More

    21ನೇ ಶತಮಾನ ಜ್ಞಾನದ ಯುಗ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಇಪ್ಪತ್ತೊಂದನೇ ಶತಮಾನ ಜ್ಞಾನದ ಯುಗವಾಗಿದ್ದು ಇಲ್ಲಿ ವಿದ್ಯೆ ಇದ್ದವರು ಇಡೀ ದೇಶವನ್ನೇ ಆಳುತ್ತಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಡಿವಿಎಸ್ ಆವರಣದಲ್ಲಿ ಗುರುವಾರ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಸುವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಮತ್ತು ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಯಾವುದೇ ಅಡ್ಡ ಮಾರ್ಗಗಳನ್ನು ಹಿಡಿಯಬಾರದು ಎಂದು ಸಲಹೆ ನೀಡಿದರು.
    ಆಸ್ತಿ, ಅಧಿಕಾರ ಎಂದಿಗೂ ಶಾಶ್ವತವಲ್ಲ. ವಿದ್ಯೆ ಇದ್ದವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಜೀವನದಲ್ಲಿ ಎಡವಿದಾಗ ವ್ಯಥೆ ಪಡುವ ಬದಲು ಪ್ರಸ್ತುತ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಯಶ್ಸಸಿಗೆ ಮುನ್ನುಡಿ ಬರೆಯಬೇಕು ಎಂದು ಹೇಳಿದರು.
    ಶಿವಮೊಗ್ಗಕ್ಕೆ ಭವಿಷ್ಯವೇ ಇಲ್ಲ ಎನ್ನುವ ಕಾಲವೊಂದಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾಗಿದೆ. ಶಿಕ್ಷಣ, ವೈದ್ಯಕೀಯ, ಕೈಗಾರಿಕೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡಿದೆ. ಆಯುರ್ವೇದ ವಿಶ್ವವಿದ್ಯಾಲಯ ಘೋಷಣೆಯಾಗಿದೆ. ಶಿಕ್ಷಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಕಲ್ಪಿಸುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
    ಪ್ರಸ್ತುತ ಶಿಕ್ಷಣ ವ್ಯವಸ್ಥೆ ಗುಣಮಟ್ಟದಿಂದ ಕೂಡಿದ್ದರೂ ಕೌಶಲ ಇಲ್ಲವಾಗಿದೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಯೊಂದರಲ್ಲಿ 18 ಬೋಧಕ ಹುದ್ದೆಗಳ ನೇಮಕಾತಿಗೆ 580 ಮಂದಿ ಅರ್ಜಿ ಸಲ್ಲಿಸಿದ್ದರು. ಉತ್ತಮ ಅಂಕ ಪಡೆದಿದ್ದರೂ ಅದರಲ್ಲಿ 11 ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಯಿತು. ಆರು ಹುದ್ದೆಗಳು ಖಾಲಿಯೇ ಉಳಿದವು. ಇದಕ್ಕೆ ಕೌಶಲ ಕೊರತೆಯೇ ಕಾರಣವಾಗಿದೆ. ಹಾಗಾಗಿ ಪುಸ್ತಕದ ಚೌಕಟ್ಟಿಗೆ ಸೀಮಿತವಾಗದೇ ತಂದೆ-ತಾಯಿಗೆ ಹೊರೆಯಾಗದೇ ಜೀವನ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.
    ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಪಿ.ದಿನೇಶ್, ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕರಾದ ಎಂ.ರಾಜು, ಡಾ. ಎಚ್.ಮಂಜುನಾಥ, ಜಿ.ಮಧುಸೂದನ್, ಎನ್.ಆರ್.ನಿತಿನ್, ಎಚ್.ಸಿ.ಉಮೇಶ್, ಡಾ. ಎಂ.ವೆಂಕಟೇಶ್, ಪ್ರಮುಖರಾದ ಪದ್ಮೇಗೌಡ, ಎ.ರಾಜಶೇಖರ್, ಸಿ.ಕೆ.ಶ್ರೀಧರ್, ಪಿ.ಲಕ್ಷ್ಮಣ್, ಬಸವರಾಜ್, ಲಕ್ಷ್ಮೀದೇವಿ, ಪೂರ್ಣಿಮಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts