More

    ಅಣೆಕಟ್ಟು ಆತಂಕ; ಬ್ರಹ್ಮಪುತ್ರಾ ನದಿಗೆ ಚೀನಾ ಡ್ಯಾಂ ನಿರ್ಮಾಣ..

    ಭಾರತದ ಜತೆ ಭಾರಿ ಪ್ರಮಾಣದ ವ್ಯಾಪಾರ ವಹಿವಾಟುಗಳು ಇದ್ದರೂ, ಗಡಿ ಮತ್ತಿತರ ವಿಷಯಗಳಲ್ಲಿ ಚೀನಾದ ತಗಾದೆ ತಕರಾರು ಇದ್ದದ್ದೇ. ಪೂರ್ವ ಲಡಾಖಿನಲ್ಲಿ ಕ್ಯಾತೆ ತೆಗೆದಿದ್ದ ಚೀನಾ ಭಾರತದ ಬಿಗಿ ನಿಲುವು ಮತ್ತು ರಾಜತಾಂತ್ರಿಕ ಕಾರ್ಯತಂತ್ರದ ಫಲವಾಗಿ ಹಿಂದಡಿ ಇಟ್ಟಿದ್ದು ಇತಿಹಾಸ. ಈಗ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಟಿಬೆಟ್​ನಲ್ಲಿ ಅಣೆಕಟ್ಟು ನಿರ್ವಿುಸಲು ಸಜ್ಜಾಗಿದ್ದು, ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ ಗಡಿಗೆ ಅತಿ ಸಮೀಪದಲ್ಲಿ ಈ ಅಣೆಕಟ್ಟು ನಿರ್ವಣವಾಗಲಿದೆ. 14ನೇ ಪಂಚವಾರ್ಷಿಕ ಯೋಜನೆಗೆ ಚೀನಾದ ಸಂಸತ್ತು ಗುರುವಾರ ಅನುಮೋದನೆ ನೀಡಿದ್ದು ಅದರಲ್ಲಿ ಈ ಯೋಜನೆಯೂ ಸೇರಿದೆ. ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಈ ವರ್ಷವೇ ಆರಂಭಿಸುವಂತೆ ಟಿಬೆಟ್ ಸ್ವಾಯತ್ತ ಪ್ರದೇಶದ (ಟಿಎಆರ್) ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಈ ಜಲ ವಿದ್ಯುತ್ ಯೋಜನೆಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಪ್ರತಿಭಟನೆಯನ್ನೂ ದಾಖಲಿಸಿದೆ. ಬಾಂಗ್ಲಾದೇಶ ಸಹ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ‘ಈ ಯೋಜನೆ ಬಗ್ಗೆ ಭಾರತ ಮತ್ತು ಬಾಂಗ್ಲಾ ಆತಂಕಪಡುವ ಅಗತ್ಯವಿಲ್ಲ. ಈ ದೇಶಗಳ ಆಸಕ್ತಿಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳುತ್ತೇವೆ’ ಎಂದು ಚೀನಾ ಸ್ಪಷ್ಟನೆ ನೀಡಿದೆಯಾದರೂ ಆ ಮಾತು ನಂಬಲು ಯಾರೂ ತಯಾರಿಲ್ಲ. ಹಾಗೆನೋಡಿದರೆ, ನದಿಪಾತ್ರದ ಮೇಲಿನ ಮತ್ತು ಕೆಳಗಿನ ದೇಶ-ರಾಜ್ಯಗಳ ನಡುವೆ ಜಲತಗಾದೆ ಇದ್ದಿದ್ದೇ. ನದಿಯ ಕೆಳಭಾಗದ ದೇಶವಾಗಿ ಗಡಿ ನೀರಿನ ಬಳಕೆಯ ಹಕ್ಕನ್ನು ಭಾರತ ಪ್ರತಿಪಾದಿಸುತ್ತಲೇ ಬಂದಿದೆ. ನದಿಪಾತ್ರದ ಮೇಲಿನ ಭಾಗದ ಚಟುವಟಿಕೆಗಳಿಂದ ಕೆಳಭಾಗದ ಪ್ರದೇಶಗಳಿಗೆ ತೊಂದರೆಯಾಗಬಾರದು ಎಂಬ ನಿಲುವನ್ನು ಭಾರತ ಹೊಂದಿದೆ.

    ಮೆಡಾಗ್ ಕೌಂಟಿಯಲ್ಲಿ ಅಣೆಕಟ್ಟು ನಿರ್ವಿುಸಲು ಚೀನಾ ಮುಂದಾಗಿದ್ದು, ಇದು ಅರುಣಾಚಲ ಪ್ರದೇಶದ ಗಡಿಯಲ್ಲಿದೆ. ಯಾವುದೇ ದೇಶ ತನ್ನ ಜನರ ಒಳಿತಿಗಾಗಿ, ಪ್ರಯೋಜನಕ್ಕಾಗಿ ತನ್ನ ವ್ಯಾಪ್ತಿಯಲ್ಲಿ ಯೋಜನೆಗಳನ್ನು ನಿರ್ವಿುಸುವುದಕ್ಕೆ ಸಾಮಾನ್ಯವಾಗಿ ಯಾರೂ ತಕರಾರು ಮಾಡುವುದಿಲ್ಲ. ಆದರೆ ಅದರ ಉದ್ದೇಶ ಸಾಚಾ ಆಗಿರಬೇಕು, ಮತ್ತೊಬ್ಬರಿಗೆ ತೊಂದರೆ ಕೊಡುವುದಾಗಿರಬಾರದು. ಆದರೆ ಚೀನಾ ವಿಷಯದಲ್ಲಿ ಹೀಗೆ ಹೇಳುವ ಹಾಗಿಲ್ಲ. ಅದರ ಇತಿಹಾಸವೇ ಹಾಗಿದೆ. ಭಾರತದ ವಿಷಯದಲ್ಲಿ 60ರ ದಶಕದಲ್ಲಿ ಅದು ಮಾಡಿದ ವಿಶ್ವಾಸದ್ರೋಹದ ಕೆಲಸವನ್ನು ಮರೆಯುವಂತಿಲ್ಲ. ಗಡಿ ವಿಷಯದಲ್ಲಿ ತಗಾದೆ ತೆಗೆಯುವ ಚೀನಾ, ಮತ್ತೊಂದೆಡೆ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುತ್ತ ಆ ದೇಶದ ಭಯೋತ್ಪಾದನಾ ಚಟುವಟಿಕೆಗಳಿಗೆ ಪರೋಕ್ಷ ನೆರವೀಯುತ್ತದೆ. ಭಾರತವು ಏಷ್ಯಾ ವಲಯದಲ್ಲಿ ತನಗೆ ಸರಿಸಮನಾಗಿ ಬೆಳೆಯುವುದನ್ನು ಬಯಸದ ಚೀನಾ, ಅಡ್ಡಗಾಲು ಹಾಕಲು ಎಲ್ಲ ಮಾರ್ಗಗಳನ್ನೂ ಬಳಸುತ್ತದೆ. ಆದರೆ ಈಗ ಭಾರತ ಸಹ ಗಟ್ಟಿ ನಿಲುವು ಪ್ರದರ್ಶಿಸುತ್ತಿದ್ದು, ಚೀನಾದ ಆಕ್ರೋಶವನ್ನು ಹೆಚ್ಚಿಸಿದೆ. ಹೀಗಾಗಿಯೇ ಅದು ಸಮಸ್ಯೆಗಳನ್ನು ಸೃಷ್ಟಿಸಲು, ಕಿರಿಕಿರಿ ನೀಡಲು ಸನ್ನಿವೇಶಗಳನ್ನು ಎದುರುನೋಡುತ್ತಿರುತ್ತದೆ. ಬ್ರಹ್ಮಪುತ್ರಾ ನದಿ ಅಣೆಕಟ್ಟು ವಿಷಯದಲ್ಲಿ ಭಾರತ ತನ್ನ ಬಿಗಿ ನಿಲುವನ್ನು ಸಡಿಲಿಸಬಾರದು. ಏಕೆಂದರೆ, ಭವಿಷ್ಯದಲ್ಲಿ ಚೀನಾ ತೊಂದರೆ ಉಂಟುಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಭಾರತ ಸರ್ಕಾರ ಲಡಾಖ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರದರ್ಶಿಸಿದ ಖಡಕ್ ನಿಲುವನ್ನು ಈ ವಿಷಯದಲ್ಲಿಯೂ ಮುಂದುವರಿಸುತ್ತದೆ ಎಂದು ನಂಬಲು ಕಾರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts