More

    ಜನಪರ ಯೋಜನೆಗಳನ್ನು ಸಮರ್ಥವಾಗಿ ಜನತೆಗೆ ತಲುಪಿಸಿ: ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥವಾದ ಆಡಳಿತದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಅವರ ಜನಪರವಾದ ಯೋಜನೆಗಳನ್ನು ನಾವು ಸಮರ್ಥವಾಗಿ ಜನತೆಗೆ ತಲುಪಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.\

    ಪಟ್ಟಣದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿದ್ದ ವಿವಿಧ ಮೋರ್ಚಾಗಳ ಸಭೆಯಲ್ಲಿ ಮಾತನಾಡಿ, ಶಿಸ್ತು, ಅನುಶಾಸನ ಹಾಗೂ ಸಂಘಟನೆಯಿಂದ ಬಿಜೆಪಿ ಒಂದು ದೊಡ್ಡ ರಾಜಕೀಯ ಪಕ್ಷವಾಗಿದೆ. ನಾವು ಆ ಪಕ್ಷದ ಸದಸ್ಯರು ಎನ್ನುವುದೇ ನಮಗೆ ಹಿರಿಮೆ. ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷದ ಆಸ್ತಿ. ಸೋಲು, ಗೆಲುವಿಗಿಂತ ನಾವು ಪಕ್ಷ ಕಟ್ಟುವ ದಿಸೆಯಲ್ಲಿ ಮುಂದಾಗಬೇಕು. ಪಕ್ಷದ ಯಾವುದೇ ಜವಾಬ್ದಾರಿ ಇರಲಿ ಅದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
    ಪ್ರತಿ ಮೋರ್ಚಾಗಳು ಬಲಗೊಳ್ಳಬೇಕು. ಇದರಿಂದ ಪಕ್ಷ ಬಲಗೊಳ್ಳುವುದಲ್ಲದೆ ಪ್ರತಿ ಬೂತ್‌ಗಳು ಗಟ್ಟಿಯಾಗುತ್ತವೆ. ಪಕ್ಷದ ನಿರೀಕ್ಷೆಯಂತೆ ನಾವು ಜನರ ಹತ್ತಿರ ಹೋಗಬೇಕು. ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಗಳನ್ನು ನಾವು ಸಮರ್ಥವಾಗಿ ಎದುರಿಸಬೇಕು. ಕಳೆದ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ಮತ ಗಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕು. ಯಾವ ಕಾರಣಕ್ಕೂ ನಮ್ಮ ಕಾರ್ಯಕರ್ತರು ಹಿಂಜರಿಯಬಾರದು. ಪಕ್ಷದ ಹಿನ್ನಡೆಗೆ ಕಾರಣವಾದಂತಹ ದೋಷಗಳ ಸಿಂಹಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಒಂದು ಕಾಲದಲ್ಲಿ ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕೆಂದು ನಮೂದಾಗಿದ್ದ ಶಿಕಾರಿಪುರ ತಾಲೂಕು ಇಂದು ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರ ಜನಪರವಾದ ಕಳಕಳಿಯಿಂದ ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಮುಂಚೂಣಿಯಲ್ಲಿದೆ. ತಾಲೂಕಿನಲ್ಲಿ ಪಕ್ಷ ಸದೃಢವಾಗಿದೆ. ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
    ನಿಮ್ಮೆಲ್ಲರಿಗೂ ಒಂದರ್ಥದಲ್ಲಿ ಇದೀಗ ಪರೀಕ್ಷೆಯ ಸಮಯ. ಬರುವ ದಿನಗಳಲ್ಲಿ ನಾವು ಹೆಚ್ಚಿನ ಶ್ರಮವಹಿಸಿ ಪಕ್ಷವನ್ನು ಸಂಘಟಿಸಬೇಕು. ಪ್ರತಿ ಮೋರ್ಚಾ ಕೂಡ ನಮಗೆ ಆನೆ ಬಲ ಇದ್ದಂತೆ. ನಮ್ಮ ಕಾರ್ಯಕರ್ತರು ಎಲ್ಲ ಮೋರ್ಚಾಗಳಿಗೆ ಬಲ ತುಂಬುವಂತಹ ಕೆಲಸ ಮಾಡಬೇಕು. ಈ ಬಾರಿ ಕೇಂದ್ರದಲ್ಲಿ ಮತ್ತೆ ಮೋದಿ ನೇತೃತ್ವದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಸರ್ಕಾರ ಬರಲಿದೆ. ನಾವು ಯಾವ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.
    ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಇತರರಿದ್ದರು.

    ಬಿಎಸ್‌ವೈ ಮಾದರಿ
    ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ನೀವು ಸೇತುವೆಯಾಗಬೇಕು. ನಮ್ಮ ಕಾರ್ಯಕರ್ತರ ದೃಢ ಸಂಕಲ್ಪವೇ ನಮ್ಮ ಯಶಸ್ಸು. ಸಣ್ಣ ಸಣ್ಣ ಕಾರಣಗಳಿಗೆ ಪಕ್ಷದಿಂದ ದೂರವಾದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷ ಕಟ್ಟಿದ ಹಿರಿಯರ ಮಾರ್ಗದರ್ಶನ ಸಲಹೆ ಪಡೆದುಕೊಳ್ಳಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಮಾದರಿ ಹಾಗೂ ಸ್ಫೂರ್ತಿ. ಅಂತಹ ಹಿರಿಯರ ಪರಿಶ್ರಮ, ಹೋರಾಟದ ಫಲವಾಗಿ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆಯೇರಲು ಸಾಧ್ಯವಾಯಿತು. ಜನಪರ ಹೋರಾಟಗಳು ಬಂದಾಗ ಅವರು ಅವಿಶ್ರಾಂತವಾಗಿ ಶ್ರಮಿಸಿದರು. ಮನೆ-ಮಠ ಬಿಟ್ಟು ಪಕ್ಷ ಕಟ್ಟುವ ಕೆಲಸ ಮಾಡಿದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts