More

    ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರ ಕಿಡಿ

    ಕೆ.ಆರ್.ಪೇಟೆ: ಎರಡು ವರ್ಷಗಳ ಹಿಂದೆಯೇ ಒಡೆದು ಹೋಗಿರುವ ಕೆರೆಗಳನ್ನು ದುರಸ್ತಿಗೊಳಿಸದಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಜೆಡಿಎಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

    ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಕೆ. ಅನ್ನದಾನಿ, ಕೆ.ಟಿ.ಶ್ರೀಂಕಂಠೇಗೌಡ, ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ಮನ್‌ಮುಲ್ ನಿರ್ದೇಶಕ ಡಾಲು ರವಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಮುಖಂಡರಾದ ಅಕ್ಕಿಹೆಬ್ಬಾಳು ರಘು, ಕೊತ್ತಮಾರನಹಳ್ಳಿ ಆನಂದ್, ರವಿಕುಮಾರ್, ಕುರುಬರಹಳ್ಳಿ ನಾಗೇಶ್, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಟಿ.ಬಲದೇವ್ ಸೇರಿದಂತೆ ನೂರಾರು ಕಾರ್ಯಕರ್ತರ ತಂಡ ಶನಿವಾರ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿತು.

    ತಾಲೂಕಿನ ಕೊತ್ತಮಾರನಹಳ್ಳಿ ಮತ್ತು ಸೋಮೇನಹಳ್ಳಿ ವ್ಯಾಪ್ತಿಯಲ್ಲಿ ಮಳೆ ಇಲ್ಲದೆ ಒಣಗಿರುವ ರಾಗಿ ಹೊಲಗಳನ್ನು ಪರಿಶೀಲಿಸಿದರು. ಇದುವರೆಗೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
    ತವರು ಜಿಲ್ಲೆಯವರೇ ಕೃಷಿ ಸಚಿವರಾಗಿದ್ದರೂ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಅನ್ನಧಾತರ ಅಹವಾಲು ಆಲಿಸದೆ ಕಣ್ಣು-ಕಿವಿ-ಮೂಗು ಇಲ್ಲದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಆದರೆ, ವರ್ಗಾವಣೆ ದಂಧೆ ಮೂಲಕ ತಿನ್ನಲು ಬಾಯಿ ಇದೆ ಎಂಬುದನ್ನು ನಿರೂಪಿಸುತ್ತಿದೆ ಎಂದು ಡಿ.ಸಿ. ತಮ್ಮಣ್ಣ ಮಾತಿನಲ್ಲೇ ತಿವಿದರು.

    ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ತೀವ್ರ ಬರಗಾಲದಿಂದ ಬೆಳೆ ಹಾನಿಗೊಳಗಾಗಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ರಿಂದ 50 ಸಾವಿರ ರೂ.ವರೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಕೆರೆ ದುರಸ್ತಿಗೆ ಒತ್ತಾಯ: ಎರಡು ವರ್ಷಗಳ ಹಿಂದೆ ಉಂಟಾದ ಅತಿವೃಷ್ಟಿಯಿಂದ ಲೋಕನಹಳ್ಳಿ, ಅಘಲಯ ಮತ್ತು ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆಗಳು ಹಾನಿಗೀಡಾಗಿವೆ. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರವಿತ್ತು. ತಾಲೂಕಿನವರೇ ಮಂತ್ರಿಯಾಗಿದ್ದರು. ಆದರೂ, ದುರಸ್ತಿಗೊಳಿಸಲು ಸಾಧ್ಯವಾಗಲಿಲ್ಲ. 6 ತಿಂಗಳು ಕಳೆದರೂ ನೂತನ ರಾಜ್ಯ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಿ ಕೆರೆಗಳನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಡಿ.4ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಟಿ.ಮಂಜು ಈ ಬಗ್ಗೆ ಧ್ವನಿ ಎತ್ತಲಿದ್ದಾರೆ. ಸದನದ ಹೊರಗೆ ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts