More

    ಕರೊನಾ ಆತಂಕ ; ಶಿರಾದಲ್ಲಿ ರೆಡ್ ಅಲರ್ಟ್!

    ಶಿರಾ: ಕರೊನಾ ಸೋಂಕಿನಿಂದ ವೃದ್ಧ ಬಲಿಯಾದ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ನಗರ ಬೆಚ್ಚಿಬಿದ್ದಿದೆ. ತಮ್ಮ ನಡುವೆಯೇ ಓಡಾಡಿಕೊಂಡಿದ್ದ ವ್ಯಕ್ತಿ ಮಹಾಮಾರಿ ಕರೊನಾ ರೋಗಕ್ಕೆ ತುತ್ತಾಗಿದ್ದು ಜನರನ್ನು ಆತಂಕಕ್ಕೆ ದೂಡಿತ್ತು. ಸೋಂಕಿನಿಂದ ವೃದ್ಧ ಸಾವನ್ನಪ್ಪುತ್ತಿದ್ದಂತೆ ಜಿಲ್ಲಾಡಳಿತ ಇಡೀ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿ ಆದೇಶಿಸಿತು.

    ನಗರವನ್ನು ಕ್ಲಸ್ಟರ್ ಕಂಟೋನ್ಮೆಂಟ್ ಮಾಡಲಾಗಿದ್ದು ಮೃತ ವೃದ್ಧ ಮನೆ ಸುತ್ತಮುತ್ತ 3 ಕಿ.ಮೀ., ರೆಡ್ ರೆನ್ ಘೋಷಿಸಲಾಗಿದೆ. ಅಲ್ಲದೆ, 5 ಕಿ.ಮೀ., ಬಫರ್ ರೆನ್ ಎಂದು ಗುರುತಿಸಿದ್ದು, ಒಟ್ಟಾರೆ ಶಿರಾ ನಗರಕ್ಕೆ ಪ್ರವೇಶ ಹಾಗೂ ಹೊರ ಹೋಗುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    21 ದಿನಗಳ ಲಾಕ್‌ಡೌನ್ ಜಾರಿಯಲ್ಲಿದ್ದು ಸಾರ್ವಜನಿಕರೆಲ್ಲರೂ ತಮ್ಮ ಮನೆಯಲ್ಲಿ ಇರಬೇಕು. ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಲಿದೆ. ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಸಿದರು.

    ಎಫ್ ಐಆರ್: ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು. ಕರೊನಾ ವಾರಿಯರ್‌ಗಳನ್ನು ತಾಲೂಕು ಹಾಗೂ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಗುರುತಿಸಿ ಅವರ ಸೇವೆಯನ್ನು ಬಳಸಿಕೊಂಡು ಜನರಿಗೆ ಅಗತ್ಯವಸ್ತುಗಳನ್ನು ತಲುಪಿಸುವ ಕ್ರಮ ಕೈಗೊಳ್ಳಲಾಗುವುದು. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಶಿರಾಕ್ಕೆ ಭೇಟಿ ನೀಡಿ ತಾಲೂಕು ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

    ಆಡಳಿತದ ವಿರುದ್ಧ ಜನಾಕ್ರೋಶ: ಕರೊನಾ ಸೋಂಕಿನಿಂದ ವೃದ್ಧ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮವಹಿಸಿದ ತಾಲೂಕು ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿ ದೆಹಲಿಗೆ ಹೋಗಿ ಬಂದ ಬಳಿಕ ಆತನ ಮೇಲೆ ನಿಗಾವಹಿಸದೆ ಇದ್ದುದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ತಾಲೂಕು ವೈದ್ಯಾಧಿಕಾರಿ ಸಹ ಈ ವಿಚಾರದಲ್ಲಿ ಅಸಡ್ಡೆ ತೋರಿದ್ದಾರೆಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

    468 ಜನರ ನಿಗಾ!: ಜಿಲ್ಲೆಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಜಂಟಿಯಾಗಿ ತಂಡಗಳನ್ನು ರಚಿಸಿ ಪ್ರತಿದಿನ 468 ಜನರನ್ನು ಮಾನಿಟರಿಂಗ್ ಮಾಡಲಾಗುತ್ತಿದೆ. ಶಂಕಿತ ವ್ಯಕ್ತಿಗಳ ಎಡಗೈ ಮೇಲೆ ಸ್ಟಾಂಪಿಂಗ್ ಮಾಡಲಾಗಿದ್ದು, ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು. ಶಂಕಿತ ವ್ಯಕ್ತಿಗಳು ಹೋಂ ಕ್ವಾರಂಟೈನ್‌ಗೆ ಸಹಕರಿಸದಿದ್ದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts