More

    ವಂಚನೆ ತಡೆಯಲು ಇ-ಟೆಂಡರ್: ಮೀನುಗಾರಿಕೆಗೆ ಇಲಾಖೆಯ ಹೊಸ ತಂತ್ರ

    ಬೆಂಗಳೂರು ಗ್ರಾಮಾಂತರ: ಮೀನು ಹಿಡಿಯಲು ಕೆರೆ ಗುತ್ತಿಗೆ ಹರಾಜಿನಲ್ಲಿ ನಡೆಯುತ್ತಿದ್ದ ವಂಚನೆ ತಡೆಯುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಇ-ಟೆಂಡರ್ ಮೂಲಕ ಹರಾಜು ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ 9 ಕೆರೆಗಳಲ್ಲಿ ಮೀನುಗಾರಿಕೆ ಕೃಷಿಗೆ ಇ-ಟೆಂಡರ್ ಕರೆಯಲಾಗಿದೆ.


    ಈ ಹಿಂದೆ ಅಧಿಕಾರಿಗಳ ಒಳ ಒಪ್ಪಂದ ಹಾಗೂ ರಾಜಕಾರಣಿಗಳು ಹಾಗೂ ಇನ್ನಿತರ ಪ್ರಭಾವಿಗಳಿಂದ ಬರುತ್ತಿದ್ದ ಒತ್ತಡದಿಂದಾಗಿ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ವಂಚನೆ ನಡೆಯುತ್ತಿತ್ತು. ಈ ಬಗ್ಗೆ ಟೆಂಡರ್‌ದಾರರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಮಟ್ಟದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು 2022-23ನೇ ಸಾಲಿನಿಂದ ಇ-ಹರಾಜು ಪ್ರಕ್ರಿಯೆಗೆ ಮೀನುಗಾರಿಕೆ ಇಲಾಖೆ ಮುಂದಾಗಿದೆ.

    5 ವರ್ಷ ಮುಗಿದ ಕೆರೆಗಳಿಗೆ ಟೆಂಡರ್: ಜಿಲ್ಲೆಯ ನಾಲ್ಕೂ ತಾಲೂಕಿನ ಹಲವು ಕೆರೆಗಳಲ್ಲಿ ಈಗಾಗಲೇ 5 ವರ್ಷ ಟೆಂಡರ್ ಅವಧಿ ಮುಗಿದಿರುವ ಕೆರೆಗಳಿಗೆ ಪ್ರಸಕ್ತ ಸಾಲಿನಿಂದ ಇ-ಟೆಂಡರ್ ಕರೆಯಲಾಗಿದೆ. ಬಿಡ್‌ದಾರರರು ಆನ್‌ಲೈನ್ ಮೂಲಕ ಬಿಡ್ ಸಲ್ಲಿಸಬಹುದು ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.

    ಸರ್ಕಾರಕ್ಕೂ ಆದಾಯ: ಈ ಹಿಂದೆ ಟೆಂಡರ್‌ದಾರರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಿಂದಾಗಿ ಕಡಿಮೆ ಬಿಡ್‌ಗೆ ಮೀನು ಕೃಷಿಗೆ ಅವಕಾಶ ನೀಡಲಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಸಾಕಷ್ಟು ಲುಕ್ಸಾನು ಆಗುತ್ತಿತ್ತು. ಇದರ ಜತೆಗೆ ಈ ಹಿಂದೆ ಟೆಂಡರ್ ಪಡೆದವರಿಗೆ ಮತ್ತೆ ಮತ್ತೆ ಟೆಂಡರ್ ನೀಡುತ್ತಿದ್ದರಿಂದ ಹೊಸಬರಿಗೆ ಅವಕಾಶವಿಲ್ಲದಂತಾಗಿತ್ತು. ಆದರೆ ಇ-ಟೆಂಡರ್‌ನಿಂದಾಗಿ ಯಾರೂ ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ಮೀನುಗಾರಿಕೆ ಟೆಂಡರ್ ದೊರೆಯುತ್ತದೆ. ಇದರಿಂದ ಸರ್ಕಾರಕ್ಕೂ ಉತ್ತಮ ಆದಾಯ ಬರುತ್ತದೆ, ಇದರಲ್ಲಿ ಯಾವುದೇ ವಂಚನೆ ಪ್ರಕರಣಕ್ಕೂ ಅವಕಾಶವಿರುವುದಿಲ್ಲ ಎಂಬುದು ಇಲಾಖೆಯ ಚಿಂತನೆ.

    ಎಸ್‌ಸಿ/ಎಸ್‌ಟಿಗೆ ಮೀಸಲಾತಿ: ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನಿಂದ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಮೀನುಗಾರಿಕೆಯಲ್ಲಿ ಮೀಸಲಾತಿ ೋಷಿಸಲಾಗಿದ್ದು, ಅದರಂತೆ ಈ ಬಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಎಸ್‌ಸಿ ಸಮುದಾಯದವರಿಗೆ ಶೇ.17 ಹಾಗೂ ಎಸ್‌ಟಿ ಪಂಗಡಗಳಿಗೆ ಶೇ.6 ಮೀಸಲಾತಿ ನಿಗದಿಪಡಿಸಲಾಗಿದೆ. ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರು ಹೆಚ್ಚು ವಾಸವಿರುವ ಕಡೆಗಳಲ್ಲಿ ಸಮೀಕ್ಷೆ ನಡೆಸಿ ಸಮೀಪದಲ್ಲಿಯೇ ಮೀನುಗಾರಿಕೆಗೆ ಅವಕಾಶ ನೀಡುವ ವಿಧಾನ ಇದಾಗಿದೆ. ಜಲವಿಸ್ತೀರ್ಣದ ಆಧಾರದ ಮೇಲೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಮಿಟಿ ತೀರ್ಮಾನ: ಎಸ್‌ಸಿ/ಎಸ್‌ಟಿ ಮೀಸಲಾತಿ ಅಡಿಯಲ್ಲಿ ಮೀನುಗಾರಿಕೆ ಟೆಂಡರ್ ನೀಡುವಲ್ಲಿ ಕಮಿಟಿ ಪ್ರಮುಖ ಪಾತ್ರವಹಿಸುತ್ತದೆ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ಅಧಿಕಾರಿಗಳು ಸಿಇಒ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿದ್ದು, ಕಮಿಟಿಯಲ್ಲಿ ಪರಿಶೀಲನೆ ಬಳಿಕ ಇದಕ್ಕೆ ಅನುಮೋದನೆ ದೊರೆಯಲಿದೆ.

    ಇ-ಟೆಂಡರ್‌ನಲ್ಲಿ ಷರತ್ತುಗಳು: ಇ-ಸಂಗ್ರಹಣಾ ಪೋರ್ಟಲ್‌ನಲ್ಲಿ ನೋಂದಾಯಿಸುವ ಬಿಡ್‌ದಾರರು ಮತ್ತೊಬ್ಬರಿಗೆ ವರ್ಗಾಯಿಸುವಂತಿಲ್ಲ, ಅಪ್ರಾಪ್ತರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ, ಟೆಂಡರ್‌ನಲ್ಲಿ ಭಾಗವಹಿಸುವವರು ಆಯಾ ಕೆರೆ ಯಾವ ವರ್ಗಕ್ಕೆ ಮೀಸಲಾಗಿಡಲಾಗಿದೆಯೋ ಆ ವರ್ಗಕ್ಕ ಸೇರಿರಬೇಕು, ಮೀಸಲಾತಿ ಬಿಡ್‌ಗಾಗಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು. ಮತ್ತಿತರ ಷರತ್ತುಗಳ ಮೇಲೆ ಇ-ಟೆಂಡರ್ ಪ್ರಕ್ರಿಯೆ ನಡೆಯಲಿದೆ.

    ಟೆಂಡರ್ ಮುಕ್ತಾಯವಾದ ಕೆರೆಗಳಿಗೆ ಹೊಸದಾಗಿ ಇ-ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನೆಲಮಂಗಲಲ್ಲಿ 9 ಕೆರೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ದೊಡ್ಡಬಳ್ಳಾಪುರ ಹಾಗೂ ಇನ್ನುಳಿದ ತಾಲೂಕುಗಳಿಗೆ ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಆರಂಭವಾಗಲಿದೆ.
    | ನಾಗರಾಜ್ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts