More

    ಲಾಕ್​ಡೌನ್​ ಬೇಡ..ಬೇರೇನಾದ್ರೂ ಮಾಡಿ… ಭಾರತ ಬಂದ್ ಮಾಡಿದ್ರೆ ಕರೊನಾ ಸಾವಿನ ಸಂಖ್ಯೆ ಹೆಚ್ಚುತ್ತದೆ: ಪ್ರಧಾನಿಗೆ ರಾಹುಲ್​ಗಾಂಧಿ ಪತ್ರ

    ನವದೆಹಲಿ: ಕೇಂದ್ರ ಸರ್ಕಾರ ಏಕಾಏಕಿ ಲಾಕ್​ ಡೌನ್​ ಮಾಡಿದ್ದನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.

    ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೀಗೆ ಲಾಕ್​ಡೌನ್​ ಮಾಡಿದ್ದು ಸರಿಯಲ್ಲ. ಇದರಿಂದ ಜನರು ತೀವ್ರ ಗಾಬರಿ, ಗೊಂದಲಕ್ಕೀಡಾಗಿದೆ ಎಂದು ಹೇಳಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಹುಲ್​ ಗಾಂಧಿ ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ. ಲಾಕ್​ಡೌನ್​ನಿಂದ ಬಡವರ ಪರಿಸ್ಥಿತಿ ತೀರ ಹದಗೆಟ್ಟಿದೆ. ಜೀವನ ನಡೆಸುವುದೇ ದುಸ್ತರವಾಗಿದೆ. ಹಾಗಾಗಿ ಈ ಮಾರಣಾಂತಿಕ ರೋಗ ನಿಯಂತ್ರಣಕ್ಕೆ ಲಾಕ್​ಡೌನ್​ ಬಿಟ್ಟು ಬೇರೆ ಏನಾದರೂ ಕ್ರಮ ಕೈಗೊಳ್ಳಿ ಎಂದು ರಾಹುಲ್​ ಗಾಂಧಿ ತಿಳಿಸಿದ್ದಾರೆ.

    ಉಳಿದ ರಾಷ್ಟ್ರಗಳಂತೆ ಭಾರತ ಅಲ್ಲ. ನಮ್ಮ ದೇಶದ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ಲಾಕ್​ಡೌನ್​ ಮಾಡುವುದು ಸುಲಭವಲ್ಲ. ಹಾಗಾಗಿ ಬೇರೆ ಏನಾದರೂ ಮಾರ್ಗ ಕಂಡುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಭಾರತದಲ್ಲಿ ಅನೇಕ ಬಡ ಜನರು ತಮ್ಮ ದಿನಗೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್​ಡೌನ್​ ಆದರೆ ಅವರೆಲ್ಲರೂ ಹೊಟ್ಟೆಗಿಲ್ಲದೆ ಕಷ್ಟಪಡಬೇಕಾಗುತ್ತದೆ. ಆರ್ಥಿಕ ಚಟುವಟಿಕೆ ಸ್ಥಗಿತಗೊಂಡರೆ ಕರೊನಾ ವೈರಸ್​ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಬಡ ಜನರು ಹಸಿವಿನಿಂದ, ಹತಾಶೆಯಿಂದ ಸಾಯುವ ಪ್ರಮಾಣ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕಾರ್ಖಾನೆಗಳು, ಸಣ್ಣ ಉದ್ದಿಮೆಗಳು ಬಂದ್ ಆಗಿವೆ. 10, 000ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ಮನೆಗಳತ್ತ ಧಾವಿಸುತ್ತಿದ್ದಾರೆ. ಅಂತವರಿಗೆ ಆಶ್ರಯ ಒದಗಿಸಬೇಕು. ಅವರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಹಣ ಹಾಕಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದಿದ್ದಾರೆ. ಅದರೊಂದಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts