More

    ಆತಂಕವಾದ, ಹಿಂಸಾಚಾರ ಹರಡುತ್ತಿರುವವರಲ್ಲಿ ಸುಶಿಕ್ಷಿತರೂ ಇದ್ದಾರೆ : ಮೋದಿ ಕಳವಳ

    ಕೊಲ್ಕತಾ: ಜಗತ್ತಿನಲ್ಲಿ ಆತಂಕವಾದ ಮತ್ತು ಹಿಂಸಾಚಾರಗಳನ್ನು ಹರಡುತ್ತಿರುವವರಲ್ಲಿ ಎಷ್ಟೋ ಜನ ಸುಶಿಕ್ಷಿತರು ಇರುವುದು ಚಿಂತೆಯ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದ್ಯಾರ್ಥಿ ಸಮುದಾಯವು “ದೇಶ ಮೊದಲು” ಎಂಬ ಧೋರಣೆಯನ್ನು ಬೆಳೆಸಿಕೊಳ್ಳಬೇಕು; ಸಮಸ್ಯೆಯ ಭಾಗವಾಗುವ ಬದಲು, ಪರಿಹಾರಗಳನ್ನು ಹುಡುಕಬೇಕು ಎಂದು ಕರೆ ನೀಡಿದ್ದಾರೆ.

    ಶನಿವಾರ (ಫೆಬ್ರವರಿ 20) ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನುದ್ದೇಶಿಸಿ, ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಿದರು. ರೈತ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಟೂಲ್​ಕಿಟ್​ ತಯಾರಿಸಿದ ಆರೋಪಿಗಳಲ್ಲಿ ಬಿಸಿನೆಸ್ ಸ್ಟಡೀಸ್ ಪದವೀಧರೆ ದಿಶಾ ರವಿ ಮತ್ತು ವಕೀಲೆ ನಿಕಿತ ಜೇಕಬ್ ಹೆಸರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಮಾತುಗಳು ಸೂಚ್ಯವಾಗಿದ್ದವು.

    ಇದನ್ನೂ ಓದಿ: ದಿಶಾ ಬಿಡುಗಡೆಗೆ ಎಸ್ಎಫ್ಐ ಆಗ್ರಹ

    “ಜಗತ್ತಲ್ಲಿ ಆತಂಕ ಹರಡುತ್ತಿರುವವರಲ್ಲಿ, ಹಿಂಸೆಯನ್ನು ಹರಡುತ್ತಿರುವವರಲ್ಲಿ ಕೂಡ ಅತಿಹೆಚ್ಚು ಕೌಶಲ್ಯ ಹೊಂದಿರುವ, ಅತಿಹೆಚ್ಚು ಓದಿರುವ, ಅತಿಹೆಚ್ಚು ಶಿಕ್ಷಣ ಹೊಂದಿರುವ ಜನರಿದ್ದಾರೆ. ಇನ್ನೊಂದೆಡೆ ಕರೊನಾ ಮಹಾಮಾರಿಯಿಂದ ಜಗತ್ತಿಗೆ ಮುಕ್ತಿ ಕೊಡಿಸಲು ಅಹೋರಾತ್ರಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿರುವವರೂ ಇದ್ದಾರೆ. ಇದು ಯಾವುದೇ ಸಿದ್ಧಾಂತಕ್ಕೆ ಸಂಬಂಧಪಟ್ಟ ವಿಷಯವಲ್ಲ. ಮೂಲ ಪ್ರಶ್ನೆ ಇರುವುದು ಮನೋಧರ್ಮದ್ದು. ನೀವು ಸಮಸ್ಯೆಯ ಭಾಗವಾಗಲು ಇಚ್ಛಿಸುತ್ತೀರೋ, ಪರಿಹಾರದ ಭಾಗವಾಗಲು ಇಚ್ಛಿಸುತ್ತೀರೋ.. ಅದು ನಿಮ್ಮ ಕೈಯಲ್ಲಿ ಇದೆ. ಜ್ಞಾನ ಮತ್ತು ಅಧಿಕಾರಗಳ ಜೊತೆಜೊತೆಯಾಗಿ ಜವಾಬ್ಧಾರಿ ಸಹ ಬರಬೇಕು” ಎಂದು ಮೋದಿ ಹೇಳಿದರು.

    ಬಂಗಾಳದ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯವು 1921 ರಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೂರ್ ಅವರು ಸ್ಥಾಪಿಸಿದ ಸಂಸ್ಥೆಯಾಗಿದೆ, ಪ್ರಧಾನ ಮಂತ್ರಿಗಳು ಈ ಸಂಸ್ಥೆಯ ಕುಲಪತಿ. ಟಾಗೋರರ “ವಿಶ್ವ ದೃಷ್ಟಿ”ಯನ್ನು ನೆನೆದ ಮೋದಿ, ಅವರ ಆಶಯ ಮಾಮೂಲಿ ಶಿಕ್ಷಣ ನೀಡುವ ಸಂಸ್ಥೆಯನ್ನು ಮಾಡುವುದಾಗಿರಲಿಲ್ಲ. ಬದಲಿಗೆ ಭಾರತೀಯ ಸಂಸ್ಕೃತಿಯು ಪೂರ್ಣ ಶಕ್ತಿಯನ್ನು ಪಡೆದು ಜಗತ್ತಿನಾದ್ಯಂತ ಹೊರಹೊಮ್ಮಲು ಅಗತ್ಯವಾದ ಸರ್ವತೋಮುಖ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಲಿಂಗ, ವಯಸ್ಸು, ವೃತ್ತಿ ಕೇಳಿಕೊಂಡು ಅಪರಾಧ ನಿರ್ಧಾರ ಆಗುತ್ತಾ…?” – ಅಮಿತ್ ಷಾ ಪ್ರಶ್ನೆ

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts