More

    ಇ-ತ್ಯಾಜ್ಯ ಬರೀ ಕಸವಲ್ಲ, ಸಂಪತ್ತು: ನ್ಯಾ. ಸುಭಾಷ್ ಅಡಿ

    ಶಿವಮೊಗ್ಗ: ಇ-ತ್ಯಾಜ್ಯ ಎಂಬುದು ಕೇವಲ ಕಸವಲ್ಲ, ಸಂಪತ್ತಾಗಿಯೂ ಪರಿವರ್ತಿಸಬಹುದು. ಅದನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸದೇ ಇದ್ದಲ್ಲಿ ದೇಶಕ್ಕೆ ಭವಿಷ್ಯವಿಲ್ಲ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ-ಎಸ್‌ಎಲ್ಸಿ) ಅಧ್ಯಕ್ಷ ಸುಭಾಷ್ ಅಡಿ ಹೇಳಿದರು.

    ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಡೂ ಮೈಂಡ್ಸ್ ಫೌಂಡೇಷನ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನದ ಅಂಗವಾಗಿ ತ್ಯಾಜ್ಯ ನಿರ್ವಹಣೆಯ ಅವಶ್ಯಕತೆಗಳು, ಉದ್ಯಮಶೀಲತೆಯ ಅವಕಾಶಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
    ಇ-ತ್ಯಾಜ್ಯ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲವೆಂದು ಬಿಸಾಡುವವರೇ ಹೆಚ್ಚು. ಇ-ತ್ಯಾಜ್ಯವನ್ನು ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಮರುಬಳಕೆ ಮಾಡಿಕೊಂಡರೆ ಆದಾಯದ ಮೂಲವನ್ನಾಗಿಸಲು ಸಾಧ್ಯವಿದೆ. ಬೆಳಗಾವಿಯಲ್ಲಿ ಹೆಚ್ಚು ಓದು ಬರಹ ಬಾರದ ವ್ಯಕ್ತಿಯೊಬ್ಬ ಕೇವಲ ನಾಲ್ಕು ಮಂದಿ ಕೆಲಸಗಾರರೊಂದಿಗೆ ಆರಂಭಿಸಿದ ಪ್ಲಾಸ್ಟಿಕ್ ಸೇರಿ ಇ-ತ್ಯಾಜ್ಯ ಮರುಬಳಕೆಯ ಸಣ್ಣ ಕೈಗಾರಿಕೆ ಇದೀಗ ಆತ ದೊಡ್ಡ ಉದ್ಯಮಿಯಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ ಇ-ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಬದಲಾಯಿಸಿಕೊಳ್ಳಬಹುದು ಎಂದು ಹೇಳಿದರು.
    ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ್ ನಿಷೇಧದ ಕುರಿತು ಕಾಯ್ದೆಗಳು ಬಂದವು. ಆದರೆ ಮುಖ್ಯವಾಗಿ ಜನರ ನಡವಳಿಕೆಯಲ್ಲಿ ಬದಲಾವಣೆ ಆಗಬೇಕು. ಕಸವನ್ನು ವಿಂಗಡಿಸಿ ನೀಡಬೇಕು. ಪ್ಲಾಸ್ಟಿಕ್ ಬಾಟಲ್ ನಿರಾಕರಿಸಬೇಕು. ಇ-ವಸ್ತುಗಳ ಕಡಿಮೆ ಬಳಕೆ, ಮರುಬಳಕೆ ಆಗಬೇಕು. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ, ಬಿಯರ್ ಬಾಟಲಿ ಬಳಕೆ ನಿಲ್ಲಬೇಕು. ಬಾಟಲಿ ಬದಲು ಟಿನ್ ಬಳಕೆಯಾಗಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ, ಪ್ರತಿ ವರ್ಷ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದ್ದು, ಇ-ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಲಿದ್ದು ಈ ನಿಟ್ಟಿನಲ್ಲಿ ಅಧ್ಯಯನಗಳು ಆಗಬೇಕು ಎಂದರು.
    ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್.ಜನಾರ್ಧನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೂ ಮೈಂಡ್ಸ್ ಫೌಂಡೇಷನ್ ಟ್ರಸ್ಟಿ ಎಚ್.ಎಸ್.ನವೀನ್ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯ್ಕ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts