More

  ಸೆರೇನಾ, ಫೆಡರರ್​ಗೆ ಸುಲಭ ಜಯ

  ಮೆಲ್ಬೋರ್ನ್: ಮೂರನೇ ಶ್ರೇಯಾಂಕದ ಆಟಗಾರ ಸ್ವಿಜರ್ಲೆಂಡ್​ನ ರೋಜರ್ ಫೆಡರರ್ ಹಾಗೂ ಅಮೆರಿಕದ ತಾರೆ ಸೆರೇನಾ ವಿಲಿಯಮ್್ಸ ಅತ್ಯಾಕರ್ಷಕ ಟೆನಿಸ್ ನಿರ್ವಹಣೆ ತೋರುವ ಮೂಲಕ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮಹಿಳಾ ಟೆನಿಸ್​ನಲ್ಲಿ ಗಮನಸೆಳೆಯುತ್ತಿರುವ ಆಟಗಾರ್ತಿಯಾದ 15 ವರ್ಷದ ಕೊಕೊ ಗೌಫ್, ಹಾಲಿ ಚಾಂಪಿಯನ್ ಜಪಾನ್​ನ ನವೋಮಿ ಒಸಾಕ ವಿರುದ್ಧ ಮೂರನೇ ಸುತ್ತಿನ ಬ್ಲಾಕ್​ಬಸ್ಟರ್ ಮುಖಾಮುಖಿಗೆ ಅಣಿಯಾದರು.

  ಕಳೆದ ಮೂರು ವರ್ಷಗಳಲ್ಲಿ 2ನೇ ಬಾರಿಗೆ ಅಮೆರಿಕದ ಆಟಗಾರ ಟೆನಿಸ್ ಸ್ಯಾಂಡ್​ಗ್ರೀನ್, ಆಸ್ಟ್ರೇಲಿಯನ್ ಓಪನ್​ನಲ್ಲಿ ಅಗ್ರ 10ರ ಒಳಗಿನ ಶ್ರೇಯಾಂಕ ಹೊಂದಿದ ಆಟಗಾರನನ್ನು ಮಣಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ವಿಶ್ವ ರ್ಯಾಂಕಿಂಗ್​ನಲ್ಲಿ 100ನೇ ಸ್ಥಾನದಲ್ಲಿರುವ ಸ್ಯಾಂಡ್​ಗ್ರೀನ್ 7-6 (7), 6-4, 4-6, 2-6, 7-5 ರಿಂದ 8ನೇ ಶ್ರೇಯಾಂಕಿತ ಆಟಗಾರ ಇಟಲಿಯ ಮ್ಯಾಟಿಯೋ ಬೆರೆಟೆನಿಯನ್ನು ಸೋಲಿಸಿದರು. 2018ರ ಆಸ್ಟ್ರೇಲಿಯನ್ ಓಪನ್​ನ 2ನೇ ಸುತ್ತಿನಲ್ಲಿ 9ನೇ ಶ್ರೇಯಾಂಕ ಹೊಂದಿದ್ದ ಸ್ವಿಸ್​ನ ಸ್ಟಾ್ಯನಿಸ್ಲಾಸ್ ವಾವ್ರಿಂಕರನ್ನು ಸೋಲಿಸಿದ್ದ ಸ್ಯಾಂಡ್​ಗ್ರೀನ್, ಆ ವರ್ಷ ಕ್ವಾರ್ಟರ್​ಫೈನಲ್​ವರೆಗೂ ಏರಿದ್ದರು.

  ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್ 6-1, 6-4, 6-1 ರಿಂದ ಸೆರ್ಬಿಯಾದ ಫಿಲಿಪ್ ಕ್ರಾಜಿನೋವಿಕ್​ರನ್ನು ಸೋಲಿಸುವ ಮೂಲಕ ಮೂರನೇ ಸುತ್ತಿಗೇರಿದರು. ಗೆಲುವಿಗಾಗಿ ಫೆಡರರ್ 90 ನಿಮಿಷಗಳ ಕಾಲ ಹೋರಾಟ ನಡೆಸಿದರು. 3ನೇ ಸುತ್ತಿನಲ್ಲಿ ಫೆಡರರ್ ಸ್ಥಳೀಯ ಆಶಾಕಿರಣ ಜಾನ್ ಮಿಲ್​ವ್ಯಾನ್​ರನ್ನು ಎದುರಿಸಲಿದ್ದಾರೆ.

  ಪುರುಷರ ವಿಭಾಗದ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ಹಾಗೂ ವೃತ್ತಿಜೀವನದ ಕೊನೆಯ ಗ್ರಾಂಡ್ ಸ್ಲಾಂ ಆಡುತ್ತಿರುವ ಡೆನ್ಮಾರ್ಕ್​ನ ಕ್ಯಾರೋಲಿನ್ ವೋಜ್ನಿಯಾಕಿ ಕೂಡ ಮುನ್ನಡೆ ಕಂಡರು. ಎರಡೂ ಸೆಟ್​ಗಳಲ್ಲಿ ಆರಂಭಿಕ ಹಿನ್ನಡೆಯಿಂದ ಮೇಲೆದ್ದ ವೋಜ್ನಿಯಾಕಿ 7-5, 7-5 ರಿಂದ ಉಕ್ರೇನ್​ನ ಡಯಾನಾ ಯಾಸ್​ಟ್ರೇಮಸ್ಕಾರನ್ನು ಮಣಿಸಿದರು.

  ಅನುಭವಿ ಸೊರೆನಾ ಕ್ರಿಸ್ಟಿಯಾ ವಿರುದ್ಧ ಮೊದಲ ಸೆಟ್ ಸೋಲು ಕಂಡರೂ ಪ್ರತಿರೋಧ ಒಡ್ಡಿದ ಕೊಕೊ ಗೌಫ್ 4-6, 6-3, 7-5 ರಿಂದ ಗೆಲುವು ಕಂಡರು. ‘ಸ್ಕೋರ್​ಬೋರ್ಡ್​ನಲ್ಲಿ ಎಷ್ಟೇ ಅಂಕ ಇರಲಿ ತಿರುಗೇಟು ನೀಡುವ ಎಲ್ಲ ಅವಕಾಶವೂ ಆಟದಲ್ಲಿ ಇರುತ್ತದೆ ಎಂದು ನನ್ನ ಪಾಲಕರು ಯಾವಾಗಲೂ ಹೇಳುತ್ತಿರುತ್ತಾರೆ’ ಎಂದು ಮೊದಲ ಸುತ್ತಿನಲ್ಲಿ ಏಳು ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ವೀನಸ್ ವಿಲಿಯಮ್ಸ್​ರನ್ನು ಮಣಿಸಿದ ಗೌಫ್ ಹೇಳಿದರು. ಗೌಫ್​ರ 3ನೇ ಸುತ್ತಿನ ಎದುರಾಳಿಯಾಗಿರುವ 22 ವರ್ಷದ ನವೋಮಿ ಒಸಾಕ 6-2, 6-4 ರಿಂದ ಚೀನಾದ ಜೆಂಗ್ ಸಾಯಿಸಾಯಿರನ್ನು ಸೋಲಿಸಿದರು.

  70ನೇ ಶ್ರೇಯಾಂಕದ ಆಟಗಾರ್ತಿ ತಾಮರಾ ಜಿಡಾನ್​ಸೆಕ್ ವಿರುದ್ಧ 2ನೇ ಸೆಟ್​ನಲ್ಲಿ ಸಣ್ಣಮಟ್ಟದ ಪ್ರತಿರೋಧ ಎದುರಿಸಿದ ನಡುವೆಯೂ ಪ್ರಶಸ್ತಿ ಫೇವರಿಟ್ ಸೆರೇನಾ ವಿಲಿಯಮ್್ಸ 6-2, 6-3 ರಿಂದ ಗೆಲುವು ಕಂಡರು.

  ವೈಲ್ಡ್​ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಜಪಾನ್​ನ ಆಟಗಾರ್ತಿ ತತ್ಸುಮಾ ಇಟೋರನ್ನು ನೋವಾಕ್ ಜೋಕೊವಿಕ್ 95 ನಿಮಿಷಗಳ ಹೋರಾಟದಲ್ಲಿ 6-1, 6-4, 6-2 ರಿಂದ ಸೋಲಿಸಿದರು. ಎದುರಾಳಿ ಆಟಗಾರ ಫಿಲ್ ಕೊಹ್ಲ್​ಸ್ಕೆ್ರೖಬರ್ ಗಾಯಾಳುವಾಗಿದ್ದರಿಂದ ಗ್ರೀಸ್​ನ ಸ್ಟೆಫಾನೋಸ್ ಸಿಸಿಪಾಸ್ ವಾಕ್​ಓವರ್ ಪಡೆದು ಮೂರನೇ ಸುತ್ತಿಗೇರಿದರು.

  ಗೆಲುವು ಕಂಡ ಆಶ್ಲೆಗ್ ಬಾರ್ಟಿ

  ಟೂರ್ನಿಯ ಮೂರನೇ ದಿನದ ಆರಂಭದಲ್ಲಿ ವಿಶ್ವ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ 6-1, 6-4 ರಿಂದ ಪೊಲೊನಾ ಹೆರ್ಕಾಗ್​ರನ್ನು ಮಣಿಸಿ ಆತಿಥೇಯ ಆಸ್ಟ್ರೇಲಿಯಾದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇತರ ಪಂದ್ಯಗಳಲ್ಲಿ ಕಳೆದ ವರ್ಷದ ರನ್ನರ್​ಅಪ್ ಪೆಟ್ರಾ ಕ್ವಿಟೋವಾ 7-5, 7-5 ರಿಂದ ಸ್ಪೇನ್​ನ ಪೌಲಾ ಬಡೋಸಾರನ್ನು ಸೋಲಿಸಿದರೆ, ಚೀನಾದ ಜಾಂಗ್ ಶುಯ್ 6-2, 6-4 ರಿಂದ ಅಮೆರಿಕದ ಕ್ಯಾಟಿ ಮೆಕ್​ನ್ಯಾಲಿಯನ್ನು ಮಣಿಸಿ ಮುನ್ನಡೆದರು. ಅಮೆರಿಕದ ಟ್ಯಾಮಿ ಪೌಲ್ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಐದು ಸೆಟ್​ಗಳ ಹೋರಾಟದಲ್ಲಿ ಪೌಲ್ 6-4, 7-6 (8), 3-6, 6-7 (7), 7-6 (10) ರಿಂದ 18ನೇ ಶ್ರೇಯಾಂಕದ ಆಟಗಾರ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್​ರನ್ನು ಮಣಿಸುವ ಮೂಲಕ ಗಮನಸೆಳೆದರು.

  ರೋಜರ್ ಫೆಡರರ್ ಇನ್ನೊಂದು ಗೆಲುವು ಸಾಧಿಸಿದರೆ, ಆಸ್ಟ್ರೇಲಿಯನ್ ಓಪನ್​ನಲ್ಲಿ 100 ಪಂದ್ಯದ ಗೆಲುವಿನ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯನ್ ಓಪನ್​ನಲ್ಲಿ ಆಡಿದ 113 ಪಂದ್ಯಗಳಿಂದ 99 ಗೆಲುವು ಹಾಗೂ 14 ಸೋಲಿನ ದಾಖಲೆಯನ್ನು ಫೆಡರರ್ ಹೊಂದಿದ್ದಾರೆ. ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ 100 ಗೆಲುವು ಸಾಧನೆ ಮಾಡಿದ ಏಕೈಕ ಆಟಗಾರ ಕೂಡ ಫೆಡರರ್ ಆಗಿದ್ದಾರೆ. ವಿಂಬಲ್ಡನ್​ನಲ್ಲಿ ಫೆಡರರ್ 101 ಗೆಲುವು ಕಂಡಿದ್ದಾರೆ.

  ದಿವಿಜ್ ಶರಣ್​ಗೆ ಜಯ ರೋಹನ್ ಬೋಪಣ್ಣ ಔಟ್

  ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ದಿವಿಜ್ ಶರಣ್ ಜೋಡಿ ಗೆಲುವು ಕಂಡರೆ, ರೋಹನ್ ಬೋಪಣ್ಣ ಜೋಡಿ ಮೊದಲ ಸುತ್ತಿನ ಆಘಾತ ಎದುರಿಸಿತು. ದಿವಿಜ್ ಶರಣ್ ಹಾಗೂ ನ್ಯೂಜಿಲೆಂಡ್​ನ ಜತೆಗಾರ ಆರ್ಟೆಮ್ ಸಿಟಕ್ 6-4, 7-5 ರಿಂದ ಸ್ಪೇನ್​ನ ಪಾಬ್ಲೋ ಕರೇನೋ ಬುಸ್ಟಾ ಹಾಗೂ ಪೋರ್ಚುಗಲ್​ನ ಜಾವೋ ಸೌಸಾ ಜೋಡಿಯನ್ನು ಸೋಲಿಸಿತು. ಜಪಾನ್​ನ ಯಸುಟಕಾ ಉಚಿಯಾಮಾ ಜತೆಗೂಡಿ ಆಡಿದ ಬೋಪಣ್ಣ 1-6, 6-3, 3-6 ರಿಂದ ಅಮೆರಿಕದ ಬಾಬ್ ಹಾಗೂ ಮೈಕ್ ಬ್ರಯಾನ್ ಜೋಡಿಗೆ ಶರಣಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts