More

    ಡ್ರೋನ್ ಮೇಲೆ ಖಾಕಿ ಕಣ್ಣು, ಪೊಲೀಸ್ ಅನುಮತಿ ಪಡೆಯದ ಹಾರಾಟಕ್ಕೆ ನಿರ್ಬಂಧ

    ಮಂಗಳೂರು: ಇನ್ನು ಮುಂದೆ ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಡ್ರೋನ್ ಕ್ಯಾಮರಾ ಹಾರಿಸುವಂತಿಲ್ಲ.
    ಭದ್ರತೆಗೆ ಸವಾಲಾಗುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಡ್ರೋನ್ ಹಾರಾಟದ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಇದರಿಂದಾಗಿ ವೃತ್ತಿನಿರತ ಛಾಯಾಗ್ರಾಹಕರು ಆತಂಕ ಪಡುವಂತಾಗಿದೆ. ಮಂಗಳವಾರ ಸರ್ವ ಸದಸ್ಯರ ಸಭೆ ನಡೆಸಿರುವ ದ.ಕ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸದಸ್ಯರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮದುವೆ ಸಂಬಂಧಿತ ಚಿತ್ರೀಕರಣಕ್ಕಾಗಿ ಡ್ರೋನ್ ಹಾರಾಟಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

    ಮಂಗಳೂರು ನಗರದಲ್ಲಿ ಕೆಲದಿನಗಳ ಹಿಂದೆ ನಡೆದ ರಾಜಕೀಯ ಪಕ್ಷವೊಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಡ್ರೋನ್ ಬಳಕೆ ಮಾಡಲಾಗಿತ್ತು. ಇದನ್ನು ಗಮನಿಸಿದ ಪೊಲೀಸ್ ಹಿರಿಯ ಅಧಿಕಾರಿಗಳು ನಾಗರಿಕ ವಿಮಾನ ಯಾನ ಸಚಿವಾಲಯದ(ಡಿಜಿಸಿಎ) ಡ್ರೋನ್ ನೋಂದಣಿ ವಿವರ ಕೇಳಿದ್ದರು. ಆದರೆ ನೋಂದಣಿಯಾಗದ ಕಾರಣ ಅದನ್ನು ವಶಕ್ಕೆ ಪಡೆದಿದ್ದರು. ನೋಂದಣಿ ಮಾಡಿ ಪ್ರಮಾಣಪತ್ರ ನೀಡಿದ ಬಳಿಕ ಡ್ರೋನ್ ಹಿಂತಿರುಗಿಸಿದ್ದರು. ಆ ಬಳಿಕ ಡ್ರೋನ್ ಹಾರಾಟಕ್ಕಿರುವ ಡಿಜಿಸಿಎ ನಿಯಮಾವಳಿಯ ಪಾಲನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

    ಭದ್ರತೆಗೆ ಧಕ್ಕೆ ಸಾಧ್ಯತೆ
    ಖಾಸಗಿ ಕಾರ್ಯಕ್ರಮಗಳು, ವಿವಾಹ ಮತ್ತಿತರ ಸಮಾರಂಭಗಳು, ಸಿನಿಮಾ, ಜಾಹೀರಾತು, ವಿಡಿಯೋ ನಿರ್ಮಾಣಗಳಿಗೆ ಈಗ ಡ್ರೋನ್ ಅಗತ್ಯ. ಡ್ರೋನ್ ಹಾರಾಟ ಹಲವು ಬಾರಿ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯೂ ಇದೆ. ಕಳೆದ ವರ್ಷ ಮಂಗಳೂರು ಎಸ್‌ಇಝಡ್ ಬಳಿ ಡ್ರೋನ್ ಹಾರಾಟ ಸುದ್ದಿಯಾಗಿತ್ತು. ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಡ್ರೋನ್‌ಗಳನ್ನು ನೋಂದಣಿ ಮಾಡಬೇಕು. ಅದಕ್ಕೆ ಕೇಂದ್ರ ಸರ್ಕಾರವೇ ಎರಡು ವರ್ಷದ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು. ನಾಗರಿಕ ವಿಮಾನಯಾನ ಸಚಿವಾಲಯದ ‘ಡಿಜಿಟಲ್ ಸ್ಕೈ’ ವೆಬ್‌ಸೈಟ್(ಡಿಡಿಡಿ.ಜಿಜಜಿಠಿಚ್ಝ.ಜ್ಚ.ಜಟ.ಜ್ಞಿ)ನಲ್ಲಿ ಆನ್‌ಲೈನ್ ಮೂಲಕವೇ ನೋಂದಣಿ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬೇಕು.

    ನೋಂದಣಿ ಪ್ರಕ್ರಿಯೆ ಸುಲಭ
    2018ರ ಆಗಸ್ಟ್ ತಿಂಗಳಲ್ಲೇ ಡ್ರೋನ್ ಮೇಲೆ ಕಡಿವಾಣ ಹಾಕಲು ಸರ್ಕಾರ ನೀತಿ ರೂಪಿಸಿತ್ತು. ಅದರಂತೆ ಡ್ರೋನ್ ಮಾಲೀಕರು ವಿಶಿಷ್ಟ ಗುರುತು ಸಂಖ್ಯೆ ಹಾಗೂ ಮಾನವ ರಹಿತ ಹಾರಾಟ ನಿರ್ವಹಣಾ ಅನುಮತಿ(ಯುಎಒಪಿ) ಪಡೆಯಬೇಕು. ಡ್ರೋನ್ ನೋಂದಣಿ ಆಗದಿದ್ದರೆ ಅದು ನಾಗರಿಕ ವಿಮಾನಯಾನದ ಅವಶ್ಯಕತೆ(ಸಿಎಆರ್) ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ನಾಗರಿಕ ಬಳಕೆಯ ಡ್ರೋನ್‌ಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಡಿಜಿಟಲ್ ಸ್ಕೈ ವೆಬ್‌ಸೈಟ್‌ನಲ್ಲಿ ಮೊದಲು ಡ್ರೋನ್ ಮಾಲೀಕರು ಪ್ರಾಥಮಿಕ ಮಾಹಿತಿಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ಅವರಿಗೆ ಓನರ್‌ಶಿಪ್ ಎಕ್ನಾಲಜ್ ನಂಬರ್(ಒಎಎನ್) ಸಿಗುತ್ತದೆ. ಅದನ್ನು ಬಳಸಿಕೊಂಡು ಮಾಲೀಕರು ಡ್ರೋನ್ ಮಾಹಿತಿ ಅಪ್‌ಲೋಡ್ ಮಾಡಬೇಕು. ಆಗ ಅವರಿಗೆ ಡ್ರೋನ್ ಎಕ್ನಾಲಜ್ ನಂಬರ್(ಡಿಎಎನ್) ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಡ್ರೋನ್ ಇದ್ದಲ್ಲಿ ಪ್ರತಿ ಡ್ರೋನ್‌ಗೂ ಪ್ರತ್ಯೇಕ ಡಿಎಎನ್ ಕಡ್ಡಾಯ.

    ಪೊಲೀಸ್ ಅನುಮತಿ ಇಲ್ಲದಿದ್ದರೆ ಅಪರಾಧ
    ಡ್ರೋನ್ ಹಾರಾಟಕ್ಕೆ ಡಿಜಿಸಿಎ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಡಿಜಿಸಿಎ ಅವರಿಂದ ಪಡೆದ ಅನುಮತಿ ಪ್ರತಿ, ಡ್ರೋನಿನ ನಿರ್ದಿಷ್ಟತೆ, ಆಪರೇಟರ್‌ಗಳ ತರಬೇತಿ ಪ್ರಮಾಣಪತ್ರ, ಭೂಮಾಲೀಕರ ಅನುಮತಿ ಪತ್ರ, ಡ್ರೋನ್ ಹಾರಿಸುವಾಗ ದುರ್ಘಟನೆ ನಡೆದರೆ, ಮೂರನೇ ವ್ಯಕ್ತಿಗೆ ಹಾನಿಯಾದರೆ ಹಾನಿಯನ್ನು ಆಪರೇಟರ್‌ಗಳು ಹೊಣೆ, ಅವರಿಗೆ ವಿಮೆ ಪ್ರಮಾಣಪತ್ರ, ಡ್ರೋನ್ ಹಾರಿಸಲು ಕಾರಣ ಹಾಗೂ ಸಂಬಂಧಪಟ್ಟ ದಾಖಲಾತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಪೊಲೀಸರಿಂದ ಅನುಮತಿ ಪಡೆಯದೆ ಡ್ರೋಣ್ ಹಾರಾಟ ಅಪರಾಧ.

    ದ.ಕ.ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನಲ್ಲಿ 3,400 ಸದಸ್ಯರಿದ್ದಾರೆ. ಮಂಗಳೂರು ನಗರದಲ್ಲಿರುವ ಸದಸ್ಯರ ಸಂಖ್ಯೆ 400. ಪೊಲೀಸ್ ಇಲಾಖೆಯ ಆದೇಶ ಸ್ವಾಗತಾರ್ಹ. ಆದರೆ ವಿವಾಹಕ್ಕೆ ಸಂಬಂಧಪಟ್ಟ ಚಿತ್ರೀಕರಣಕ್ಕೆ ಮಾತ್ರ ಡ್ರೋನ್ ಹಾರಾಟಕ್ಕೆ ಅನುಮತಿ ನೀಡಬೇಕು. ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ.
    – ಶ್ರೀಧರ ಶೆಟ್ಟಿಗಾರ್, ಅಧ್ಯಕ್ಷರು, ದ.ಕ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಶನ್

    ಮಂಗಳೂರು ನಗರ ಸೂಕ್ಷ್ಮ ಪ್ರದೇಶವಾದ ಕಾರಣ ಸಾರ್ವಜನಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಡಿಜಿಸಿಎ ಮಾರ್ಗಸೂಚಿ ಪ್ರಕಾರ ಎಲ್ಲ ಪ್ರಕಾರದ ಡ್ರೋನ್ ಬಳಕೆಗೆ ಅನುಮತಿ ಕಡ್ಡಾಯ ಮಾಡಲಾಗಿದೆ. ಅನುಮತಿ ಪಡೆಯದೆ ಡ್ರೋನ್ ಹಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು.
    -ಎನ್.ಶಶಿಕುಮಾರ್, ಆಯುಕ್ತರು, ಮಂಗಳೂರು ನಗರ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts