More

    ಹೆಚ್ಚಿನ ಶುಲ್ಕ ಕೇಳಿದರೆ ಮಾನ್ಯತೆ ರದ್ದು

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಖಾಸಗಿ ಅಥವಾ ಸರ್ಕಾರಿ ಶಾಲೆಗಳು ಹೆಚ್ಚು ಶುಲ್ಕ ಪಾವತಿಸುವಂತೆ ಪಾಲಕರು ಹಾಗೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ದೂರು ಕೇಳಿ ಬಂದಲ್ಲಿ ಬಿಇಒ ಮೂಲಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ಅವಿನಾಶ್ ಎಚ್ಚರಿಸಿದರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಹೊಂದಿದೆ. ಯಾವುದೇ ಭಾಗದ ಶಾಲೆಗಳು ಹೆಚ್ಚಿನ ಶುಲ್ಕ ಪಾವತಿಸುವಂತೆ ಪಾಲಕರು ಅಥವಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವಂತಿಲ್ಲ. ದೂರು ಬಂದಲ್ಲಿ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂದು ತಿಳಿಸಿದರು.

    ಕರೊನಾಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಒಟ್ಟು 7 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕರೊನಾ ಚಿಕಿತ್ಸೆಗಾಗಿ ಮೀಸಲಿಡಬೇಕು. ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಹೆಚ್ಚಿನ ದರ ವಿಧಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳ ಗ್ರೇಡ್-1 ಮಾದರಿಯ ಸರ್ಕಾರಿ ಆಸ್ಪತ್ರೆಗಳನ್ನು ಶೇ.100ರಷ್ಟು ಕರೊನಾ ಕೇರ್ ಸೆಂಟರ್​ಗಳಾಗಿ ಮಾರ್ಪಡಿಸಲಾಗಿದೆ ಎಂದರು.

    ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಒಟ್ಟು 27 ವೆಂಟಿಲೇಟರ್ ನೀಡಿದ್ದು ಜಿಲ್ಲಾಸ್ಪತ್ರೆಗಳಲ್ಲಿ 10 ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಲಾ 2 ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಸಂಪೂರ್ಣ ಉಚಿತ. ಜಿಲ್ಲೆಯ ಕರೊನಾ ಕೇರ್ ಸೆಂಟರ್​ಗಳು ಸರ್ಕಾರದ ನಿರ್ದೇಶನದಂತೆ ಊಟ, ಚಿಕಿತ್ಸೆ ಎಲ್ಲ ವ್ಯವಸ್ಥೆ ಒಳಗೊಂಡಿದೆ ಎಂದರು.

    ಈ ಬಾರಿ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಜಿಲ್ಲೆ 20ನೇ ಸ್ಥಾನ ಪಡೆದಿದೆ. ಆದರೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣದಲ್ಲಿ ಸುಧಾರಣೆಯಾಗಿದೆ. 600ಕ್ಕಿಂತ ಹೆಚ್ಚು ಅಂಕ ಪಡೆದ 126 ವಿದ್ಯಾರ್ಥಿಗಳು ನಮ್ಮ ಜಿಲ್ಲೆಯವರೇ ಎಂದು ಜಿಪಂ ಸದಸ್ಯ ರವೀಂದ್ರ ಬೆಳವಾಡಿ ತಿಳಿಸಿದರು.

    ಕರೊನಾ ಕಾರಣದಿಂದ ಶಾಲೆಗಳು ತಡವಾಗಿ ಆರಂಭವಾಗಲಿವೆ. ಹಾಗಾಗಿ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೊಳಿಸಿದೆ. ಈ ಮೂಲಕ ಶಿಕ್ಷಕರು ಶಾಲೆ ಬದಲಾಗಿ ವಿಶಾಲವಾದ ಆವರಣ, ದೇವಸ್ಥಾನ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತೆ ವಹಿಸಿ ಬೋಧನೆ ಮಾಡಲಿದ್ದಾರೆ. ವಯಸ್ಕರ ಶಿಕ್ಷಣ ಕುರಿತು ಹೆಚ್ಚಿನ ಜಾಗೃತಿ, ಪ್ರಚಾರ ಕೈಗೊಳ್ಳುವ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈವರೆಗೆ 3,248 ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, 31,336 ರ್ಯಾಂಡಮ್ ಟೆಸ್ಟ್ ನಡೆಸಲಾಗಿದೆ. ಅಲ್ಲದೆ ಕರೊನಾ ಚಿಕಿತ್ಸೆಗೆ 12,500 ಪಿಪಿಇ ಕಿಟ್​ಗಳು ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

    ಸಮಿತಿ ಸದಸ್ಯರಾದ ಅಮಿತಾ ಮುತ್ತಪ್ಪ, ಅನಸೂಯಾ ಗೋಪಿಕೃಷ್ಣ, ಶಿಲ್ಪಾ ರವಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts