಕಾಗಿ ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಈವರೆಗೂ ಪ್ರಯೋಜನವಾಗಿಲ್ಲ. ಡಿ.22 ರಂದು ನಡೆಯಲಿರುವ ಗ್ರಾಪಂ ಚುನಾವಣೆಯೊಳಗಾಗಿ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಕೊಡಬೇಕು ಮತ್ತು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಗ್ರಾಪಂ ಸೇರಿ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದರು.

    ನಿವಾಸಿಗಳಾದ ಶಂಕ್ರಪ್ಪ ಸವಣೂರ, ಚೇತನ ಕಣವಿ, ಮಲ್ಲನಗೌಡ ದೊಡ್ಡಗೌಡರ, ಶೇಖರಗೌಡ ಬಾಗವಾಡ, ಭರಮಗೌಡ ಕಾಮಾಜಿ, ದಾವಲಸಾಬ ಆನಿ, ಬಸವರಾಜ ಕೋರದಾಳ, ಮೌಲಾಸಾಬ ನದಾಫ್, ಯಲ್ಲಪ್ಪ ಯಳವತ್ತಿ, ರವಿಕುಮಾರ ಸವಣೂರ, ಪ್ರಭು ಕೊಂಡಿಕೊಪ್ಪ, ನಿಂಗಪ್ಪ ಮಾದರ, ಮೈಲಾರಪ್ಪ ಮಾದರ, ಶಿವಲೀಲಾ ಸಂಶಿ, ದಾಕ್ಷಾಯಿಣವ್ವ ದೊಡ್ಡಗೌಡ್ರ, ಗೀತವ್ವ ದೊಡ್ಡಗೌಡ್ರ, ಚಿನ್ನವ್ವ ಯಳವತ್ತಿ ಇತರರು ಇದ್ದರು.

    ತಹಸೀಲ್ದಾರ್ ಗುಬ್ಬಿಶೆಟ್ಟಿ ಭೇಟಿ: ಗೊಜನೂರ ಗ್ರಾಮದ ಗುಡ್ಡದಂಚಿನ ನಿವಾಸಿಗಳ ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಗ್ರಾಮಕ್ಕೆ ಬೇಟಿ ನೀಡಿದರು. ಗುಡಿಸಲು ವಾಸಿಗಳ ಸಮಸ್ಯೆ ಆಲಿಸಿ, ‘ಈ ಪ್ರದೇಶ ಗೋಮಾಳ ಜಮೀನಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆ ಹರಿಸಬೇಕಾಗುತ್ತದೆ. ಈ ಕುರಿರು ಈಗಾಗಲೇ ಗ್ರಾಪಂ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತ್ತೊಮ್ಮೆ ಸಮಗ್ರ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಸದ್ಯಕ್ಕೆ ಇಲ್ಲಿನ ನಿವಾಸಿಗರಿಗೆ ಯಾವುದೇ ತೊಂದರೆ ಇಲ್ಲ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮಸ್ಥರು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ,ಪಿಎಸ್​ಐ ಪಿ.ಎಂ. ಬಡಿಗೇರ, ಪಿಡಿಓ ಶಿವಾನಂದ ಮಾಳವಾಡ ಸೇರಿ ಗ್ರಾಮದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts