More

    ಇದು ಕನ್ನಡದ ಮಾಲ್: ಕನ್ನಡದಲ್ಲೇ ಇ-ಮೇಲ್, ಪದಕಣಜ ಜಗಲಿ, ಅಕಾಡೆಮಿ ಇತ್ಯಾದಿ..

    ತಂತ್ರಜ್ಞಾನದ ವೇಗಕ್ಕೆ ಕನ್ನಡವನ್ನೂ ಸಜ್ಜುಗೊಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ಒದಗಿಸುವ ಜತೆಗೆ ಪದಕಣಜ, ಡಿಜಿಟಲ್ ಜಗಲಿ, ಇ-ಕಲಿಕಾ ಅಕಾಡೆಮಿಯಂತಹ ವಿನೂತನ ಅಂಶಗಳನ್ನೂ ಒಳಗೊಂಡ ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ ‘ಇ-ಕನ್ನಡ ಪೋರ್ಟಲ್’ ಶೀಘ್ರವೇ ಜನರಿಗೆ ಲಭ್ಯವಾಗಲಿದೆ.

    | ರಮೇಶ ದೊಡ್ಡಪುರ

    ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ

    ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ

    ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು,

    ಅದೇ ಗೋವರ್ಧನಗಿರಿಯಾಗುತ್ತದೆ…

    ಕನ್ನಡಿಗರು ಭಾಷಾ ಅಭಿಮಾನ ಶೂನ್ಯತೆಯಿಂದ ಹೊರಬಂದು ತಮ್ಮ ಕೈಲಾದ ಕರ್ತವ್ಯವನ್ನು ನೆರವೇರಿಸಬೇಕೆಂದು ರಾಷ್ಟ್ರಕವಿ ಕುವೆಂಪು ನೀಡಿದ್ದ ಈ ಕರೆಗೆ ದಶಕಗಳಿಂದಲೂ ಕನ್ನಡಿಗರು ಓಗೊಡುತ್ತಲೇ ಬಂದಿದ್ದೇವೆ. ಅನ್ಯ ಭಾಷೆಯನ್ನು ಹೇರಲು ಬಂದಾಗ ಕೈಯೆತ್ತಿ ಹೋರಾಡಿದವರು ಅನೇಕರು, ಅನ್ಯಾಯವನ್ನು ಪ್ರತಿಭಟಿಸಿ ಗರ್ಜಿಸಿದವರು ಮತ್ತೂ ಹಲವರು. ಮತ್ತೊಂದು ಭಾಷೆಯನ್ನು ಎದುರಿಸುವುದಕ್ಕಿಂತಲೂ, ಕನ್ನಡದ ಅಂತಃಸತ್ವವನ್ನು ವೃದ್ಧಿಸಿಕೊಳ್ಳುವುದೇ ಮುಖ್ಯವಾಗಿರುವ ಈ ಸಂದರ್ಭದಲ್ಲಿ ಕಿರುಬೆರಳು ಮಾತ್ರವಲ್ಲ, ಎರಡೂ ಕೈಗಳ ಹತ್ತೂ ಬೆರಳು ತೊಡಗಬೇಕಿದೆ. ಕಂಪ್ಯೂಟರ್ ಕೀಬೋರ್ಡಿನ ಮೇಲೆ ಕನ್ನಡ ‘ನುಡಿ’ಸುವುದೇ ಇಂದಿನ ಕನ್ನಡ ಹೋರಾಟ. ವಿವಿಧೆಡೆ ಹಂಚಿಹೋಗಿರುವ ಇ-ಕನ್ನಡ ವೇದಿಕೆಗಳನ್ನು ಒಂದುಗೂಡಿಸುವ ಮಹತ್ವದ ಯೋಜನೆ ಬಹುತೇಕ ಸಾಕಾರಗೊಂಡಿದ್ದು, ಇದೊಂದು ಕನ್ನಡ ಭಾಷೆಯ ಮಾಲ್ ಎನ್ನಲು ಅಡ್ಡಿಯಿಲ್ಲ.

    ಇ-ಕನ್ನಡದಲ್ಲಿ ಎಲ್ಲವೂ ಇದೆ

    ಕನ್ನಡ ಭಾಷೆಯನ್ನು ತಂತ್ರಜ್ಞಾನದಲ್ಲಿ ಅಳವಡಿಸಲು ಹಾಗೂ ತಂತ್ರಜ್ಞಾನದ ಮೂಲಕ ಕನ್ನಡದ ವಿಸ್ತಾರವನ್ನು ಹೆಚ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ ಸೇರಿ ಅನೇಕ ಸರ್ಕಾರಿ ಅಂಗಗಳು ತಮ್ಮದೇ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿವೆ. ಆದರೆ ಅವುಗಳನ್ನು ಕೆಲ ವಿಭಾಗಗಳಲ್ಲಿ ವಿಂಗಡಿಸುವ ಹಾಗೂ ಒಂದೇ ಕಡೆ ಲಭ್ಯವಾಗುವಂತೆ ಜೋಡಿಸುವ ಕಾರ್ಯ ಇಲ್ಲಿವರೆಗೂ ಆಗಿರಲಿಲ್ಲ. ಈ ಕಾರಣದಿಂದಾಗಿ ಉತ್ತಮ ಯೋಜನೆಗಳೂ ಕನ್ನಡಿಗರಿಂದ ದೂರದಲ್ಲೆ ಉಳಿದಿದ್ದವು. ಇದೀಗ ಕರ್ನಾಟಕ ಸರ್ಕಾರದ ಅಧೀನದ ಇ-ಆಡಳಿತ ಕೇಂದ್ರವು ‘ಇ-ಕನ್ನಡ ಕಲಿಕಾ ಪೋರ್ಟಲ್’ ರೂಪಿಸಿದೆ. ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡಿಗರಲ್ಲಿ ಕನ್ನಡ ಭಾಷೆಯ ಜ್ಞಾನವನ್ನು ಹೆಚ್ಚಿಸುವುದು ಮತ್ತು ಕನ್ನಡೇತರರಿಗೆ ಕನ್ನಡ ಭಾಷೆಯನ್ನು ಕಲಿಸುವ, ಕನ್ನಡ ಭಾಷೆಯ ಮೂಲಕ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ವಾಣಿಜ್ಯ ವ್ಯವಹಾರ, ಮಾಹಿತಿ ತಂತ್ರಜ್ಞಾನವನ್ನು ಕಲಿಸುವುದು ಈ ಪೋರ್ಟಲ್​ನ ಉದ್ದೇಶ. ekannada.karnataka.gov.in ಗೆ ಮಾಹಿತಿಯನ್ನು ಸೇರಿಸುವ ಕಾರ್ಯ ಭರದಿಂದ ಸಾಗಿದ್ದು, ಅಧಿಕೃತ ಲೋಕಾರ್ಪಣೆಯೊಂದೇ ಬಾಕಿಯಿದೆ.

    ಚರ್ಚೆ ಮಾಡೋಣ ಬನ್ನಿ: ಕನ್ನಡ ಭಾಷೆಯು ಪುಸ್ತಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ವಿಟ್ಟರ್, ಫೇಸ್​ಬುಕ್ ರೀತಿಯಲ್ಲೆ ಕನ್ನಡದ ತಂತ್ರಜ್ಞಾನ ಕುರಿತು ಚರ್ಚೆ ನಡೆಸಲು ‘ಡಿಜಿಟಲ್ ಜಗಲಿ’ ರೂಪಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳು, ಕನ್ನಡಕ್ಕೆ ಅವುಗಳ ಅಳವಡಿಕೆ ಕುರಿತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಲು ಇಲ್ಲಿ ಅವಕಾಶ ನೀಡಲಾಗಿದೆ.

    ಪದಕಣಜವೆಂಬ ಮಹಾನಿಘಂಟು

    ಕಿಟ್ಟೆಲ್ ಪದಕೋಶದಿಂದ ಆರಂಭವಾದ ಕನ್ನಡದ ನಿಘಂಟು ಕಾರ್ಯ ಮತ್ತಷ್ಟು ವಿಸ್ತಾರವಾಗಿ, ವಿವಿಧ ಕ್ಷೇತ್ರಗಳಲ್ಲೂ ಚಾಚಿಕೊಂಡಿದೆ. ಭಾಷೆಯ ಕ್ಷೇತ್ರದಲ್ಲಷ್ಟೆ ಅಲ್ಲದೆ ಅರಣ್ಯ, ಪರಿಸರ, ವೈದ್ಯಕೀಯ, ಗಣಿತ, ಕೃಷಿ, ಕಾರ್ವಿುಕ, ವಾಣಿಜ್ಯ, ಅಪರಾಧ ಸೇರಿ ಅನೇಕ ಕ್ಷೇತ್ರಗಳು ತಮ್ಮದೇ ಪಾರಿಭಾಷಿಕ ಪದಕೋಶಗಳನ್ನೂ ಹೊಂದಿವೆ. ಪದಕೋಶದ ಅಭಿವೃದ್ಧಿಗೆ ಈಗಾಗಲೇ ಹಲವಾರು ಸಂಸ್ಥೆಗಳು, ವಿದ್ವಾಂಸರು, ಭಾಷಾ ಪಂಡಿತರು ತಮ್ಮ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಅವೆಲ್ಲವೂ ಹತ್ತು ಹಲವು ಕಡೆ ಹರಿದು ಹಂಚಿ ಹೋಗಿವೆ. ಅವೆಲ್ಲವನ್ನೂ ಸಂಗ್ರಹಿಸಿ, ಒಂದೆಡೆ ವ್ಯವಸ್ಥಿತವಾಗಿ ಸೇರಿಸಿ ಒಂದು ಬೃಹತ್ತಾದ, ಅತ್ಯಂತ ಅಧಿಕೃತವಾದ ಪದಕೋಶದ ನಿರ್ಮಾಣ ಮಾಡುವುದೇ ಪದಕಣಜದ ಉದ್ದೇಶ. ಕನ್ನಡದಲ್ಲಿರುವ ಎಲ್ಲ ಪದಕೋಶಗಳನ್ನೂ ಒಂದೇ ಡಿಜಿಟಲ್ ವೇದಿಕೆಯಲ್ಲಿ ತರಬೇಕೆಂಬ ನಿಟ್ಟಿನಲ್ಲಿ ಕೃಷಿ ವಿವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ಅನೇಕ ಮೂಲಗಳಿಂದ ಪ್ರಕಟವಾದ 200 ನಿಘಂಟು, ಪದಕೋಶಗಳನ್ನು ಪಟ್ಟಿ ಮಾಡಲಾಗಿದೆ. ಈಗಾಗಲೆ 52 ಪದಕೋಶಗಳನ್ನು padakanaja.karnataka.gov.in ವೇದಿಕೆಗೆ ಅಳವಡಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ 20 ಸಂಪುಟಗಳನ್ನೂ ಡಿಜಿಟಲೀಕರಿಸಲಾಗಿದ್ದು, ಮೂರು ಸಂಪುಟಗಳು ಅಳವಡಿಕೆಯಾಗಿವೆ. ಉಳಿದವುಗಳ ಕರಡು ತಿದ್ದುಪಡಿ ಚಾಲ್ತಿಯಲ್ಲಿದೆ. ಕನ್ನಡದಿಂದ ಕನ್ನಡ, ಇಂಗ್ಲಿಷ್​ನಿಂದ ಕನ್ನಡದ ನಿಘಂಟುಗಳು ಇಲ್ಲಿದ್ದು, ಇಲ್ಲಿವರೆಗೆ 1,98,677 ಕನ್ನಡ ಪದಗಳು, 63,193 ಇಂಗ್ಲಿಷ್ ಪದಗಳಿಗೆ ಅರ್ಥ ದೊರಕುತ್ತದೆ. ಚಲನಶೀಲವಾದ ಭಾಷೆಯಲ್ಲಿ ಹೊಸ ಪದಗಳ ಸೃಷ್ಟಿಯೂ ನಿರಂತರ. ಈಗಾಗಲೇ ಪ್ರಕಟವಾದ ನಿಘಂಟುಗಳಲ್ಲಿ ಇಲ್ಲದ ಹಾಗೂ ಹೊಸದಾಗಿ ಸೃಷ್ಟಿಯಾಗುವ ಕನ್ನಡ ಪದಗಳನ್ನು ಸಾರ್ವಜನಿಕರು ಸೇರಿಸಬಹುದು. ಇದಕ್ಕೆ ‘ಪದದಾತ’ ಎಂಬ ಪರಿಕಲ್ಪನೆಯಲ್ಲಿ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ದೊರಕುವ ಪದ ಹಾಗೂ ಅರ್ಥವಿವರಣೆಯನ್ನು ಇ-ಆಡಳಿತ ಪದರಚನಾ ಸಮಿತಿ ಪರಿಶೀಲಿಸುತ್ತದೆ. ಅಲ್ಲಿ ಒಪ್ಪಿಗೆ ದೊರೆತರೆ ಪದವು ಅಂತರ್ಜಾಲ ನಿಘಂಟಿಗೆ ಸೇರ್ಪಡೆಯಾಗುತ್ತದೆ. ಈ ಮೂಲಕ ನಿಘಂಟು ರಚನೆ ಕಾರ್ಯ ನಿರಂತರ ಕ್ರಿಯೆಯಾಗಿಸುವತ್ತ ಸಾಗಿದೆ.

    ಇ-ಕಲಿಕಾ ಅಕಾಡೆಮಿ

    ಕನ್ನಡ ಭಾಷೆಯನ್ನು ಮಾತನಾಡುವವರು ಇಂದು ಜಗತ್ತಿನಾದ್ಯಂತ ಎಲ್ಲೆಡೆ ಇದ್ದಾರೆ. ತಮ್ಮ ಮಾತೃಭೂಮಿಯಿಂದ ದೂರವಿರುವ ಎರಡನೇ ತಲೆಮಾರಿನ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಕಲಿಯಲು ಆಸಕ್ತಿ ಇದೆ. ಜಗತ್ತಿನ ಬೇರೆ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಯಲು ಉತ್ಸಾಹ ಇದೆ. ಹಲವರಿಗೆ ಕನ್ನಡ ಭಾಷೆಯಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಇಚ್ಛೆ ಇರುತ್ತದೆ. ಇನ್ನೂ ಕೆಲವರಿಗೆ ಕನ್ನಡ ಭಾಷೆಯ ಮೂಲಕ ಬೇರೆ ವಿಷಯಗಳನ್ನು ಕಲಿಯಲು ಆಸಕ್ತಿಯೂ ಇದೆ. ಈಗಿನ ಪರಿಸ್ಥಿತಿಯಲ್ಲಿ ಸಮಯ ಮತ್ತು ಸೌಲಭ್ಯದ ಕೊರತೆಯಿಂದಾಗಿ ಸಾಂಪ್ರದಾಯಿಕ ತರಗತಿಗಳಲ್ಲಿ ಕುಳಿತು ಅಭ್ಯಸಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲಾ ಆಸಕ್ತರಿಗೆ ಕನ್ನಡ ಕಲಿಕೆಗೆ ವೇದಿಕೆ ನಿರ್ಮಾಣ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಇ- ಕಲಿಕಾ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಕನ್ನಡ ಪಾಠಗಳು, ಭಾರತೀಯ ಭಾಷಾ ಸಂಸ್ಥೆ ರೂಪಿಸಿರುವ ಕನ್ನಡ ಕಲಿಕೆ ಸರ್ಟಿಫಿಕೇಟ್ ಕೋರ್ಸ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವಿಜಯೀಭವ ಪದವಿ ತರಗತಿ ವಿಡಿಯೋಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ವಿದ್ಯಾಗಮ ಸಂವೇದ ವಿಡಿಯೋಗಳು ಇಲ್ಲಿ ಒಂದೆಡೆ ಲಭ್ಯವಿವೆ.

    ಭಾರತವಾಣಿ ಸಾಗರ

    ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಹತ್ವಾಕಾಂಕ್ಷಿ ಬಹುಭಾಷಾ ನಿಘಂಟು ಯೋಜನೆಯೇ ಭಾರತವಾಣಿ. ಭಾರತದ ಎಲ್ಲ ಭಾಷೆಗಳಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಇರುವ ನಿಘಂಟುಗಳನ್ನು ಒಂದೇ ವೇದಿಕೆಯಲ್ಲಿ ತರುವ ಯೋಜನೆಯಲ್ಲಿ ಈಗಾಗಲೆ 200ಕ್ಕೂ ಹೆಚ್ಚು ನಿಘಂಟುಗಳನ್ನು ಅಡಕ ಮಾಡಲಾಗಿದೆ. ಒಂದು ಇಂಗ್ಲಿಷ್ ಪದಕ್ಕೆ ದೇಶದ ವಿವಿಧ ಭಾಷೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿರುವ ಅರ್ಥ ಒಂದೇ ಕಡೆ ಲಭ್ಯವಾಗುತ್ತದೆ. ವಿವಿಧ ಭಾಷೆಗಳ ನಡುವಿನ ಸೌಂದರ್ಯ ಸವಿಯುವ ಅವಕಾಶವನ್ನೂ ನೀಡುವ ಈ ಯೋಜನೆಯಲ್ಲಿ 100 ಭಾರತೀಯ ಭಾಷೆಗಳನ್ನು ಒಳಗೊಳ್ಳುವ ಯೋಜನೆ ಹೊಂದಲಾಗಿದೆ.

    ಜ್ಞಾನ ಕೋಶದಲ್ಲಿ ಜಗತ್ತು

    ಜ್ಞಾನಕೋಶ ಎಂಬ ವಿಭಾಗದಲ್ಲಿ ಈಗಾಗಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರೂಪಿಸಿರುವ ಕಣಜ ಪೋರ್ಟಲ್ ಲಿಂಕ್ ಮಾಡಲಾಗಿದೆ. ಜತೆಗೆ ಭಾರತೀಯ ಭಾಷಾ ಸಂಸ್ಥೆಯ ನಿಘಂಟು, ಕಣಜ ಇ-ಪುಸ್ತಕ ಪೋರ್ಟಲ್, ಸಮಗ್ರ ವಚನ ಸಾಹಿತ್ಯ ಹಾಗೂ ಸಮಗ್ರ ದಾಸ ಸಾಹಿತ್ಯ ಪ್ರವೇಶ, ಕಗ್ಗ ರಸಧಾರೆಯ ಪ್ರವೇಶ ಲಿಂಕ್​ಗಳನ್ನು ನೀಡಲಾಗಿದೆ. ಒಟ್ಟಿನಲ್ಲಿ, ಕನ್ನಡದ ಪ್ರಮುಖ ಜ್ಞಾನ ಪ್ರಪಂಚಕ್ಕೆ ಇಲ್ಲಿ ಪ್ರವೇಶವನ್ನು ಕಲ್ಪಿಸಲಾಗಿದೆ.

    ಕನ್ನಡದಲ್ಲೇ ಇಮೇಲ್ ವಿಳಾಸ

    ಈಗಾಗಲೇ ಕನ್ನಡ ಸೇರಿ ಎಲ್ಲ ಭಾಷೆಗಳಲ್ಲೂ ವೆಬ್​ಸೈಟ್ ವಿಳಾಸ ಹಾಗೂ ಇಮೇಲ್ ವಿಳಾಸ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ karnataka.gov.in ಅನ್ನು ಕರ್ನಾಟಕ.ಸರ್ಕಾರ.ಭಾರತ ಎಂದು ನೋಂದಣಿ ಮಾಡಲಾಗಿದೆ. ಯೂನಿಕೋಡ್​ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿದರೂ ವೆಬ್​ಸೈಟ್ ಪ್ರವೇಶಿಸಬಹುದು. ಇದೇ ರೀತಿ ಕನ್ನಡದಲ್ಲೆ ಇ-ಮೇಲ್ ವಿಳಾಸಗಳೂ ಸಿದ್ಧವಾಗಿವೆ. ಸದ್ಯದಲ್ಲೆ ಸರ್ಕಾರಿ ಇಲಾಖೆಗಳಿಗೆ ಹಾಗೂ ಪ್ರಾಯೋಗಿಕವಾಗಿ ಕೆಲವು ಸಾರ್ವಜನಿಕರಿಗೆ ಉಚಿತವಾಗಿ ಕನ್ನಡ ಇಮೇಲ್ ವಿಳಾಸಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ.

    ಇದು ಕನ್ನಡದ ಮಾಲ್: ಕನ್ನಡದಲ್ಲೇ ಇ-ಮೇಲ್, ಪದಕಣಜ ಜಗಲಿ, ಅಕಾಡೆಮಿ ಇತ್ಯಾದಿ..ಜ್ಞಾನ, ತಂತ್ರಜ್ಞಾನಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯ ಇ-ಕನ್ನಡ ಯೋಜನೆ ಸಾರ್ವಜನಿಕರಿಗೆ ಲಭ್ಯವಾಗಲು ಅಂತಿಮ ಹಂತ ತಲುಪಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯ, ಸಹಕಾರದಿಂದ ಇದು ಸಾಧ್ಯವಾಗುತ್ತಿದ್ದು, ಸಾಹಿತ್ಯದಿಂದ ಆಡಳಿತದವರೆಗೆ ಕನ್ನಡದ ಕುರಿತ ಎಲ್ಲ ಮಾಹಿತಿಗಳನ್ನೂ ಒಳಗೊಳ್ಳುವ ನಿರೀಕ್ಷೆಯಿದೆ.

    | ಬೇಳೂರು ಸುದರ್ಶನ ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ

     

    ಲಹರಿಯಲ್ಲಿ ತೂಗುಮಂಚದಲ್ಲಿ ಕೂತ ರಕ್ಷಿತ್ ಶೆಟ್ಟಿ-ರಶ್ಮಿಕಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts