More

    ಚಾಲಕನ ಕೊಲೆ, ಆರು ಯುವಕರ ಬಂಧನ

    ಬೆಳಗಾವಿ: ನಗರದಲ್ಲಿ ವಾಹನ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆ ಪೊಲೀಸರು 24 ಗಂಟೆಯೊಳಗೆ 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಂಬೇಡ್ಕರ್ ಗಲ್ಲಿಯ ಜಯಪಾಲ ಮಸನು ಗರಾಣಿ (35) ಎಂಬ ಚಾಲಕನನ್ನು ಬುಧವಾರ ರಾತ್ರಿ ಮಾರಕಾಸದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಬೆಳಗಾವಿ ನಗರದ ಅಂಬೇಡ್ಕರ್ ಗಲ್ಲಿಯ ಜ್ಯೋತಿರಾಜ ದೊಡಮನಿ (24), ಅಕ್ಷಯ ಕೋಲಕಾರ (24), ಪ್ರಶಾಂತ ಕಳ್ಳಿಮನಿ (30), ಪ್ರತಾಪ ಗರಾಣಿ (28), ರೋಹಿತ ದೊಡಮನಿ (23) ಹಾಗೂ ಶಿವರಾಜ ದೊಡಮನಿ (21) ಎಂಬ ಆರು ಯುವಕರನ್ನು ಬಂಧಿಸಿದ್ದಾರೆ.

    ಘಟನೆ ವಿವರ: ಬಂಧಿತರು ಮತ್ತು ಕೊಲೆಯಾದ ಚಾಲಕ ಒಂದೇ ಗಲ್ಲಿಯಲ್ಲಿ ವಾಸವಾಗಿದ್ದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಇವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯೂ ನಡೆದಿದ್ದವು. ಬುಧವಾರ ರಾತ್ರಿ ಗಲ್ಲಿಯಲ್ಲಿ ನಡೆದ ಕಾರ್ಯ ಕ್ರವೊಂದರಲ್ಲಿ ಪರಸ್ಪರರ ನಡುವೆ ಮತ್ತೆ ಗಲಾಟೆ ನಡೆದಿದೆ. ಸ್ವಲ್ಪ ಸಮಯದ ನಂತರ ಗಲ್ಲಿಯ ಲಕ್ಷ್ಮೀ ದೇವಸ್ಥಾನದ ಖಾಲಿ ಪ್ರದೇಶದಲ್ಲಿ ಎಲ್ಲರೂ ಸೇರಿದ್ದು, ಈ ವೇಳೆ ಹಳೆಯ ವಿಚಾರವಾಗಿಯೇ ಮಾತಿನ ಚಕಮಕಿ ಮುಂದುವರಿದಿತ್ತು. ಈ ವೇಳೆ ಜಯಪಾಲನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರು ಸ್ನೇಹಿತರು ತಲೆ ಮರೆಸಿಕೊಂಡಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ 6 ಯುವಕರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಕೊಲೆ ಹಿಂದಿನ ರಹಸ್ಯ ಭೇದಿಸುತ್ತೇವೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಹವಾಲ್ದಾರ್ ನೇತೃತ್ವದ ತನಿಖಾ ತಂಡ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ನಾಯಕ, ಎಎಸ್‌ಐ ಉದಯ ಪಾಟೀಲ, ಸಿಬ್ಬಂದಿ ಆರ್.ಎಂ. ಸನದಿ, ಶ್ಯಾಮಸುಂದರ ದೊಡ್ಡನಾಯಕರ್, ಎನ್.ಸಿ. ತುರುಮಂದಿ, ಎ.ವಿ. ನೀಲಪ್ಪನವರ ಇತರರು ಇದ್ದರು.

    ಚಾಲಕನ ಕೊಲೆ ಪ್ರಕರಣದಲ್ಲಿ 24 ಗಂಟೆಯೊಳಗೆ 6 ಯುವಕರನ್ನು ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.
    | ಡಾ. ವಿಕ್ರಂ ಅಮಟೆ. ಡಿಸಿಪಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts