More

    ಬಂಗ್ರಕೂಳೂರು ಬಳಿ ಕಸದ ರಾಶಿಗೆ ಬೆಂಕಿ

    ಮಂಗಳೂರು: ಬಂಗ್ರಕೂಳೂರು ಬಳಿಯ ಪೋರ್ತ್‌ಮೈಲ್‌ನಲ್ಲಿ ಶನಿವಾರ ಮಧ್ಯಾಹ್ನ ಕಸದ ರಾಶಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ಜ್ವಾಲೆ ಹಾಗೂ ದಟ್ಟ ಹೊಗೆಗೆ ಜನರು ಬೆಚ್ಚಿ ಬಿದ್ದರು.

    ಪೋರ್ತ್‌ಮೈಲ್ ಬಳಿ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸೇರಿದ 10 ಎಕರೆ ಖಾಲಿ ಜಾಗವಿದೆ. ಇಲ್ಲಿ ಸ್ಥಳೀಯರು ಮಾತ್ರವಲ್ಲದೆ ದೂರದಿಂದಲೂ ವಾಹನಗಳಲ್ಲಿ ಬಂದು ತ್ಯಾಜ್ಯ ಎಸೆದು ಹೋಗುತ್ತಾರೆ. ನೂರಾರು ಲೋಡು ತ್ಯಾಜ್ಯ ರಾಶಿಗೆ ಏಕಾಏಕಿ ಬೆಂಕಿ ಬಿದ್ದಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತಕ್ಕೆ ಎಚ್ಚರಿಕೆಯ ಕರೆ ಗಂಟೆಯಾಗಿದೆ. ಸುತ್ತಲೂ ಒಣಗಿ ನಿಂತಿರುವ ಹುಲ್ಲಿನಿಂದ ಬೆಂಕಿ ಕ್ಷಣ ಮಾತ್ರದಲ್ಲಿ ಸುತ್ತಲೂ ಹರಡಿದೆ. ತಕ್ಷಣ ಕದ್ರಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಕಾರ್ಯಾಚರಣೆ ನಡೆಸಿದರು.

    ಮನಪಾ ಸ್ಥಳೀಯ ಸದಸ್ಯ ಕಿರಣ್ ಕುಮಾರ್ ಅವರು ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮಧ್ಯಾಹ್ನ 2ರಿಂದ ಆರಂಭವಾದ ಕಾರ್ಯಾಚರಣೆ ರಾತ್ರಿ ತನಕವೂ ಮುಂದುವರಿದಿದೆ. ಬೆಂಕಿ ಮೇಲ್ಭಾಗದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಆದರೆ ತ್ಯಾಜ್ಯದ ಅಡಿ ಭಾಗದಲ್ಲಿ ಹೊಗೆಯಾಡುತ್ತಿದೆ. ಜೆಸಿಬಿ ಮೂಲಕ ತ್ಯಾಜ್ಯವನ್ನು ಬಿಡಿಸಿ ಅದರ ಅಡಿಗೆ ನೀರು ಹಾಯಿಸಿ ಬೆಂಕಿಯ ಕಿಡಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರೆ.

    ಹೈಟೆನ್ಶನ್ ತಂತಿ ಅಡಿಯಲ್ಲೇ ಬೆಂಕಿ: ಮಂಗಳೂರು ನಗರಕ್ಕೆ ವಿದ್ಯುತ್ ಪೂರೈಕೆಯಾಗುವ ಹೈಟೆನ್ಶನ್ ವಿದ್ಯುತ್ ತಂತಿಯ ಅಡಿಯಲ್ಲೇ ಇರುವ ಕಸದ ರಾಶಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಜ್ವಾಲೆಗಳು ಬಾನೆತ್ತರಕ್ಕೆ ಹಾರುತ್ತಿದ್ದವು. ತಂತಿ ಬಳಿಗೆ ಈ ಜ್ವಾಲೆಗಳು ಬರುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ಶಮನ ಮಾಡಿದರು. ನಗರಕ್ಕೆ ವಿದ್ಯುತ್ ಪೂರೈಕೆಯಾಗುವ ಪ್ರಮುಖ ಲೈನ್ ಆಗಿದ್ದುದರಿಂದ ಅದರ ಪೂರೈಕೆ ಸ್ಥಗಿತ ಮಾಡಲೂ ಸಾಧ್ಯವಿರಲಿಲ್ಲ. ಮೊದಲು ಒಂದೇ ಅಗ್ನಿಶಮನ ವಾಹನ ಬಂದ ಕಾರಣ ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರ ಸಾಹಸಪಟ್ಟರು.

    ತ್ಯಾಜ್ಯ ಹಾಕದಂತೆ ಎಚ್ಚರಿಕೆ: ಈ ಪ್ರದೇಶದಲ್ಲಿ ತ್ಯಾಜ್ಯ ತಂದು ಹಾಕುವುದನ್ನು ತಡೆಯಲು ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಅವರು ಮನಪಾ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿ ಒತ್ತಾಯಿಸಿದ್ದರು. ಸ್ಥಳದಲ್ಲಿ ಬೋರ್ಡ್ ಅಳವಡಿಸಿ ತ್ಯಾಜ್ಯ ಹಾಕದಂತೆ ಎಚ್ಚರಿಕೆ ನೀಡಿದ್ದರು. ಆದರೆ ಇದರಿಂದ ತ್ಯಾಜ್ಯ ಎಸೆತಕ್ಕೆ ಕಡಿವಾಣ ಬಿದ್ದಿಲ್ಲ. ಇದರ ಸಮೀಪದಲ್ಲೇ ಜನವಸತಿ ಪ್ರದೇಶವೂ ಇದೆ. ಹುಲ್ಲಿನ ಮೂಲಕ ಬೆಂಕಿ ಹೊತ್ತಿಕೊಂಡು ಹೋದರೆ ಅಲ್ಲಿರುವ ನೂರಾರು ಮನೆಗಳಿಗೆ ಅಪಾಯವಿದೆ. ಜಿಲ್ಲಾಡಳಿತ ಹಾಗೂ ಮನಪಾ ಈ ಘಟನೆಯನ್ನು ಪಾಠವಾಗಿಸಿಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಬೆಂಕಿ ಬಿದ್ದದ್ದು ಹೇಗೆ?: ಕಸದ ರಾಶಿಗೆ ಬೆಂಕಿ ಬಿದ್ದ ಬಗೆ ಹೇಗೆ ಎಂಬುದು ರಹಸ್ಯವಾಗಿದೆ. ಇದು ನಿರ್ಜನ ಪ್ರದೇಶವಾದ ಕಾರಣ ತ್ಯಾಜ್ಯದ ರಾಶಿಯಲ್ಲಿ ಗುಜರಿ ಹೆಕ್ಕುವವರು ಹೋಗುತ್ತಾರೆ. ಅಲ್ಲಿ ವಯರ್ ಅಥವಾ ಇನ್ಯಾವುದೋ ವಸ್ತುವನ್ನು ಬಿಡಿಸಲು ಬೆಂಕಿ ಹಾಕಿರುವ ಸಾಧ್ಯತೆ ಇದೆ. ಅಥವಾ ಕಿಡಿಗೇಡಿಗಳು ಬೆಂಕಿ ಹಾಕಿ ಹೋಗಿರುವ ಸಾಧ್ಯತೆ ಇದೆ ಎಂದು ಕಾರ್ಪೋರೇಟರ್ ಕಿರಣ್ ಕುಮಾರ್ ಶಂಕಿಸಿದ್ದಾರೆ.

    ಪೋರ್ತ್‌ಮೈಲ್‌ನಲ್ಲಿ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದು ಜನರನ್ನು ಭಯಭೀತರನ್ನಾಗಿಸಿದೆ. ಈ ಹಿಂದೆಯೇ ತ್ಯಾಜ್ಯ ಹಾಕುವುದಕ್ಕೆ ತಡೆಯೊಡ್ಡಲು ಮನಪಾ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಅವರಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಮತ್ತಷ್ಟು ಕಟ್ಟಡ ತ್ಯಾಜ್ಯ ಸಹಿತ ಲೋಡುಗಟ್ಟಲೆ ತ್ಯಾಜ್ಯ ತಂದು ಸುರಿಯುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಬೆಂಕಿ ಬಿದ್ದಾಗ ಅದರ ದುಷ್ಪರಿಣಾಮ ಗೊತ್ತಾಗಿದೆ.
    ಕಿರಣ್ ಕುಮಾರ್, ಸ್ಥಳೀಯ ಮನಪಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts