More

    ಬೇಸಿಗೆಯಲ್ಲಿ ತೀರ ಅಗತ್ಯ ತಂಪು ನೀಡುವ ಆಹಾರ ಸೇವನೆ

    ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಆ ಕಾಲದ ಪ್ರಭಾವದಿಂದ ಉಂಟಾಗುವ ದೈಹಿಕ ಏರುಪೇರುಗಳು ಹತೋಟಿಗೆ ಬರುತ್ತವೆ. ಇಂದು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಬಹುದಾದ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಇವುಗಳನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಬರುವ ಸಮಸ್ಯೆಗಳು, ಸುಸ್ತು, ನಿದ್ರಾಹೀನತೆ, ಉಷ್ಣತೆ ಮುಂತಾದ ತೊಂದರೆಗಳು ಉಂಟಾಗುವುದನ್ನು ತಪ್ಪಿಸಬಹುದು.

    Dhanvanthari- Dr Venkataramana Hegadeಆಯುರ್ವೆದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ತುಂಬಾ ಹುಳಿ, ಉಪ್ಪು, ಖಾರ ಇರುವ, ಉಷ್ಣ ಗುಣಹೊಂದಿರುವ ಮತ್ತು ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸಬಾರದು. ಬೇಸಿಗೆಯಲ್ಲಿ ಹೆಚ್ಚು ಅನುಕೂಲಕರವಾದ ವಿಶೇಷ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

    ಹಾಲು: ದೇಸಿ ತಳಿಯ, ಹುಲ್ಲನ್ನು ಮೆಂದ ಆಕಳಿನ ಹಾಲನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ದೇಹದ ಶಕ್ತಿಯಲ್ಲಿ ವೃದ್ಧಿ, ಮಾನಸಿಕ ಬಲ ವೃದ್ಧಿಯಾಗಿ ಸುಸ್ತು, ನಿದ್ರಾಹೀನತೆಯಂತಹ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಉಷ್ಣತೆಯು ಕಡಿಮೆಯಾಗುತ್ತದೆ.

    ಬೆಣ್ಣೆ: ಮೇಲೆ ಹೇಳಿದ ಬಹುತೇಕ ಎಲ್ಲ ಗುಣಗಳನ್ನು ಹೊಂದಿರುವುದು ಬೆಣ್ಣೆ. ಹಾಗಾಗಿ ಇದನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ತುಂಬಾ ಅನುಕೂಲವಾಗುತ್ತದೆ. ಜೊತೆಗೆ ಇದರ ಸೇವನೆಯಿಂದ ಚರ್ಮ, ಮೂಳೆ ಮತ್ತು ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ. ಆದರೆ ಇದು ಜೀರ್ಣಕ್ಕೆ ಸ್ವಲ್ಪ ಕಷ್ಟಕರವಾದ್ದರಿಂದ ಇದನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡುವುದು ಬೇಡ.

    ಪಾನಕ: ಖರ್ಜೂರ, ದ್ರಾಕ್ಷಿ, ಪರುಷಕ (ಪಾಲಸ ಹಣ್ಣು) ಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೀರಿನಲ್ಲಿ ಕಲಸಿ ಜ್ಯೂಸ್​ನಂತೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಚಕ್ಕೆ ಪುಡಿಗಳನ್ನು ಹಾಕಿ ಸೇವಿಸಲು ಆಯುರ್ವೆದ ಹೇಳುತ್ತದೆ. ಇದರಿಂದ ಬೇಸಿಗೆಯಲ್ಲಿನ ಉಷ್ಣತೆಯಿಂದ ಉಂಟಾಗುವ ರಕ್ತಸ್ರಾವ, ಕಣ್ಣುರಿ, ಸುಸ್ತು, ಚರ್ಮದಲ್ಲಾಗುವ ಉರಿ – ತುರಿಕೆಗಳು ಉಂಟಾಗುವುದಿಲ್ಲ ಅಥವಾ ಗುಣವಾಗುತ್ತವೆ.

    ಬೂದುಗುಂಬಳ: ತಂಪು ಗುಣವನ್ನು ಹೊಂದಿರುವ, ದ್ರವ ಗುಣ ಪ್ರಧಾನವಾಗಿರುವ, ದೇಹಕ್ಕೆ ಮತ್ತು ಮಿದುಳಿಗೆ ಶಕ್ತಿಯನ್ನು ಹೆಚ್ಚಿಸುವ ಬೂದುಗುಂಬಳವನ್ನು

    ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಉರಿಮೂತ್ರ, ಚರ್ಮರೋಗಗಳು, ಅಸಿಡಿಟಿಯಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ನಿದ್ರೆಯು ಚೆನ್ನಾಗಿ ಬಂದು ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ.

    ಕೊತ್ತಂಬರಿ ಬೀಜ: ಯಾವಾಗ ನೋಡಿದರೂ ದೇಹದಲ್ಲಿ ಉಷ್ಣತೆ ಅಧಿಕವಾಗಿರುತ್ತದೆ ಎಂದೋ ಅಥವಾ ನನ್ನದು ಉಷ್ಣ ಶರೀರ ಎಂದೋ ಅಳಲು ತೋಡಿಕೊಳ್ಳುತ್ತಿರುವವರಿಗೆ ಇದು ಒಂದು ರೀತಿಯ ವರದಾನ. ಆಯುರ್ವೆದ ಗ್ರಂಥಗಳಲ್ಲಿ ಧಾನ್ಯಕ ಹಿಮ ಎಂಬ ಒಂದು ಪಾನೀಯದ ಬಗ್ಗೆ ಹೇಳುತ್ತಾರೆ. ಇದು ಜ್ವರ, ಕೈಕಾಲುಗಳಲ್ಲಿ ಉರಿ, ಗಂಟಲು ಉರಿ, ಎದೆ ಉರಿಗಳಲ್ಲಿ ಅತ್ಯಂತ ಪ್ರಯೋಜಕ. ಸುಮಾರು 10 ಗ್ರಾಂ ಗಳಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಒಂದೆರಡು ಸುತ್ತು ಮಿಕ್ಸಿ ಮಾಡಿ ಸುಮಾರು 60 ಮಿಲೀ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಸೋಸಿ ಅದಕ್ಕೆ ಸಾವಯವ ಸಕ್ಕರೆಯನ್ನು ಸ್ವಲ್ಪ ಹಾಕಿ ತೆಗೆದುಕೊಂಡರೆ ಇದೇ ಆಯುರ್ವೆದ ಹೇಳುವ ಧಾನ್ಯಕ ಹಿಮ. ಸಾವಯವ ಸಕ್ಕರೆ ಸಿಗದಿದ್ದರೆ ಜೋನಿ ಬೆಲ್ಲವನ್ನು ಬಳಕೆ ಮಾಡಬಹುದು.

    ನೀರು: ಲಾವಂಚ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ಸೊಗದೇ ಬೇರಿನ ಪುಡಿ ಮತ್ತು ತೇಯ್ದ ಶುದ್ಧ ಶ್ರೀಗಂಧದ ಪೇಸ್ಟ್ ಹಾಕಿ ಮಡಿಕೆಯಲ್ಲಿ ಇಟ್ಟ ತಣ್ಣನೆಯ ನೀರನ್ನು ಬೇಸಿಗೆಯಲ್ಲಿ ಕುಡಿಯಬೇಕು ಮತ್ತು ಬೇರೆ ಕಾಲಗಳಲ್ಲಿ ಸೇವಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಸಿಗೆಯಲ್ಲಿ ನೀರನ್ನು ಸೇವಿಸಲೇಬೇಕು.

    (ಪ್ರತಿಕ್ರಿಯಿಸಿ: [email protected])

    ನಟ ದರ್ಶನ್​ ಎಚ್ಚರಿಕೆ ವಹಿಸದಿದ್ರೆ ಕಾದಿದೆ ಅಪಾಯ! ಸುತ್ತಲೂ ನಡೆಯುತ್ತಿರುವ ಘಟನೆಗಳೇ ಇದರ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts