More

    ಅಂಬೇಡ್ಕರ್ ಭವನ, ಇಂದಿರಾ ಕ್ಯಾಂಟೀನ್‌ಗೆ ಸ್ಥಳ ಗುರುತಿಸುವಲ್ಲಿ ಅಧಿಕಾರಿಗಳು ವಿಫಲ

    ಬಾಗೇಪಲ್ಲಿ: ತಾಲೂಕು ಪಂಚಾಯಿತಿ ಅವರಣದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಮತ್ತು ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಅಂಬೇಡ್ಕರ್ ಭವನ ಮತ್ತು ಇಂದಿರಾ ಕ್ಯಾಂಟೀನ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಎರಡು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಕೋಟ್ಯಾಂತರ ರೂ.ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಸ್ಥಳ ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮುಖಂಡ ಬಿ.ವಿ.ವೆಂಕಟರವಣ ಆರೋಪಿಸಿದರು.

    ಅಧಿಕಾರಿಗಳನ್ನು ನಾವು ಅವರ ಸ್ವಂತ ಆಸ್ತಿ ಕೇಳುತ್ತಿಲ್ಲ, ಭವನ ಮತ್ತು ಕ್ಯಾಂಟೀನ್‌ಗೆ ಸ್ಥಳ ಗುರುತಿಸುವಂತೆ 4 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ರಘುನಂದನ್ ಮಾತನಾಡಿ, ಭವನ ಮತ್ತು ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಲು ಇರುವ ಸಮಸ್ಯೆ ಖುದ್ದು ಪರಿಶೀಲಿಸಿದ್ದೇನೆ, ಕ್ಯಾಂಟೀನ್ ಮತ್ತು ಭವನ ಎಲ್ಲಿ ನಿರ್ಮಿಸಿದರೆ ಸೂಕ್ತ ಎಂಬುದನ್ನು ಖಾತ್ರಿ ಪಡಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ವಾರದೊಳಗೆ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಸೀಲ್ದಾರ್ ಎಂ.ನಾಗರಾಜು, ತಾಪಂ ಇಒ ಸಿ.ಶ್ರೀನಿವಾಸ, ಪುರಸಭೆ ಸದಸ್ಯ ಆ.ನ.ಮೂರ್ತಿ, ಮುಖಂಡರಾದ ಗುಟ್ಟಪಾಳ್ಯ ಶ್ರೀನಿವಾಸ, ಎಂ.ವಿ.ಲಕ್ಷ್ಮೀನರಸಿಂಹಪ್ಪ, ವಾಲ್ಮೀಕಿ ಸಂಘದ ಮರಿಯಪ್ಪ, ಲಂಬಾಣಿ ಸಂಘದ ವೆಂಕಟರವಣಪ್ಪ, ಭೋವಿ ಸಂಘದ ಶ್ರೀನಿವಾಸ, ಮುಖಂಡರಾದ ಗಂಗುಲಪ್ಪ, ಬಿ.ನರಸಿಂಹಪ್ಪ, ಜಯಂತ್, ನರಸಿಂಹಪ್ಪ, ಎಲ್.ಎನ್.ನರಸಿಂಹಪ್ಪ, ಕೃಷ್ಣಪ್ಪ, ನಾಗೇನಾಯ್ಕ, ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts