More

    ಎಜು ಟೂರಿಸಂಗೆ ಕರೊನಾಘಾತ

    ಭರತ್ ಶೆಟ್ಟಿಗಾರ್ ಮಂಗಳೂರು
    ಎಜು ಟೂರಿಸಂಗೆ ದೇಶದಲ್ಲೇ ಹೆಸರು ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ಕರೊನಾ ಹೊಡೆತ ನೀಡಿದೆ. ತಾಂತ್ರಿಕ, ತಾಂತ್ರಿಕೇತರ, ವೃತ್ತಿಪರ ಶಿಕ್ಷಣಕ್ಕಾಗಿ ಹೊರ ರಾಜ್ಯ-ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಸ್ಥಳೀಯ ವಿದ್ಯಾರ್ಥಿಗಳ ಮೊರೆ ಹೋಗುತ್ತಿವೆ.
    ಪದವಿ ಪೂರ್ವ, ಪದವಿ, ನರ್ಸಿಂಗ್, ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯಲು ಉಭಯ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಇದು ಕರಾವಳಿಯ ಅರ್ಥ ವ್ಯವಸ್ಥೆಗೂ ಪೂರಕವಾಗಿತ್ತು. ಪ್ರಸ್ತುತ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಶಿಕ್ಷಣ ಪ್ರವಾಸೋದ್ಯಮವೂ ಯಥಾಸ್ಥಿತಿಯಲ್ಲಿರುತ್ತಿದ್ದರೆ ಹೆಚ್ಚು ಅನುಕೂಲವಾಗುತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
    ಪರೀಕ್ಷೆ ಫಲಿತಾಂಶಕ್ಕೆ ಮುನ್ನವೇ ತಮಗೆ ಇದೇ ಶಿಕ್ಷಣ ಸಂಸ್ಥೆ ಬೇಕು ಎಂದು ದಾಖಲಾತಿ ಮಾಡಿಸಿಕೊಳ್ಳುತ್ತಿದ್ದ ಪಾಲಕರು ಈ ಬಾರಿ ಆತಂಕ, ಅನಿಶ್ಚಿತತೆ, ಸಂದಿಗ್ಧತೆಯಲ್ಲಿದ್ದಾರೆ. ಹೊರ ಜಿಲ್ಲೆ, ರಾಜ್ಯಗಳಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟೂ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಕೆಲ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.

    ಪರಿಸ್ಥಿತಿ ಸ್ವಲ್ಪ ಮಟ್ಟಿನ ಚೇತರಿಕೆ
    ಒಂದು ವಾರದಿಂದ ಪರಿಸ್ಥಿತಿ ಸ್ವಲ್ಪ ಚೇತರಿಕೆ ಕಾಣುತ್ತಿದ್ದು, ದಿನಕ್ಕೆ ನಾಲ್ಕೈದು ಮಂದಿ ದಾಖಲಾಗುತ್ತಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುತ್ತಾರೆ ತಲಪಾಡಿ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿನಾಯಕ್ ಬಿ.ಜಿ. ಹೊರಗಿನಿಂದ ಬರುವವರು ಮುಖ್ಯವಾಗಿ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. ಹಾಸ್ಟೆಲ್, ತರಗತಿಗಳಲ್ಲಿ ಯಾವ ರೀತಿಯ ಕಲಿಕಾ ವಾತಾವರಣ ಇರುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಕಾಸ್ ಪದವಿಪೂರ್ವ ಕಾಲೇಜು ಸಮನ್ವಯಾಧಿಕಾರಿ ಪಾರ್ಥಸಾರಥಿ ಜೆ. ಪಾಲೆಮಾರ್ ಅವರ ಮಾತು. ಉಡುಪಿ ಡಾ.ಜಿ.ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಭಾಸ್ಕರ್ ಶೆಟ್ಟಿಯವರ ಪ್ರಕಾರ, ಕಾಲೇಜಿಗೆ ಶೇ.50 ವಿದ್ಯಾರ್ಥಿಗಳು ಹೊರ ಜಿಲ್ಲೆಯಿಂದ ಬರುತ್ತಿದ್ದರು. ಈ ಬಾರಿ ಕೆಲವೇ ಮಂದಿ ಹೊರ ಜಿಲ್ಲೆಯವರು ದಾಖಲಾಗಿದ್ದು, ಹೆಚ್ಚಿನವರು ಸ್ಥಳೀಯ ಕಾಲೇಜಿಗೆ ಸೇರುತ್ತಿದ್ದಾರೆ.

    ಕಾಸರಗೋಡು ವಿದ್ಯಾರ್ಥಿಗಳಿಲ್ಲ
    ಕೇರಳದಿಂದ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಂಗಳೂರಿಗೆ, ಉಡುಪಿ, ಮಣಿಪಾಲಕ್ಕೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಜನೆಗೆ ಬರುತ್ತಿದ್ದರು. ಅದರಲ್ಲೂ ಕಾಸರಗೋಡು ಜಿಲ್ಲೆಯ ವಿವಿಧೆಡೆಯಿಂದ ಪ್ರತಿನಿತ್ಯ ಮಂಗಳೂರು, ಪುತ್ತೂರಿಗೆ ಬರುವ ಸಾವಿರಾರು ವಿದ್ಯಾರ್ಥಿಗಳಿದ್ದರು. ಪ್ರಸ್ತುತ ಗಡಿ ಬಂದ್ ಕಾರಣದಿಂದ ಇಲ್ಲಿಯವರೆಗೆ ಕಾಸರಗೋಡಿಗೆ ಸಂಬಂಧಿಸಿ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿಯಷ್ಟೇ ಆಗಿದೆ. ಕೆಲವರು ಈ ವರ್ಷ ಅಲ್ಲಿನ ಸ್ಥಳೀಯ ಕಾಲೇಜುಗಳಲ್ಲಿ ಪದವಿಪೂರ್ವ-ಪದವಿ ಶಿಕ್ಷಣ ಪಡೆದು ಮುಂದಿನ ವರ್ಷ ಜಿಲ್ಲೆಗೆ ಬರುವ ಯೋಜನೆ ಹಾಕಿಕೊಂಡಿದ್ದಾರೆ.

    ಶಾಲೆ, ಕಾಲೇಜುಗಳು ಯಾವಾಗ ಆರಂಭ ಎಂಬ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು-ಪಾಲಕರು ಆತಂಕಿತರಾಗಿದ್ದು, ಇದು ದಾಖಲಾತಿ ಮೇಲೆಯೂ ಪರಿಣಾಮ ಬೀರಿದೆ. ಬಸ್, ರೈಲು, ವಿಮಾನಯಾನ ಆರಂಭವಾದರಷ್ಟೇ ಹೊರ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರೀಕ್ಷಿಸಬಹುದು.
    ಡಾ.ಎಂ.ಮೋಹನ ಆಳ್ವ, ಅಧ್ಯಕ್ಷ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ

    ಕಾಲೇಜು ಯಾವಾಗ ಆರಂಭ ಎಂಬ ಗೊಂದಲ ಮತ್ತು ಕರೊನಾ ಭೀತಿಯಿಂದ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಪಿಯುಸಿಗೆ ಶೇ.60 ಮತ್ತು ಪದವಿ ತರಗತಿಗಳಿಗೆ ಶೇ.20 ಮಾತ್ರ ದಾಖಲಾತಿಯಾಗಿದೆ.
    ಪ್ರದೀಪ್ ಕುಮಾರ್, ಕಾರ್ಯದರ್ಶಿ, ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts