More

    ಶಿಕ್ಷಣ ಕ್ರಾಂತಿಗೆ ಮುನ್ನುಡಿ

    ಬಂಟ್ವಾಳ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಸರಪಾಡಿ, ಮಣಿನಾಲ್ಕೂರು ಗ್ರಾಮ ವ್ಯಾಪ್ತಿಯಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದಿದೆ.

    ಸರಪಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ, ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿಯ ಶಾಲಾಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಭಾನುವಾರ ಶಾಲಾ ವಾಸ್ತವ್ಯ ನಡೆಸಿದೆ. ಮನೆ ಮನೆ ಭೇಟಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಸರ್ಕಾರಿ ಶಾಲೆ ಉಳಿಸುವ ಬಗ್ಗೆ ಜಾಗೃತಿ ಮೂಡಿಸಿದ್ದು, ಗ್ರಾಮಸ್ಥರಿಂದ ಬೆಂಬಲವೂ ವ್ಯಕ್ತವಾಗಿದೆ.

    ಗ್ರಾಮೀಣ ಭಾಗವಾಗಿರುವ ಸರಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ಇಂದು ಸಮಾಜದ ಉನ್ನತ ಸ್ತರಗಳಲ್ಲಿ ಗುರುತಿಸಿಕೊಂಡಿದ್ದಾರೆ. 89 ವರ್ಷ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಪ್ರಸ್ತುತ 73 ಮಂದಿ ವಿದ್ಯಾರ್ಥಿಗಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಸ್ಥಳೀಯ ಶಿಕ್ಷಣಾಭಿಮಾನಿಗಳ ಆತಂಕಕ್ಕೆ ಕಾರಣಾವಾಗಿದೆ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಶಿಕ್ಷಣಾಭಿಮಾನಿಗಳ ಆಹ್ವಾನದ ಮೇರೆಗೆ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಸರಪಾಡಿ ಶಾಲೆಯಲ್ಲಿ ವಾಸ್ತವ್ಯ ಹೂಡಿ ಶಾಲೆ ಉಳಿಸಿ ಬೆಳೆಸುವ ಕೈಂಕರ್ಯಕ್ಕೆ ಮುನ್ನಡಿ ಬರೆದಿದ್ದಾರೆ.

    ಮನೆ ಭೇಟಿ ಕಾರ್ಯಕ್ರಮ: ಭಾನುವಾರ ಸಂಜೆ ಸರಪಾಡಿ ಹಾಗೂ ಮಣಿನಾಲ್ಕೂರು ಗ್ರಾಮ ವ್ಯಾಪ್ತಿಯ ಲಕ್ಷ್ಮಿ ಪಲ್ಕೆ, ಮೀಯಾರು ಪಲ್ಕೆ, ಬೇಂಗತ್ಯಾರು, ಆರುಮುಡಿ, ಮೊಗರು ಮಜಲು, ಕೊಡಂಗೆ, ಕಾಣೆಕೋಡಿ ಪರಸರದಲ್ಲಿ 30ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದ ತಂಡ ಸಂಜೆ 5 ಗಂಟೆಯಿಂದ 8ಗಂಟೆವರೆಗೆ ಪ್ರತಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಿದೆ. ಮನೆಗಳಲ್ಲಿರುವ ಸಣ್ಣ ಮಕ್ಕಳನ್ನು ಮುಂದಿನ ದಿನಗಳಲ್ಲಿ ಸರಪಾಡಿ ಸರ್ಕಾರಿ ಶಾಲೆಗೆ ಕಳುಹಿಸಿ ಕೊಡವಂತೆ, ಆ ಮೂಲಕ ಸರ್ಕಾರಿ ಶಾಲೆ ಉಳಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ವಿನಂತಿಸಿಕೊಂಡಿದೆ. ರಾತ್ರಿ ಸರಪಾಡಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದೆ. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ, ನವಿನ್ ಸೇಸಗುರಿ, ದಿಲೀಪ್ ಡೆಚ್ಚಾರ್, ಅಶ್ವತ್ ಇದ್ದರು.

    ಶಿಕ್ಷಣಾಭಿಮಾನಿಗಳ ಸಭೆ: ಸೋಮವಾರ ಬೆಳಗ್ಗೆ ಪ್ರಕಾಶ್ ಅಂಚನ್ ಅಧ್ಯಕ್ಷತೆಯಲ್ಲಿ ಶಿಕ್ಷಣಾಭಿಮಾನಿಗಳ ಸಭೆ ನಡೆಯಿತು. ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ ಹೆಗ್ಗಡೆ ಕೋಡಿ, ಗ್ರಾಪಂ ಸದಸ್ಯರಾದ ನಾಣ್ಯಪ್ಪ ಪೂಜಾರಿ, ಪ್ರೇಮ, ಸರಪಾಡಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉದಯ ಕುಮಾರ್ ಜೈನ್, ಮಣಿನಾಲ್ಕೂರು ಸಹಕಾರಿ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಶೆಟ್ಟಿ, ಪ್ರಮುಖರಾದ ಪದ್ಮಪ್ಪ ಪೂಜಾರಿ, ಇಸ್ಮಾಲಿ, ಸುಂದರ ಶೆಟ್ಟಿ ಕಲ್ಲೊಟ್ಟೆ, ಶಿವರಾಮ ಭಂಡಾರಿ, ಸುರೇಂದ್ರ ಪೈ, ಸುದರ್ಶನ ಬಜ ಉಪಸ್ಥಿತರಿದ್ದರು. ಸರಪಾಡಿ ಗ್ರಾಪಂ ಸದಸ್ಯ ಧನಂಜಯ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಗಣೇಶ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    ನೂತನ ಸಮಿತಿ ರಚನೆ: ಸರಪಾಡಿ ಶಾಲೆ ಉಳಿಸುವ ನಿಟ್ಟಿನಲ್ಲಿ ನೂತನ ಸರ್ಕಾರಿ ಶಾಲೆ ಉಳಿಸಿ ಬೆಳಸಿ ಸರಪಾಡಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಧನಂಜಯ ಶೆಟ್ಟಿ ಸರಪಾಡಿ, ಉಪಾಧ್ಯಕ್ಷರಾಗಿ ಪದ್ಮಪ್ಪ ಪೂಜಾರಿ, ಡಾ.ಬಾಲಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ ಕೊಡಂಗೆ, ಸುಂದರ ಶೆಟ್ಟಿ ಹೊಳ್ಳರಗುತ್ತು, ಪುರುಷೋತ್ತಮ ಪೂಜಾರಿ ಮಜಲು, ವಿಶ್ವನಾಥ ನಾಯ್ಕ ಕಾಣೆಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ್ ಹಲ್ಲಂಗಾರು, ಕಾರ್ಯದರ್ಶಿಯಾಗಿ ಸಾಂತಪ್ಪ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಕಿರಣ್ ಎಸ್., ಕೋಶಾಧಿಕಾರಿಯಾಗಿ ದಿನೇಶ್ ಗೌಡ ನಿರೊಲ್ಬೆ ಹಾಗೂ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

    ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಸಾಕಷ್ಟು ಸವಲತ್ತುಗಳು ದೊರೆಯುತ್ತದೆ. ಆದರೆ ವಿದ್ಯಾರ್ಥಿಗಳೇ ಇಲ್ಲದಿದ್ದರೆ ಏನು ಪ್ರಯೋಜನ? ಆದ್ದರಿಂದ ಸಮಿತಿ ಜತೆ ಗ್ರಾಮಸ್ಥರು ಕೈ ಜೋಡಿಸಿದಾಗ ಶಾಲೆಯನ್ನು ಉಳಿಸಿ ಬೆಳೆಸಲು ಸಾಧ್ಯ.

    ಪ್ರಕಾಶ್ ಅಂಚನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts