More

    ಶಿಕ್ಷಣದ ಸವಾಲುಗಳಿಗೆ ಪರಿಹಾರ ಹುಡುಕಾಟ ಅಗತ್ಯ

    ರಾಯಚೂರು: ದೇಶದಲ್ಲಿ ಶಿಕ್ಷಣ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಸವಾಲುಗಳಿಗೆ ಪರಿಹಾರ ಹುಡುಕುವ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕಾಗಿದೆ ಎಂದು ನವೋದಯ ಶಿಕ್ಷಣ ಕಾಲೇಜು ಪ್ರಾಧ್ಯಾಪಕ ರತನ್ ಚೌಹಾಣ್ ಹೇಳಿದರು.
    ಸ್ಥಳೀಯ ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆ ಜತೆಗೆ ಪ್ರಾಮಾಣಿಕ ಬೋಧನೆ ಕೊರತೆ ಕಂಡು ಬರುತ್ತಿದೆ ಎಂದರು.
    ಸಾಮಾಜಿಕ ಮಾಧ್ಯಮಗಳು ಶಿಕ್ಷಣಕ್ಕೆ ಪೂರಕವಾಗಿರುವುದರ ಜತೆಗೆ ಮಾರಕವೂ ಆಗುತ್ತಿವೆ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಗಳನ್ನು ಋಣಾತ್ಮಕವಾಗಿ ಬಳಕೆ ಮಾಡುತ್ತಿರುವುದರಿಂದ ಶಿಕ್ಷಣದ ವೌಲ್ಯ ಕುಂದುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಯುವಜನರು ಹಾಳಾಗುತ್ತಿದ್ದಾರೆ.
    ಇಂದಿನ ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಸಂಬಳಕ್ಕಾಗಿ ಪಾಠ ಮಾಡುತ್ತಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರು ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಶಿಕ್ಷಕ ವೃತ್ತಿ ಗಿಟ್ಟಿಸಿಕೊಂಡು ಪಾಠ ಮಾಡುತ್ತಾರೆ. ಆದರೆ ಖಾಸಗಿ ಶಾಲೆ ಶಿಕ್ಷಕರು ಸ್ಪರ್ಧೆಯಿಲ್ಲದೆ ಕೆಲಸಕ್ಕೆ ಸೇರುತ್ತಿದ್ದರೂ ಜನರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ರತನ್ ಚೌಹಾಣ್ ಖೇದ ವ್ಯಕ್ತಪಡಿಸಿದರು.
    ದತ್ತಿ ದಾನಿ ಡಾ.ಬಸವರಾಜ ಕಳಸ ಮಾತನಾಡಿ, ನಮ್ಮಲ್ಲಿನ ಸಮಸ್ಯೆಗಳಿಗೆ ಆಳುವ ಸರ್ಕಾರಗಳ ಜತೆಗೆ ನಮ್ಮ ಮಾನಸಿಕ ಸ್ಥಿತಿಯೂ ಕೂಡಾ ಅದಕ್ಕೆ ಕಾರಣವಾಗಿದೆ. ಉತ್ತಮ ಮಾನಸಿಕ ಸ್ಥಿತಿಯಿಂದ ಮಾತ್ರ ಬದಲಾವಣೆ ಸಾಧ್ಯವಿದೆ. ಸಾಂಸ್ಕೃತಿಕ ಭಿನ್ನಭಾವಗಳು ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿವೆ ಎಂದು ಹೇಳಿದರು.
    ಕಾಲೇಜು ಪ್ರಾಚಾರ್ಯೆ ಡಾ.ಪದ್ಮಜಾ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಾಮಣ್ಣ ಬೋಯರ್ ಹಾಗೂ ಬಾನುತಾಯಿ ಮುತಾಲಿಕ್ ದೇಸಾಯಿಗೆ ಚನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೀರ ಹನುಮಾನ, ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ರಾವುತರಾವ್ ಬರೂರ, ಪದಾಕಾರಿಗಳಾದ ಪ್ರತಿಭಾ ಗೋನಾಳ, ರೇಖಾ ಬಡಿಗೇರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ತಾಲೂಕು ಅಧ್ಯಕ್ಷ ಮಲ್ಲೇಶ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts