ಬೆಂಗಳೂರು : ದೇಶದ ಬಹುತೇಕ ರಾಜ್ಯಗಳಲ್ಲಿ ಮೊಟ್ಟೆ ಧಾರಣೆಯಲ್ಲಿ ಏರಿಳಿತ ಕಂಡಿದೆ. ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಸೂಚಿಸಿರುವ ಬೆಂಗಳೂರು ಸಗಟು ಧಾರಣೆಯಲ್ಲೇ ಶನಿವಾರ ಸಂಜೆ 510 ರೂ.ಗಳಿಗೆ (100ಕ್ಕೆ ) ಮಾರಾಟವಾಗಿದೆ.
ಕಳೆದ 2 ವಾರಗಳಿಂದ ಮೊಟ್ಟೆ ಧಾರಣೆಯಲ್ಲಿ ಏರಿಳಿತವಾಗುತ್ತಿದೆ. ಕರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿದ್ದಾಗ ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆಯಿಂದ ಸೋಂಕು ಮತ್ತಷ್ಟು ಹೆಚ್ಚಾಗುತ್ತದೆ ಎಂಬ ವದಂತಿ ಹಿನ್ನೆಲೆ ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿತ್ತು. ಇದೀಗ ಅನ್‌ಲಾಕ್ ನಂತರ ಅನೇಕ ವೈದ್ಯರು ಮೊಟ್ಟೆ ಬಳಕೆಯಿಂದ ಯಾವುದೇ ಸಮಸ್ಯೆಯಿಲ್ಲ. ಮೊಟ್ಟೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂಬ ಹೇಳಿಕೆಯಿಂದ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗನುಗುಣವಾಗಿ ಮೊಟ್ಟೆ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದೇ ದರ ಏರಿಕೆಗೆ ಕಾರಣವಾಗಿದೆ. ಇನ್ನು ಸ್ವಲ್ಪ ದಿನ ದರದಲ್ಲಿ ಏರಿಳಿತವಾಗಲಿದ್ದು, ಈಗಾಗಲೇ ಚಿಲ್ಲರೆ ಮಾರಾಟಗಾರರು ಪ್ರತಿ ಮೊಟ್ಟೆಗೆ 6 ರೂ. ಮಾರಾಟ ಮಾಡುತ್ತಿದ್ದಾರೆ. ಇನ್ನು ಹೆಚ್ಚಳವಾದರೆ ವ್ಯಾಪಾರದಲ್ಲಿ ಕುಸಿತ ಕಾಣುತ್ತದೆ. ಗರಿಷ್ಠ ಪ್ರತಿ ಮೊಟ್ಟೆಗೆ 0.20 ಪೈಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಆರ್. ಸಾಯಿನಾಥ್ ತಿಳಿಸಿದ್ದಾರೆ.
ಕರ್ನಾಟಕದಿಂದ ನಿತ್ಯ 1.5 ಕೋಟಿ ಮೊಟ್ಟೆ ಉತ್ಪಾದನೆ: ಪ್ರತಿ ನಿತ್ಯ ರಾಜ್ಯದ ವಿವಿಧ ಜಿಲ್ಲೆಗಳಾದ ಕೊಪ್ಪಳ , ಹೊಸಪೇಟೆ, ಬಳ್ಳಾರಿ, ಮೈಸೂರು ಮತ್ತಿತರ ಜಿಲ್ಲೆಗಳಿಂದ ನಿತ್ಯ 1.5 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ರಾಜ್ಯದ ವಿವಿದೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ.
ಕೊಪ್ಪಳ, ಹೊಸಪೇಟೆಯಿಂದಲೇ ಹೆಚ್ಚು ಪೂರೈಕೆ: ಮೈಸೂರು ಜಿಲ್ಲೆಯಿಂದ 35 ಲಕ್ಷ , ಬಳ್ಳಾರಿಯಿಂದ 20 ಲಕ್ಷ , ಬೆಂಗಳೂರಿನಿಂದ 20 ಲಕ್ಷ ಹಾಗೂ ಕೊಪ್ಪಳ ಹಾಗೂ ಹೊಸಪೇಟೆಯಿಂದ 60 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿದೆ. ಕೊಪ್ಪಳದ ಮೊಟ್ಟೆಗಳು ರಾಜ್ಯದ ಗಡಿಭಾಗಗಳಲ್ಲಿ ಹಾಗೂ ಮಹಾರಾಷ್ಟ್ರಗೂ ಪೂರೈಕೆ ಮಾಡಲಾಗುತ್ತಿದೆ.
ಯಾವ್ಯಾವ ನಗರದಲ್ಲಿ ಎಷ್ಟೆಷ್ಟು?:
ನಗರ — ಸೆ. 19ರ ದರ (100ಕ್ಕೆ )
ಬೆಂಗಳೂರು — 510 ರೂ.
ಮೈಸೂರು — 510 ರೂ.
ಮುಂಬೈ — 538 ರೂ.
ನಾಗಪುರ್ — 510 ರೂ.
ಪುಣೆ — 553 ರೂ.
ಪಶ್ವಿಮಬಂಗಾಳ — 550 ರೂ.
ಸೂರತ್ — 538 ರೂ.
ವಾರಣಾಸಿ — 523 ರೂ.