More

    ಭೀಕರ ಬರಕ್ಕೆ ರೈತ ಮಿತ್ರನ ಬೇಡಿಕೆ ಕ್ಷೀಣ !

    ಬಾಗಲಕೋಟೆ: ಭೀಕರ ಬರ ಅನ್ನದಾತರ ಬದುಕನ್ನು ನಾನಾ ರೀತಿಯಲ್ಲಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಇದೀಗ ರೈತ ಮಿತ್ರನಿಗೂ ಬರದ ಬಿಸಿ ತಟ್ಟಿದೆ. ಜಾನುವಾರು ಜಾತ್ರೆ, ಸಂತೆಗಳಲ್ಲಿ ಎತ್ತುಗಳನ್ನು ಖರೀದಿಸುವವರು ಅಡ್ಡಾದಿಡ್ಡಿ ಬೆಲೆಗೆ ಕೇಳುತ್ತಿದ್ದಾರೆ.

    ಬಾಗಲಕೋಟೆ ನಗರದಲ್ಲಿ ಮೋಟಗಿ ಬಸವೇಶ್ವರ ಜಾತ್ರೆ ಅಂಗವಾಗಿ ಪ್ರತಿ ವರ್ಷ ನಡೆಯುವ ಜಾನುವಾರು ಜಾತ್ರೆಗೆ ಪ್ರಸಕ್ತ ವರ್ಷ ಎತ್ತುಗಳ ಸಂಖ್ಯೆಯೂ ಕಡಿಮೆ ಇದ್ದರೂ ಖರೀದಿದಾರರು ಇಲ್ಲದೆ ಭಣಗುಡುತ್ತಿದೆ.

    ಸೋಮವಾರ ಆರಂಭವಾದ ಜಾನುವಾರು ಜಾತ್ರೆ ಮೂರ‌್ನಾಲ್ಕು ದಿನ ನಡೆಯುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಈ ಜಾನುವಾರು ಜಾತ್ರೆ ನಡೆಯುತ್ತಿದೆ.

    ಜಾನುವಾರು ಜಾತ್ರೆಯಲ್ಲಿ ವಿವಿಧ ಬಗೆಯ, ಒಂದಕ್ಕಿಂತ ಒಂದು ಜಬರ್‌ದಸ್ತ್ ಆಗಿರುವ ಎತ್ತುಗಳನ್ನು ರೈತರು ಮಾರಾಟಕ್ಕೆ ತಂದಿರುತ್ತಾರೆ. ಕನಿಷ್ಠ ಒಂದರಿಂದ 5 ಲಕ್ಷ ರೂ. ವರೆಗೂ ಬೆಲೆ ಬಾಳುವ ಎತ್ತುಗಳು ಮಾರಾಟಕ್ಕೆ ಲಭ್ಯ ಇದ್ದರೂ ಭೀಕರ ಬರದಲ್ಲಿ ಅವುಗಳನ್ನು ಜೋಪಾನ ಮಾಡುವುದು ದುಸ್ತರ ಎಂದು ಖರೀದಿ ಮಾಡಲು ಅನ್ನದಾತರು ಮುಂದೆ ಬರುತ್ತಿಲ್ಲ. ಒಂದು ಕಡೆಗೆ ಮೇವು, ನೀರಿನ ತೊಂದರೆ, ಮತ್ತೊಂದೆಡೆ ಎತ್ತುಗಳ ಮೂಲಕ ಕೃಷಿ ಚಟುವಟಿಕೆ ಕಡಿಮೆ ಆಗಿರುವುದು ರೈತ ಮಿತ್ರ(ಎತ್ತು)ನ ಬೇಡಿಕೆ ಕುಸಿತವಾಗಿದೆ.

    ಸರ್ಕಾರವೇ ಮುಂದೆ ನಿಂತು ಯಂತ್ರೋಪಕರಣಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಹೀಗಾಗಿ ಎತ್ತುಗಳ ಬೇಡಿಕೆ ಕುಗ್ಗುತ್ತ ಹೊರಟಿದೆ. 1.70 ಲಕ್ಷ ರೂ. ಬೆಲೆಯ ಎತ್ತಿನ ಜೋಡಿಗೆ ಬರೀ ಒಂದು ಲಕ್ಷ ರೂ.ಗೆ ಕೇಳಿದರೆ ಕೊಡುವುದು ಹೇಗೆ? ಕಷ್ಟನೋ ಸುಖನೋ ಹೆಂಗಾದರೂ ಮೇವು ಖರೀದಿಸಿ ಮಳೆಗಾಲದವರೆಗೂ ಸಾಕುತ್ತೇನೆ. ಉತ್ತಮ ಮಳೆಯಾದರೆ ಆಗ ಎತ್ತುಗಳ ಬೇಡಿಕೆ ಹೆಚ್ಚಬಹುದು ಎಂದು ಸುತಗುಂಡಾರ ಗ್ರಾಮದ ರೈತ ನೀಲನಗೌಡ ಗೌಡರ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಶಿರೂರ ಗ್ರಾಮದ ಹನುಮಂತ ಮೆಣಸಗಿ, ನನ್ನದು 75 ಸಾವಿರ ರೂ. ಬೆಲೆಯ ಹೋರಿಯನ್ನು 25 ಸಾವಿರ ರೂ.ಗೆ ಕೇಳಿದ್ದಾರೆ. ಎತ್ತುಗಳಿಗೆ ಬೆಲೆಯೇ ಇಲ್ವ ಎಂದು ಬೇಸರ ಹೊರಹಾಕಿದರು.

    ಈಗ ಒಕ್ಕಲುತನ ಮಾಡುವವರು ಇಲ್ಲ. ಎಲ್ಲರೂ ಟ್ರಾೃಕ್ಟರ್ ಮೂಲಕ ಬಿತ್ತಿದರೆ ಆಯಿತು ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ 2 ಲಕ್ಷ ರೂ. ಕೊಟ್ಟು ಎತ್ತು ತಂದಿದ್ದೆ. ವರ್ಷಗಷ್ಟಲೆ ಜೋಪಾನ ಮಾಡಿದ್ದೇವೆ. 2.50 ಲಕ್ಷ ರೂ. ಸಿಗಬೇಕು. ಇಲ್ಲಿ ಆ ಬೆಲೆ ಸಿಗುತ್ತಿಲ್ಲ. ವಿಜಯಪುರ ಜಿಲ್ಲೆಯ ಸಂತೆಗೂ ಹೋಗಿ ಬಂದಿದ್ದೇನೆ. ಬಾಗಲಕೋಟೆ ಜಾನುವಾರು ಜಾತ್ರೆಯಲ್ಲಿ ಎತ್ತುಗಳ ಸಂಖ್ಯೆಯೂ ಕಡಿಮೆ, ಖರೀದಿದಾರರು ಕಡಿಮೆ ಆಗಿದ್ದಾರೆ. 
    ಸಿದ್ದಪ್ಪ ಕೋಟಿಕಲ್ಲ, ಶಿರೂರ ಗ್ರಾಮದ ರೈತ 
    ಕೃಷಿಯಲ್ಲಿ ಎತ್ತುಗಳ ಬಳಕೆ ಕಡಿಮೆ ಆಗಿದೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಾಗಿದೆ. ಕೃಷಿ ಪರಿಕರ, ಟ್ರಾೃಕ್ಟರ್ ಖರೀದಿಗೆ ಸಬ್ಸಿಡಿ ಕೊಡುತ್ತದೆ. ಆದರೆ, ಎತ್ತುಗಳ ಮೂಲಕ ಒಕ್ಕಲುತನ ಮಾಡಲು ಎತ್ತುಗಳ ಖರೀದಿಗೂ ಸಬ್ಸಿಡಿ ಕೊಡಬೇಕಲ್ವ? ಕಷ್ಟ ಇದೆ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ಬೆಲೆಗೆ ಎತ್ತು ಮಾರಲು ನಾನು ಸಿದ್ಧನಿಲ್ಲ. 
    ದುಂಡಪ್ಪ ದೊರೆಗೋಳ, ಅರಕೇರಿ ಗ್ರಾಮದ ರೈತ (ಬೀಳಗಿ ತಾಲೂಕು) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts