More

    ದಸರಾ ನಾಡಿನ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಹಬ್ಬ

    ಭದ್ರಾವತಿ: ದಸರಾ ಶಕ್ತಿ ದೇವತೆಗಳ ಹಬ್ಬ. ಜತೆಗೆ ನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಎಂದು ಸಮಾಜ ಸೇವಕ ವೆಂಕಟರಮಣ ಶೇಟ್ ತಿಳಿಸಿದರು.

    ನಗರಸಭೆಯಿಂದ 10 ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭಾನುವಾರ ನಗರಸಭೆ ಕಚೇರಿ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ನವ ದುರ್ಗೆಯರನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ 9 ದಿನಗಳ ವಿಶೇಷ ಆಚರಣೆಗಳಿಂದ ಸಾಧ್ಯವಾಗುತ್ತದೆ. ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಜನತೆಗೆ ಸುಖ-ಶಾಂತಿ ನೀಡಲಿ ಎಂದು ಶುಭ ಹಾರೈಸಿದರು.
    ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ನಗರಸಭೆಯಿಂದ ಆಯೋಜಿಸಿರುವ ದಸರಾ ಮಹೋತ್ಸವವು ಸೌಹಾರ್ದತೆಯ ಹಬ್ಬವಾಗಬೇಕು. ಹಿಂದು-ಮುಸ್ಲಿಂ-ಕ್ರೈಸ್ತ ಸೇರಿದಂತೆ ಎಲ್ಲಾ ಸಮಾಜದ ಸಮುದಾಯದ, ಧರ್ಮದ ಜನರು ಒಟ್ಟಾಗಿ ಆಚರಿಸುವಂತಾಗಬೇಕು. ಆಗ ಮಾತ್ರ ಏಕತೆಯನ್ನು ಕಾಣಲು ಸಾಧ್ಯವಾಗುತ್ತದೆ. ಅಂತಹ ಸೌಹಾರ್ದತೆಯ ಹಬ್ಬಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದರು.
    ಪ್ರತಿ ಬಾರಿಯಂತೆ ಈ ಬಾರಿಯೂ ನಗರಸಭೆ ದಸರಾ ಹಬ್ಬವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ 10 ದಿನಗಳ ಕಾಲ ಆಚರಿಸುತ್ತಿದೆ. ಎಲ್ಲಾ ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯಿಂದ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾಗಬೇಕು. ನಾಡಿನ ಅಧಿದೇವತೆ ಕ್ಷೇತ್ರದ ಜನತೆಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.
    ಪೌರಾಯುಕ್ತ ಮನುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರಸಭೆ ಆಯುಕ್ತರು, ಸದಸ್ಯರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ನಾಗರಿಕರು ದಸರಾ ಮಹೋತ್ಸವದ ಉದ್ಘಾಟಕರಾದ ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಅವರ ನಿವಾಸದಿಂದ ನಗರಸಭೆ ಕಚೇರಿ ಆವರಣದವೆರಗೂ ಮೆರವಣಿಗೆ ಮೂಲಕ ಕರೆ ತಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್, ಕದಿರೇಶ್, ಬಿ.ಕೆ.ಮೋಹನ್, ಚನ್ನಪ್ಪ, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತ ಪ್ರಭಾಕರ್, ಡಾ. ಪ್ರವೀಣ್ ಜಾಕೋಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts