More

    ವಿದ್ಯಾ ಸಂಸ್ಥೆಗಳು ನೆರಳಿನ ವೃಕ್ಷಗಳು

    ವಿಜಯವಾಣಿ ಸುದ್ದಿಜಾಲ ಗೋಕರ್ಣ

    ಮಣ್ಣಿನ ಸತ್ವದಿಂದ ಬೆಳೆವ ವೃಕ್ಷ ಮಣ್ಣಿಗೆ ನಿರಂತರವಾಗಿ ನೆರಳನ್ನು ನೀಡುತ್ತದೆ. ಅದೇ ರೀತಿಯಲ್ಲಿ ಒಂದು ಊರು ಕಟ್ಟಿದ ವಿದ್ಯಾ ಸಂಸ್ಥೆಗಳು ತಾವು ಬೆಳೆದು ಊರಿಗೆ ಜ್ಞಾನದ ನೆರಳನ್ನು ನೀಡುತ್ತವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

    ಮಹಾಶಿವರಾತ್ರಿ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಮಹಾಬಲೇಶ್ವರ ಮಂದಿರದ ವತಿಯಿಂದ ಇಲ್ಲಿನ ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಭದ್ರಕಾಳಿ ಸಮೂಹ ವಿದ್ಯಾ ಸಂಸ್ಥೆಗಳಿಗೆ ವಾರ್ಷಿಕ ಸಾರ್ವಭೌಮ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.

    ಮಣ್ಣಿನಿಂದ ಬಂದ ವೃಕ್ಷ ಮಣ್ಣಿಗೆ ಆಧಾರವಾಗಿ ಅದಕ್ಕೆ ಅಲಂಕಾರವಾಗುತ್ತದೆ. ಮಣ್ಣನ್ನು ಗಟ್ಟಿಯಾಗಿಸುತ್ತದೆ. ಇದೇ ತೆರನಾಗಿ ಗೋಕರ್ಣದ ಮಣ್ಣಲ್ಲಿ ಜನ್ಮ ತಳೆದ ಇಲ್ಲಿನ ಭದ್ರಕಾಳಿ ವಿದ್ಯಾ ಸಂಸ್ಥೆ ಗೋಕರ್ಣಕ್ಕೆ ಮಾತ್ರವಲ್ಲದೆ ಸುತ್ತಲಿನ ಅನೇಕ ಗ್ರಾಮಗಳಿಗೂ ನೆರಳಾಗಿ ಬೆಳೆದಿದೆ. ಇದರ ಹಿಂದೆ ಅದರ ಅಧ್ಯಕ್ಷರಾದ ಡಾ. ವಿ.ಆರ್. ಮಲ್ಲನ್ ಮತ್ತು ಆಡಳಿತ ಮಂಡಳಿಯ ಪರಿಶ್ರಮ ಶಕ್ತಿಯಾಗಿದೆ. ಸಾರ್ವಭೌಮ ಮಹಾಬಲೇಶ್ವರನಿಗೂ ಗ್ರಾಮ ದೇವತೆ ಭದ್ರಕಾಳಿಗೂ ಇರುವ ಅವಿನಾಭಾವ ಸಂಬಂಧವೇ ಮಹಾಬಲೇಶ್ವರ ಮಂದಿರ ಮತ್ತು ಭದ್ರಕಾಳಿ ವಿದ್ಯಾ ಸಂಸ್ಥೆಯ ನಡುವೆ ಇದೆ. ಈ ಸಂಸ್ಥೆಯ ಅಭ್ಯುದಯಕ್ಕೆ ಮಂದಿರ ಎಲ್ಲ ಬಗೆಯ ಸಹಾಯ ಒದಗಿಸಲಿದೆ ಎಂದು ಹೇಳಿದರು.

    ಧರ್ಮಸಭೆಯಲ್ಲಿ ಅವರು ಏಪ್ರಿಲ್ ತಿಂಗಳಿನಲ್ಲಿ ಇಲ್ಲಿನ ಅಶೋಕಾವನದಲ್ಲಿ ಪ್ರಾರಂಭವಾಗುವ ವಿಷ್ಣುಗುಪ್ತ ವಿಶ್ವವಿದ್ಯಾಕೇಂದ್ರದ ಬಗ್ಗೆ ವಿವರಣೆ ನೀಡಿದರು. ತಕ್ಷಶಿಲಾ ವಿದ್ಯಾಪೀಠದ ಪುನರುತ್ಥಾನದ ಉದ್ದೇಶದಿಂದ ನಿರ್ವಣವಾಗಲಿರುವ ಈ ಸಂಸ್ಥೆ ಶಿಕ್ಷಣ ನೀಡಿಕೆಯಲ್ಲಿ ವಿಶ್ವಕ್ಕೇ ಮಾದರಿ ಆಗಲಿದೆ ಎಂದರು.

    ಪ್ರಶಸ್ತಿ ಸ್ವೀಕರಿಸಿ ಭದ್ರಕಾಳಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ಮಾತನಾಡಿ, ಶ್ರೀಗಳು ಮತ್ತು ಮಹಾಬಲೇಶ್ವರ ಮಂದಿರ ಹರಸಿ ನೀಡಿದ ಪ್ರಶಸ್ತಿ ಬಗ್ಗೆ ಅಭಿನಂದನೆ ಸಲ್ಲಿಸಿದರು.

    ಧರ್ಮಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಪ್ರಾಚಾರ್ಯ ಎಸ್.ಸಿ. ನಾಯಕ, ಮುಖ್ಯೋಪಾ ಧ್ಯಾಯ ಸಿ.ಜಿ. ನಾಯಕದೊರೆ, ಮುಖ್ಯಶಿಕ್ಷಕ ಎಂ.ಆರ್. ನಾಯ್ಕ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಎನ್. ನಾಯಕ, ಖಜಾಂಚಿ ರವೀಂದ್ರ ಕೊಡ್ಲೆಕೆರೆ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಸ್ವಾಗತಿಸಿದರು. ತಾಪಂ ಸದಸ್ಯ ಮಹೇಶ ಶೆಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts