More

    ಸಂಪಾದಕೀಯ | ತಾರ್ಕಿಕ ಅಂತ್ಯಕ್ಕೆ ತನ್ನಿ; ಪರ್ಸಂಟೇಜ್ ಆರೋಪದ ಗದ್ದಲ

    ಸರ್ಕಾರದ ಕಾಮಗಾರಿ ಯಾವುದೇ ಇರಲಿ, ಅಲ್ಲಿ ಹಣದ ‘ವ್ಯವಹಾರ’ ನಡೆಯುತ್ತದೆ ಎಂಬುದು ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಣ ಈ ಮೈತ್ರಿ ಬಗ್ಗೆ ಯಾರೂ ಬಹಿರಂಗವಾಗಿ ಮಾತಾಡಲು ಇಷ್ಟಪಡುವುದಿಲ್ಲ. ಆದರೆ ರಾಜ್ಯ ರಾಜಕೀಯ ವಲಯದಲ್ಲಿ ಈ ಸಂಗತಿ ಹಿಂದಿನಿಂದಲೂ ಸದ್ದುಮಾಡುತ್ತಿದೆ. ಈಗಂತೂ ಈ ವಿಷಯ ಬಿರುಗಾಳಿಯನ್ನೇ ಎಬ್ಬಿಸಿದೆ. ಬೆಳಗಾವಿ ಅಧಿವೇಶನದಲ್ಲಿಯೂ ಪ್ರಸ್ತಾಪವಾಗಿದೆ. ‘ಸರ್ಕಾರಿ ಕಾಮಗಾರಿಗಳಲ್ಲಿ ಶೇ.40 ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ’ ಎಂಬ ಆರೋಪ ರಾಜ್ಯದ ಸರಹದ್ದು ದಾಟಿ ನೇರ ಪ್ರಧಾನಿಯವರಿಗೇ ಗುತ್ತಿಗೆದಾರರಿಂದ ದೂರುಪತ್ರ ಹೋಗಿರುವುದು ಕುತೂಹಲಕರ.

    ಹೀಗಾಗಿ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಏನೆಲ್ಲ ಬೆಳವಣಿಗೆಗಳಾಗಬಹುದು ಎಂಬುದನ್ನು ಕಾದುನೋಡಬೇಕು. ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ‘10 ಪರ್ಸಂಟೇಜ್ ಸರ್ಕಾರ’ ಎಂದು ಟೀಕಿಸಿದ್ದರು. ವಿಪಕ್ಷಗಳವರು ಈಗ ಆ ವಿಷಯ ಪ್ರಸ್ತಾಪಿಸಿ ‘ನಿಮ್ಮ ಸರ್ಕಾರ ಎಷ್ಟು ಪರ್ಸಂಟೇಜಿನದು?’ ಎಂದು ಬಿಜೆಪಿಯವರ ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯಿಂದ ತನಿಖೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಇದರ ಫಲಶ್ರುತಿ ಏನೆಂಬುದನ್ನು ನೋಡಬೇಕು. ‘ಪಕ್ಷ ಯಾವುದಿದ್ದರೂ ಎಲ್ಲ ಸರ್ಕಾರಗಳಲ್ಲಿ ಇಂಥ ವ್ಯವಹಾರ ನಡೆಯುತ್ತದೆ; ಹೀಗೆಂದೇ ಬೃಹತ್ ಯೋಜನೆಗಳಿಗೆ ಹೆಚ್ಚು ಒಲವು ತೋರಿಸುತ್ತಾರೆ’ಎಂದು ಆಡಳಿತದ ಎಲ್ಲ ಮಜಲುಗಳನ್ನು ಬಲ್ಲವರು ಹೇಳುತ್ತಾರೆ.

    ಕಾಮಗಾರಿಯ ಗುತ್ತಿಗೆ ಪಡೆಯುವಾಗಲೇ ಇಂತಿಷ್ಟು ಎಂದು ನಿಗದಿಯಾಗಿಬಿಟ್ಟರೆ ಮುಂದೆ ಆ ಕಾಮಗಾರಿ ಗುಣಮಟ್ಟ ಹೇಗಿರಬಹುದು ಎಂದು ಆಲೋಚಿಸಿದರೇ ದಿಗಿಲಾಗುತ್ತದೆ. ನಮ್ಮಲ್ಲಿ ಅನೇಕ ಕಾಮಗಾರಿಗಳು ಕಳಪೆಯಾಗುವುದಕ್ಕೆ ಇದೂ ಒಂದು ಕಾರಣವಿರಬಹುದು. ಏಕೆಂದರೆ, ಗುತ್ತಿಗೆದಾರ ವಿವಿಧ ಹಂತಗಳಲ್ಲಿ ಕೈಬಿಸಿ ಮಾಡಿ ಕಾಮಗಾರಿ ಗಿಟ್ಟಿಸಿಕೊಂಡರೆ, ಅಲ್ಲಿ ನಿರೀಕ್ಷಿತ ಗುಣಮಟ್ಟ ಸಾಧ್ಯವೇ? ಇದಲ್ಲದೆ, ಅನಗತ್ಯವಾಗಿ ಸಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ತಂತ್ರವನ್ನೂ ಅನುಸರಿಸುವವರಿದ್ದಾರೆ. ಇದು ಹಣಗಳಿಕೆಯ ವಾಮಮಾರ್ಗವೇ ವಿನಾ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ. ಅದರಲ್ಲೂ ಈಗ ಕರೊನಾ ಕಾರಣದಿಂದಾಗಿ ಸರ್ಕಾರಗಳ ಆದಾಯದ ಮೇಲೂ ಪರಿಣಾಮವಾಗಿದೆ. ಗುತ್ತಿಗೆದಾರರಿಗೆ ದೊಡ್ಡ ಪ್ರಮಾಣದ ಬಾಕಿ ನೀಡಬೇಕಿದೆ. ಆದ್ದರಿಂದ ಇರುವ ಸೀಮಿತ ಹಣಕಾಸಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ವಿವೇಚನೆ ತೋರಬೇಕು. ಸರ್ಕಾರಿ ಕಾಮಗಾರಿಗಳಲ್ಲಿ ಪರ್ಸಂಟೇಜ್ ಬಗ್ಗೆ ಈಗ ಕೇಳಿಬರುತ್ತಿರುವ ಹುಯಿಲು ಬರೀ ವಾದವಿವಾದಕ್ಕೆ ಸೀಮಿತವಾಗದೆ ಈ ಸಮಯವನ್ನು ಬಳಸಿಕೊಂಡು ಸರ್ಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು ಎಂಬುದು ಜನರ ನಿರೀಕ್ಷೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಜವಾಬ್ದಾರಿಯೂ ಇದೆ. ಆದರೆ, ಹಣಬಲದ ಇಂದಿನ ವ್ಯವಸ್ಥೆಯಲ್ಲಿ ಇಂಥದೊಂದು ಪಾರದರ್ಶಕತೆ ಸಾಧ್ಯವೇ ಎಂಬ ಪ್ರಶ್ನೆಯೂ ಇದ್ದೇ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts