More

    ಡ್ರಗ್ಸ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

    ಬೆಳಗಾವಿ: ಡ್ರಗ್ಸ ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆಮನವಿ ಸಲ್ಲಿಸಿದರು.

    ರಾಜ್ಯ ದಲ್ಲಿ ವ್ಯಾಪಕವಾಗಿ ಡ್ರಗ್ಸ ಜಾಲ ಬೆಳೆದಿದೆ. ಈಗಾಗಲೇ ಹಲವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೂ ಡ್ರಗ್ಸ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಇಡೀ ಸಮಾಜ, ವ್ಯವಸ್ಥೆ ಹಾಳುಮಾಡುವ ಕೆಲಸ ನಡೆಯುತ್ತಿದೆ. ದೇಶದ ಯುವಕರು ಡ್ರಗ್ಸ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ಅನ್ನು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

    ಡ್ರಗ್ಸ ಮಾರಾಟ ಹಾಗೂ ಸಾಗಣೆ ಮಾಡುವವರನ್ನು ರಾಷ್ಟ್ರೀಯ ಸುರಕ್ಷಾ ಕಾಯ್ದೆಯಡಿ ಬಂಧಿಸುವ ಕಾನೂನು ಜಾರಿಗೊಳಿಸಬೇಕು. ಶಾಲಾ-ಕಾಲೇಜ್ ಪರಿಸರದಲ್ಲಿ ಗುಪ್ತಚರ ಇಲಾಖೆಯವರು ಗಸ್ತು ಹೆಚ್ಚಿಸಬೇಕು. ಡ್ರಗ್ಸ್ ಪತ್ತೆಯಾಗುವ ಸ್ಥಳದ ವ್ಯಾಪ್ತಿಯಲ್ಲಿ ಪೊಲೀಸ್ ಠಾಣಾಧಿಕಾರಿ ಮತ್ತು ಎಸ್ಪಿಯನ್ನು ಜವಾಬ್ದಾರಿಯನ್ನಾಗಿಸಬೇಕು.

    ಪಬ್, ಕ್ಲಬ್, ಲೈವ್ ಬ್ಯಾಂಡ್, ಸ್ಟಾರ್ ಹೋಟೆಲ್‌ಗಳನ್ನು ನಿರಂತರ ಪರಿಶೀಲನೆ ಮಾಡಬೇಕು. ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿರುವುದಿಂದ ತನಿಖೆಗೆ ವಿಶೇಷ ತಂಡ ರಚಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿನಯ ಅಂಗ್ರೊಳ್ಳಿ, ಶಿವರಾಜ ನಾಯ್ಕ, ರವಿ ಕೆ., ರಮೇಶ ಗೊಡಗೋಡಗಿ, ಸತೀಶ ಪಾಟೀಲ, ಬಾಳು ಪವಾರ, ರಾಹುಲ್ ಕೋಲಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts