Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಮತ್ತೊಂದು ಮೈಲಿಗಲ್ಲು

Saturday, 13.01.2018, 3:02 AM       No Comments

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸುವ ಮೂಲಕ ಅಂತಾರಾಷ್ಟ್ರೀಯ ವಲಯದ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ತನ್ನ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಏರಿಸಿಕೊಂಡಿದೆ. ಭೂ ಪರಿವೀಕ್ಷಣೆ ಉದ್ದೇಶದ ಕಾಟೋಸ್ಯಾಟ್-2 ಸೇರಿದಂತೆ 31 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಮೂಲಕ ನೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಭಾರತ ಎಂಬ ಹೆಮ್ಮೆಯ ಸಾಧನೆಯೂ ಸಾಕಾರಗೊಂಡಿದೆ. ನಿಜಾರ್ಥದಲ್ಲಿ ಇದು ಅಸಾಧಾರಣ ಯಶಸ್ಸೇ ಸರಿ. ಅಗ್ಗದ ದರದಲ್ಲಿ ಮಂಗಳಯಾನ ಕೈಗೊಂಡಾಗಲೇ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಸೇರಿದಂತೆ ವಿಶ್ವದ ದೈತ್ಯ ಶಕ್ತಿಗಳು ಭಾರತದ ಸಾಧನೆಗೆ ಬೆರಗಾಗಿದ್ದವು, ಮುಕ್ತಕಂಠದಿಂದ ಪ್ರಶಂಸಿಸಿದ್ದವು.

ಇಸ್ರೋ ಸ್ವದೇಶಿ ನಿರ್ವಿುತ ನೂರನೇ ಸ್ಯಾಟಲೈಟ್ ಉಡಾವಣೆ ಮಾಡಲಿದೆ ಎಂದಾಗ ಸಹಜವಾಗಿಯೇ ಜಗದ ಕುತೂಹಲದ ಕಣ್ಣು ಭಾರತದತ್ತ ನೆಟ್ಟಿತ್ತು. 2017ರ ಆಗಸ್ಟ್ 31ರಂದು ಪಿಎಸ್​ಎಲ್​ವಿ ರಾಕೆಟ್ ಮೂಲಕ ದೇಶದ 8ನೇ ನ್ಯಾವಿಗೇಷನ್ ಐಆರ್​ಎನ್​ಎಸ್​ಎಸ್-1ಎಚ್ ಉಪಗ್ರಹ ಉಡಾವಣೆ ಉಡಾವಣೆ ವಿಫಲಗೊಂಡಿದ್ದರಿಂದ ಒಂದಿಷ್ಟು ಆತಂಕ, ಅಳುಕು ಮನೆಮಾಡಿತ್ತು. ಆದರೆ, ಸ್ವದೇಶಿ ನಿರ್ವಿುತ ಮೂರು, ಕೆನಡಾ, ಫ್ರಾನ್ಸ್, ಫಿನ್ಲೆಂಡ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕದ 28 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರುವ ಮೂಲಕ ಇಸ್ರೋ ಗೆಲುವಿನ ನಗೆ ಬೀರಿದೆ. ಈ ಮೂಲಕ, ಸದ್ಯದಲ್ಲೇ ನಿವೃತ್ತರಾಗಲಿರುವ ಅಧ್ಯಕ್ಷ ಕಿರಣ್ ಕುಮಾರ್ ಅವರಿಗೆ ಇಸ್ರೋ ಯಶಸ್ಸಿನ ಉಡುಗೊರೆ ನೀಡಿದಂತಾಗಿದೆ.

2018ರ ಮೊದಲ ಉಡಾವಣೆ ಯಶಸ್ವಿ ಆಗಿರುವುದರಿಂದ ಹುಮ್ಮಸ್ಸಿನಲ್ಲಿರುವ ಇಸ್ರೋ ಈ ವರ್ಷ ಮತ್ತಷ್ಟು ಮಹತ್ವದ ಯೋಜನೆಗಳನ್ನು ಸಾಕಾರಗೊಳಿಸಲಿದೆ. ತಿಂಗಳಿಗೆ ಒಂದರಂತೆ ರಾಕೆಟ್​ನ್ನು ನಭಕ್ಕೆ ಚಿಮ್ಮಿಸಲು ಯೋಜನೆ ಹಾಕಿಕೊಂಡಿರುವ ಇಸ್ರೋ ಚಂದ್ರಯಾನ-2 ಯೋಜನೆಗೂ ಭರದ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲದೆ, ಅತ್ಯಾಧುನಿಕ ಸಂವಹನ ಉಪಗ್ರಹಗಳಾದ ಜಿಸ್ಮಾಟ್-6ಎ ಮತ್ತು ಜಿಸ್ಮಾಟ್-29 ಸಹ ಈ ವರ್ಷ ಉಡ್ಡಯನವಾಗಲಿವೆ. ಈಗ ಉಡಾವಣೆಯಾಗಿರುವ ಕಾಟೋಸ್ಯಾಟ್-2 ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ಚಿತ್ರಣ, ಕರಾವಳಿ ಅಂಚಿನ ಭೂಮಿಯನ್ನು ರಸ್ತೆನಿರ್ವಣಕ್ಕೆ ಬಳಕೆ ಮಾಡುವ ಉದ್ದೇಶದ ರೇಖಾಚಿತ್ರಗಳನ್ನು ಹೈಬೀಮ್ ತಂತ್ರಜ್ಞಾನದಲ್ಲಿ ಸೆರೆಹಿಡಿದು ರವಾನಿಸಲಿದೆ. ಹಾಗಾಗಿ, ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಆನೆಬಲ ಒದಗಲಿದ್ದು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಅನುವಾಗಲಿದೆ.

ಹಲವು ಮಹತ್ವದ ರಂಗಗಳನ್ನು ಗಮನದಲ್ಲಿಟ್ಟುಕೊಂಡು ಉಪಗ್ರಹಗಳನ್ನು ಉಡಾವಣೆ ಮಾಡಿರುವ ಇಸ್ರೋ ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ನೇರವಾಗಿ ಪ್ರಯೋಜನವಾಗುವಂಥ ಮತ್ತು ಪರಿಸರಕ್ಕೆ ಪೂರಕವಾದ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮುಂದಾಗಲಿ. ಇಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಇಸ್ರೋ ಖಾಸಗಿ ಸಂಸ್ಥೆ ಜೊತೆ ಈಗಾಗಲೇ ಕೈಜೋಡಿಸಿರುವುದು ಇಲ್ಲಿ ಉಲ್ಲೇಖನೀಯ. ಈಗಿನ ಆಧುನಿಕ ಬದುಕು ಪ್ರಕೃತಿ ಮತ್ತು ನಾಗರಿಕತೆಗಳ ನಡುವೆ ಸಂಘರ್ಷ ಹುಟ್ಟುಹಾಕಿದ್ದು ಪ್ರಕೃತಿಗೆ ಪೂರಕವಾಗಿ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಇಸ್ರೋದಂಥ ಸಂಸ್ಥೆಗಳು ಕೂಡ ತೊಡಗಿಸಿಕೊಂಡಲ್ಲಿ ಹೆಚ್ಚು ಪ್ರಯೋಜನವಾದೀತು.

Leave a Reply

Your email address will not be published. Required fields are marked *

Back To Top