More

    ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ ; ತಾಲೂಕಿನ ಗೊಲ್ಲಹಳ್ಳಿ, ಅಡ್ಡಗಲ್ ಗ್ರಾಪಂ ವ್ಯಾಪ್ತಿಯಲ್ಲಿ 2.6 ತೀವ್ರತೆ ದಾಖಲು

    ಚಿಕ್ಕಬಳ್ಳಾಪುರ: ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಇತ್ತೀಚಿಗೆ ಭೂಮಿ ನಡುಗಿದ ಅನುಭವದ ಭಯದಿಂದ ಹೊರಬರುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಬುಧವಾರ ಮುಂಜಾನೆ ಮತ್ತೆ ಭೂಮಿ ಕಂಪಿಸಿ ಜನರನ್ನು ಆತಂಕಕ್ಕೀಡು ಮಾಡಿದೆ.

    ತಾಲೂಕಿನ ಗೊಲ್ಲಹಳ್ಳಿ ಮತ್ತು ಅಡ್ಡಗಲ್ ಗ್ರಾಪಂ ವ್ಯಾಪ್ತಿಯ ಶೆಟ್ಟಿಗೆರೆ, ಬೀರಗಾನಹಳ್ಳಿ, ಭೋರ್ಗಪರ್ತಿ ಸೇರಿ ವಿವಿಧ ಗ್ರಾಮಗಳಲ್ಲಿ ಮುಂಜಾನೆ 3 ಗಂಟೆಯಲ್ಲಿ ಕೆಲ ಸೆಕೆಂಡ್ ಭೂಮಿ ಅಲುಗಾಡಿದಂತಾಗಿದೆ. ನಿದ್ರೆಯಲ್ಲಿದ್ದ ಹಳ್ಳಿಗಳ ಜನ ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಆತಂಕದಲ್ಲಿದ್ದ ಜನರು ಮತ್ತೊಮ್ಮೆ ಭೂಕಂಪನ ಸಂಭವಿಸಬಹುದು ಎಂಬ ಲೆಕ್ಕಾಚಾರದಲ್ಲಿ ಮನೆ ಒಳಗೆ ಹೋಗದೆ ರಸ್ತೆಯಲ್ಲಿ ಕುಳಿತುಕೊಂಡು ಕಾಲ ಕಳೆದರು. ಕೊನೆಗೆ ಹಲವು ತಾಸುಗಳ ಬಳಿಕ ಯಾವುದೇ ಶಬ್ದ ಕೇಳಿಸದಿದ್ದರಿಂದ ನಿರಾಳರಾದರು. ಸ್ಥಳೀಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 2.6 ದಾಖಲಾಗಿದೆ. ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಕೆಲ ಮನೆಗಳು ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. 2.6 ತೀವ್ರತೆ ಅಪಾಯಕಾರಿ ಹಂತವಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ಆದರೂ ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಜನರಿಗೆ ಸಲಹೆ ನೀಡಿದರು.

    ತೀವ್ರತೆ ಪ್ರಮಾಣ ಕಡಿಮೆ: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಭೂಕಂಪನದ ತೀವ್ರತೆಯು ತುಂಬಾ ಕಡಿಮೆ ಇದೆ. ಈ ಹಿಂದೆ ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.10ರ ಮತ್ತು ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ 1.23 ಕಿ.ಮೀ ವ್ಯಾಪ್ತಿಯಲ್ಲಿ ಕ್ರಮವಾಗಿ 3 ಮತ್ತು 2.9, ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಸಾದೇನಹಳ್ಳಿ, ಬೀರಗಾನಹಳ್ಳಿ, ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿಯಲ್ಲಿ 3.6 ತೀವ್ರತೆಯ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಇನ್ನು ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ, ರಾಸಪಲ್ಲಿ, ವೆಂಕಟರೆಡ್ಡಿಪಾಳ್ಯ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ನಾಲ್ಕೈದು ಬಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು.

    ಏರ್ ಬ್ಲಾಸ್ಟ್ ಕಾರಣ?: ಅಂತರ್ಜಲ ಮಟ್ಟ ಹೆಚ್ಚಳವಿರುವ ತಳ ಭಾಗದಲ್ಲಿ ಏರ್ ಬ್ಲಾಸ್ಟ್ ಭೂಕಂಪನಕ್ಕೆ ಕಾರಣ ಎಂಬುದಾಗಿ ಭೂ ವಿಜ್ಞಾನಿಗಳು ಹೇಳಿದ್ದಾರೆ. ಈ ಹಿಂದೆ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದ್ದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಕೆರೆ-ಕುಂಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗಿರುವುದರ ಜತೆಗೆ ಅಂತರ್ಜಲ ಏರಿಕೆಯಾಗಿದೆ. ಇದರಿಂದ ನೀರು ಆಳಕ್ಕೆ ಇಳಿಯುವ ಸಂದರ್ಭದಲ್ಲಿ ಮೇಲಕ್ಕೆ ಏರ್ ಬ್ಲಾಸ್ಟ್ ಆಗಿ ಆಗಾಗ ಶಬ್ದ ಕೇಳಿಸುತ್ತಿದೆ. ಇದರ ಘರ್ಷಣೆಯ ಪ್ರಕ್ರಿಯೆಗೆ ಭೂಕಂಪನದ ಅನುಭವವಾಗುತ್ತಿದೆ. ಸಣ್ಣ ಪ್ರಮಾಣ ಅಲುಗಾಟದಿಂದ ಯಾವುದೇ ದೊಡ್ಡ ಹಾನಿ ಸಂಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ 3 ಗಂಟೆಗೆ ನಿದ್ದೆಯಲ್ಲಿದ್ದಾಗ ಭೂಮಿ ನಡುಗಿದಂತಾಯಿತು. ಆತಂಕದಲ್ಲಿ ಮನೆಮಂದಿಯೆಲ್ಲ ಹೊರಗೆ ಬಂದು ಚಳಿಯಲ್ಲಿ ಕೂರಬೇಕಾಯಿತು.
    ರಾಮಾಂಜಿನಪ್ಪ, ಸ್ಥಳೀಯ ನಿವಾಸಿ

    ಅಂತರ್ಜಲ ಮಟ್ಟ ಹೆಚ್ಚಳದ ಪ್ರಭಾವದಿಂದ ನೈಸರ್ಗಿಕವಾಗಿ ಭೂ ತಳದಲ್ಲಿ ಏರ್ ಬ್ಲಾಸ್ಟ್‌ನಿಂದ ಕಂಪನದ ಅನುಭವವಾಗಿದೆಯೇ ಹೊರತು ದೊಡ್ಡ ಭೂಕಂಪವಲ್ಲ. ಜನರು ಆತಂಕಪಡುವ ಅವಶ್ಯಕತೆ ಇಲ್ಲ.
    ಡಾ ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts