More

    ಹಿರಿಯರ ಕಡೆಗಣನೆ ಸಲ್ಲ

    ಹೊಸನಗರ: ಹಿರಿಯರನ್ನು ಕಡೆಗಣಿಸದೆ ಅವರ ಅನುಭವವನ್ನು ಕಿರಿಯರು ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ಸಂತೋಷ ತಿಳಿಸಿದರು.

    ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಪಂ ಸಭಾಂಗಣದಲ್ಲಿ ಶಿವಮೊಗ್ಗ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯುವ ಸಮಾಜ ಹಿರಿಯರ ಅನುಭವ ಅಳವಡಿಸಿಕೊಂಡಿದ್ದೇ ಆದಲ್ಲಿ ಯಾವ ಸವಾಲಿಗೂ ಎದೆಗುಂದಬೇಕಿಲ್ಲ. ಯುವಕರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜತೆಗೆ ಮನೆಯಲ್ಲಿರುವ ಹಿರಿಯರ ರಕ್ಷಣೆ ಮಾಡಬೇಕು. ಅವರ ಆಗುಹೋಗುಗಳ ಬಗ್ಗೆ ಗಮನ ನೀಡಬೇಕು ಎಂದರು.
    ಪ್ರಧಾನ ವ್ಯವಹಾರ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ರವಿಕುಮಾರ್ ಮಾತನಾಡಿ, ತಂದೆ-ತಾಯಿಗಳು ತಮ್ಮ ಬದುಕನ್ನೇ ವ್ಯಯಿಸಿ ಮಕ್ಕಳಿಗಾಗಿ ಆಸ್ತಿ, ವಿದ್ಯೆ ಧಾರೆ ಎರೆಯುತ್ತಾರೆ. ಆಸ್ತಿಗಾಗಿ ಮಕ್ಕಳ ನಡುವೆ ಗಲಾಟೆ ನಡೆದಾಗ ತಮಗೇನು ಇಟ್ಟುಕೊಳ್ಳದೆ ಸಮಾನವಾಗಿ ಹಂಚುತ್ತಾರೆ. ಇದರ ಉದ್ದೇಶ ಮಕ್ಕಳು ಚೆನ್ನಾಗಿರಬೇಕು, ಮನಸ್ಸುಗಳು ಒಡೆಯಬಾರದೆಂದು. ಆದರೆ ಮಕ್ಕಳು ಆಸ್ತಿ ಸಿಕ್ಕ ಮೇಲೆ ತಂದೆ-ತಾಯಿಗೆ ಊಟ ಹಾಕುವುದಿಲ್ಲ. ಅವರ ಚಟುವಟಿಕೆಯನ್ನು ಕೂಡ ಗಮನಿಸದೆ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ ಹಾಗಾಗದೆ ತಮ್ಮ ಮನೆ, ತಲೆಮಾರು, ಹಿರಿಯರನ್ನು ಕಾಪಾಡುವ ಮನೋಭಾವ ಮೇಳೈಸಬೇಕಿದೆ ಎಂದು ಹೇಳಿದರು.
    ವಕೀಲ ಎ.ಜೆ.ಕರ್ಣಕುಮಾರ್, ತಾಪಂ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್, ತಾಪಂ ವ್ಯವಸ್ಥಾಪಕ ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts