More

    ಕಣ್ಗಾವಲು ವ್ಯವಸ್ಥೆ ಅಗತ್ಯ: ಜೂಜು- ಅಕ್ರಮ ಸಾಲ ಚೀನಾ ಆ್ಯಪ್​ಗೆ ನಿಷೇಧ

    ಬೆಟ್ಟಿಂಗ್, ಜೂಜು, ಅಕ್ರಮ ಸಾಲ ಸೇವೆಗಾಗಿ ಚೀನಾ ಕಂಪನಿಗಳು ಸೇರಿದಂತೆ ವಿದೇಶಿ ಸಂಸ್ಥೆಗಳು ಬಳಸುವ 232 ಆಪ್​ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಎಲೆಕ್ಟಾ ›ನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಷೇಧಿಸಿರುವ ಈ ಆಪ್​ಗಳಲ್ಲಿ 138 ಆಪ್​ಗಳು ಬೆಟ್ಟಿಂಗ್, ಜೂಜು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದವುಗಳಾದರೆ, 94 ಆಪ್​ಗಳು ಸಾಲ ಸೇವೆಯನ್ನು ಕಾನೂನುಬಾಹಿರವಾಗಿ ಒದಗಿಸುವವುಗಳಾಗಿವೆ. ಇಂತಹ ಆಪ್​ಗಳ ವಿರುದ್ಧ ಕೇಂದ್ರ ಸರ್ಕಾರವು ಆಗಾಗ್ಗೆ ಕ್ರಮ ಕೈಗೊಳ್ಳುತ್ತಿದ್ದರೂ ಇವುಗಳ ಹಾವಳಿ ಮುಂದುವರಿದಿದೆ. ಹೀಗಾಗಿ, ಇವುಗಳನ್ನು ನಿರಂತರವಾಗಿ ನಿಯಂತ್ರಿಸಲು, ಸದೆಬಡಿಯಲು ಶಾಶ್ವತವಾದ ಕಣ್ಗಾವಲು ವ್ಯವಸ್ಥೆಯ ಅನಿವಾರ್ಯತೆ ತಲೆದೋರುತ್ತಿದೆ.

    ಲಕ್ಷಾಂತರ ರೂಪಾಯಿ ಸಾಲವನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನೀಡುವುದಾಗಿ ಮನಿ ಲೋನ್ ಆಪ್​ಗಳ ಮೂಲಕ ಆಮಿಷವೊಡ್ಡಿ ಗ್ರಾಹಕರನ್ನು ಸೆಳೆಯಲಾಗುತ್ತದೆ. ನಂತರ ಹೆಚ್ಚಿನ ಬಡ್ಡಿ ದರ ವಿಧಿಸಿ, ಕಿರುಕುಳ ನೀಡಿ ಸುಲಿಗೆ ಮಾಡಲಾಗುತ್ತದೆ. ಈ ಕುರಿತು 2021ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅಧ್ಯಯನ ನಡೆಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಸಮಿತಿಯೊಂದು ಸಾಲ ನೀಡುವ 600 ಅಕ್ರಮ ಆಪ್​ಗಳನ್ನು ಪತ್ತೆ ಮಾಡಿತ್ತು. ಡಿಜಿಟಲ್ ಸಾಲ ಒದಗಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದೂ ಗುರುತಿಸಿತ್ತು. ಇಂತಹ ಆಪ್​ಗಳ ಮೇಲೆ ಕಣ್ಗಾವಲು ಇಡಬೇಕೆಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು. ಆಗ, ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದುಹಾಕಿದ್ದರೂ ಇವುಗಳ ಹಾವಳಿ ನಿಂತಿಲ್ಲ ಎಂಬುದಕ್ಕೆ ಈಗ ಕೇಂದ್ರ ಸರ್ಕಾರವೇ ನಿಷೇಧಿಸಿರುವ ಆಪ್​ಗಳು ಸೂಚಿಸುತ್ತವೆ. ಇವುಗಳನ್ನು ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ಏಕೆಂದರೆ, ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಒಂದು ಹೆಸರಿನ ಆಪ್​ಗಳನ್ನು ನಿಷೇಧಿಸಿದರೆ ಮತ್ತೊಂದು ಹೆಸರಿನಲ್ಲಿ ವಕ್ಕರಿಸುತ್ತವೆ. ಇಂತಹ ಆಪ್​ಗಳಲ್ಲಿ ಸಾಲ ಪಡೆಯುವುದು ಅಪಾಯಕಾರಿ ಹಾಗೂ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ಅರಿವು ಸಾಕಷ್ಟು ಜನರಿಗಿಲ್ಲ.

    ಕೈಯಲ್ಲೇ ಇರುವ ಮೊಬೈಲ್ ಮೂಲಕ ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದು ಮೋಸದ ಜಾಲಕ್ಕೆ ಈಡಾಗುತ್ತಾರೆ. ಕೆಲವರಿಗೆ ಇದು ಮಾರಕ ಎಂಬ ತಿಳಿವಳಿಕೆ ಇದ್ದರೂ ಅನಿವಾರ್ಯ ಸಂದರ್ಭಗಳಲ್ಲಿ ಸಾಲ ಪಡೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಲೋನ್ ಆಪ್ ಡೌನ್​ಲೋಡ್ ಮಾಡಿಕೊಂಡಾಗ ಮೊಬೈಲ್​ಫೋನ್​ನಲ್ಲಿನ ಎಲ್ಲ ಮಾಹಿತಿಗೂ ಕನ್ನ ಹಾಕಲಾಗುತ್ತದೆ. ಹೆಚ್ಚಿನ ಬಡ್ಡಿ ಪಾವತಿಸದವರಿಗೆ ನಂತರ ಬ್ಲಾ್ಯಕ್ಮೇಲ್ ಮಾಡಿ ಕಿರುಕುಳ ನೀಡಲಾಗುತ್ತದೆ. ಕೀಳುಮಟ್ಟದ ಸಂದೇಶಗಳನ್ನು ಪರಿಚಯದವರಿಗೆ ಕಳುಹಿಸಲಾಗುತ್ತದೆ. ಇದರಿಂದಾಗಿ, 5-10 ಸಾವಿರ ರೂ. ಸಾಲ ಪಡೆದುಕೊಂಡವರೂ ಆತ್ಮಹತ್ಯ ಮಾಡಿಕೊಂಡಿದ್ದಾರೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆಪ್​ಗಳಿಂದ ದೂರವಿರುವಂತೆ ಜನರಲ್ಲಿ ಜಾಗೃತಿ ಹಾಗೂ ನಿರಂತರ ಕಣ್ಗಾವಲು ವ್ಯವಸ್ಥೆಯೇ ಈ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರವಾಗಬಹುದು.

    ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

    ಪೊಲೀಸರೆದುರೇ ಮಾರಕಾಸ್ತ್ರ ಝಳಪಿಸಿ ದಾದಾಗಿರಿ; ಒಳ್ಳೇ ಮಾತಲ್ಲಿ ಹೇಳಿದ್ರೂ ಕೇಳದವನಿಗೆ ಶೂಟ್ ಮಾಡಿ ಬೆಂಡೆತ್ತಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts