More

    ಸಂಪಾದಕೀಯ| ಕೃಷಿಗೆ ಉತ್ತೇಜನಕಾರಿ ನಿರ್ಧಾರ

    ಉಗ್ರಾಣ ನಿಗಮದ ಆರ್​ಐಡಿಎಫ್ -22 ಯೋಜನೆ ಅಡಿಯಲ್ಲಿ 2015-16ನೇ ಹಣಕಾಸು ವರ್ಷದಲ್ಲಿ ಕೈಗೊಂಡಿದ್ದ ಉಗ್ರಾಣಗಳ ನಿರ್ಮಾಣ ಯೋಜನೆಯ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದರ ಜತೆಗೆ ಈ ಯೋಜನೆ ಪೂರ್ಣಗೊಳಿಸಲು ಅಗತ್ಯವಾದ 376.54 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. 2015-16ರಲ್ಲಿ 862.32 ಕೋಟಿ ರೂ. ವೆಚ್ಚದಲ್ಲಿ 163 ಉಗ್ರಾಣ ನಿರ್ಮಾಣ ಹಾಗೂ 89 ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಲಾಗಿತ್ತು. ಇವುಗಳ ಪೈಕಿ 87 ಉಗ್ರಾಣ ಮಾತ್ರ ನಿರ್ವಿುಸಲಾಗಿದ್ದು, ಇನ್ನೂ 76 ಉಗ್ರಾಣಗಳು ಅಪೂರ್ಣ ಸ್ಥಿತಿಯಲ್ಲಿವೆ. 47 ಉಗ್ರಾಣಗಳಲ್ಲಿ ಮೂಲಸೌಕರ್ಯ ಕಾಮಗಾರಿ ಬಾಕಿ ಇದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತಿವೆ. ಈ ಯೋಜನೆಯ ವಿಳಂಬಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಕಾರಣ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಸರ್ಕಾರ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದೆ. ಹಾಗೂ ಅಪೂರ್ಣ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ 376.54 ಕೋಟಿ ರೂ. ಹಣ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

    ಯೋಜನೆಯ ಅಕ್ರಮದ ತನಿಖೆ ಮತ್ತು ಈ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಒಂದು ಭಾಗವಾದರೆ ಯೋಜನೆ ರೂಪಿಸಿದ ಉದ್ದೇಶ ಸಫಲತೆ ಮತ್ತೊಂದು ಭಾಗ. ಯೋಜಿತ 163 ಉಗ್ರಾಣಗಳ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಾಮಗಾರಿ ಪೂರ್ಣಗೊಂಡರೆ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಯಾವುದೇ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳದಿದ್ದರೆ ಮೂಲ ಉದ್ದೇಶಕ್ಕೆ ಧಕ್ಕೆಯಾಗುವುದರಲ್ಲಿ ಸಂದೇಹ ಇಲ್ಲ. ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಪೂರ್ವಿಕರು ಹಗೇವು ವ್ಯವಸ್ಥೆ ಮಾಡಿಕೊಂಡಿದ್ದರು. ಸುಗ್ಗಿ ಮುಗಿದ ನಂತರ ಆಹಾರ ಧಾನ್ಯಗಳನ್ನು ಹಗೇವುನಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದರು. ಈಗ ಹಗೇವುಗಳು ಮುಚ್ಚಿಹೋಗಿದ್ದು, ದಾಸ್ತಾನು ಮಾಡಲು ರೈತರ ಬಳಿ ವ್ಯವಸ್ಥೆ ಇಲ್ಲ. ಸುಗ್ಗಿ ಮುಗಿಯುತ್ತಿದ್ದಂತೆ ನೇರವಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಬೇಕಾಗಿದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಇದ್ದ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಆವಕ ಹೆಚ್ಚು ಇರುವ ಸಮಯದಲ್ಲಿ ಬೆಲೆ ಕಡಿಮೆ ಇರುತ್ತದೆ. ಹೀಗಾಗಿ ರೈತಾಪಿ ವರ್ಗಕ್ಕೆ ನಷ್ಟದ ಸಾಧ್ಯತೆಗಳೇ ಅಧಿಕ.

    ಉಗ್ರಾಣದ ವ್ಯವಸ್ಥೆ ಇದ್ದರೆ ರೈತರು ಅಡಮಾನ ಸಾಲ ಪಡೆಯಲು ಸಾಧ್ಯವಿದ್ದು, ಕೃಷಿ ಉತ್ಪನ್ನಗಳನ್ನು ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ನಂತರದ ಕೃಷಿ ಚಟುವಟಿಕೆಗೆ ಅಗತ್ಯವಾದ ಸಾಲ ಪಡೆಯಲು ಸಾಧ್ಯವಾಗಲಿದೆ. ರಾಜ್ಯದ ಕೆಲವು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳೇ ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನನುಕೂಲವೇ ಅಧಿಕ. ಸರ್ಕಾರದಿಂದ ಉಗ್ರಾಣದ ವ್ಯವಸ್ಥೆ ಇದ್ದರೆ ರೈತರು ಸುಗ್ಗಿ ನಂತರ ಕೃಷಿ ಉತ್ಪನ್ನಗಳನ್ನು ಉಗ್ರಾಣಗಳಲ್ಲಿ ದಾಸ್ತಾನು ಮಾಡಿ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಇದ್ದಾಗ ಮಾರಾಟ ಮಾಡಬಹುದು. ಸರ್ಕಾರದ ಉಗ್ರಾಣ ನಿರ್ವಣದ ಉದ್ದೇಶವೇ ರೈತರಿಗೆ ನೆರವಾಗುವುದು. ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಅಪೂರ್ಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts