More

    ಹಣದುಬ್ಬರ ನಿಯಂತ್ರಿಸಿ; ಇಂಧನ ಬೆಲೆ ಏರಿಕೆಯಿಂದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ

    ಕರೊನಾ ಸಂಕಷ್ಟ ಆರ್ಥಿಕ ರಂಗಕ್ಕೆ ಬಲವಾದ ಆಘಾತ ನೀಡಿದೆ. ಭಾಗಶಃ ಲಾಕ್​ಡೌನ್ ಮುಗಿದಿದ್ದರೂ, ವ್ಯಾಪಾರ-ವಹಿವಾಟು ನಿರೀಕ್ಷೆಯಷ್ಟು ಚೇತರಿಕೆ ಕಾಣುತ್ತಿಲ್ಲ. ಹಲವು ರಂಗಗಳು ತೀವ್ರ ಹಿನ್ನಡೆ ಅನುಭವಿಸಿವೆ. ಕೈಗಾರಿಕೆಗಳು ಕಚ್ಚಾವಸ್ತುವಿನ ಕೊರತೆ ಅನುಭವಿಸುತ್ತಿವೆ. ಇದೆಲ್ಲದರ ಮಧ್ಯೆ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ್ದು ಇಂಧನ ಬೆಲೆ ಏರಿಕೆ. 2021ರ ಮೇ 4ರಿಂದ ಆರಂಭವಾದ ಬೆಲೆಯೇರಿಕೆ ಪರ್ವ ಜುಲೈ 17ರವರೆಗೂ ಮುಂದುವರಿಯಿತು. ಈ ಅವಧಿಯಲ್ಲಿ ಪೆಟ್ರೋಲ್ ದರ 11.44 ರೂ. ಮತ್ತು ಡೀಸೆಲ್ ಬೆಲೆ 9.14 ರೂ. ಹೆಚ್ಚಳ ಕಂಡಿತು. ಇದರಿಂದ ದೇಶದ ಅರ್ಧಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಹಲವು ತಿಂಗಳ ಬಳಿಕ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 20 ಪೈಸೆ ಕಡಿಮೆ ಆಗಿದ್ದು, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 101.64 ರೂ. ಹಾಗೂ ಡೀಸೆಲ್ ಬೆಲೆ 89.07 ರೂ.ಗೆ ಇಳಿದಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ದರ 75ರಿಂದ 66 ಡಾಲರ್​ಗೆ ತಗ್ಗಿರುವುದು ಇದಕ್ಕೆ ಕಾರಣ. ಆದರೆ, ತೆರಿಗೆ ಹೊರೆ ಶ್ರೀಸಾಮಾನ್ಯರಿಗೆ ಕಡುಕಷ್ಟವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ, ಇಂಧನ ಬೆಲೆಯೇರಿಕೆಯಿಂದ ಸರಕು ಸಾಗಣೆ, ಸಾರಿಗೆ ಸೇರಿ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಯುಪಿಎ ಸರ್ಕಾರದ ಅವಧಿಯ ತೈಲ ಬಾಂಡ್​ಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ತಗ್ಗಿಸುವಲ್ಲಿ ದೊಡ್ಡ ತಡೆಯಾಗಿದೆ’ ಎಂಬ ಸಬೂಬನ್ನಷ್ಟೇ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಹಣಕಾಸು ನೀತಿ ಸಮಿತಿಯ ಸದಸ್ಯರು ಸಹ ‘ಅತಿಯಾದ ತೆರಿಗೆಗಳಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ತೆರಿಗೆಗಳನ್ನು ಕಡಿತ ಮಾಡುವಂತೆಯೂ ಈ ಸದಸ್ಯರು ಕರೆ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ವಿವಿಧ ಕ್ಷೇತ್ರಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇದೇ ಫೆಬ್ರವರಿಯಲ್ಲಿ ಅಭಿಪ್ರಾಯಪಟ್ಟಿದ್ದರು.

    ತೆರಿಗೆ ಹೊರೆಯನ್ನು ಕೊಂಚವಾದರೂ ಇಳಿಸುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣಕ್ಕೆ ತರಬಹುದು. ಇದೇನು ಸರ್ಕಾರಕ್ಕೆ ಗೊತ್ತಿರದ ವಿಷಯವೇನಲ್ಲ. ಅದು ಈ ಬೇಡಿಕೆ ಬಗ್ಗೆ ಜಾಣಮೌನ ವಹಿಸಿ, ಬೊಕ್ಕಸ ಭರ್ತಿಯ ಕಡೆಗೆ ಗಮನ ನೀಡುತ್ತಿದೆ. ಬಹುತೇಕ ರಾಜ್ಯ ಸರ್ಕಾರಗಳೂ ಇದೇ ನಿಲುವು ಹೊಂದಿವೆ. ದೇಶದ ಹಲವು ರಂಗಗಳು, ಜನಸಾಮಾನ್ಯರು ತೆರಿಗೆ ಭಾರದಿಂದ ಕಂಗೆಟ್ಟಿರುವಾಗ ಸರ್ಕಾರದ ಮೊದಲ ಆದ್ಯತೆ ಜನಹಿತವನ್ನು ಕಾಪಾಡುವುದಾಗಬೇಕು. ಆರ್​ಬಿಐ ಸಲಹೆಯನ್ನಾದರೂ ಗಂಭೀರವಾಗಿ ಸ್ವೀಕರಿಸಿ, ಕೇಂದ್ರ ತೆರಿಗೆ ಭಾರ ಕಡಿಮೆ ಮಾಡಿದರೆ ಬೆಲೆಯೇರಿಕೆಯ ಆಘಾತದ ನಡುವೆ ಸಣ್ಣ ಚೇತರಿಕೆ ದೊರೆತಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts