More

    ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

    ಹುಣಸೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಕಣಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ರಾಗಿ ಮಾರಾಟಕ್ಕಾಗಿ ಬಂದಿದ್ದ ರೈತರಿಗೆ ಸಾಕಷ್ಟು ಅನನುಕೂಲಗಳು ಆಗಿರುವ ಕುರಿತು ತಮ್ಮಲ್ಲಿ ದೂರುಗಳು ಬಂದಿವೆ. ಇನ್ನು ಮುಂದೆ ಅಂತಹ ಯಾವುದೇ ದೂರುಗಳು ಬಾರದಂತೆ ಖರೀದಿ ಅಧಿಕಾರಿಗಳು ಮತ್ತು ಎಪಿಎಂಸಿ ಅಧಿಕಾರಿಗಳು ಗಮನಹರಿಸಬೇಕು. ರಾಗಿ ತುಂಬಿಕೊಂಡ ವಾಹನಗಳು ದಿನಗಟ್ಟಲೆ ನಿಲ್ಲುವಂತಾಗಬಾರದು. ಒಂದು ದಿನಕ್ಕೆ ಎಷ್ಟು ಖರೀದಿ ಮಾಡಬಹುದೋ ಅಷ್ಟಕ್ಕೆ ಟೋಕನ್‌ಗಳನ್ನು ನೀಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಎಪಿಎಂಸಿ ಆವರಣದಲ್ಲಿ ರೈತರಿಗ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಆಗಬೇಕು. ತೂಕದ ವ್ಯವಸ್ಥೆಯಲ್ಲಿ ಲೋಪದೋಷಗಳು ಆಗಬಾರದು. ರೈತರಿಂದ ಯಾವುದೇ ಹಣ ವಸೂಲಿ ಮಾಡಿದ ಮಾಹಿತಿ ನನಗೆ ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ. ಕ್ವಿಂಟಾಲ್‌ಗೆ 3846 ರೂ.ಗಳ ಬೆಂಬಲ ಬೆಲೆಯನ್ನು ಸರ್ಕಾರ ನೀಡುತ್ತಿದ್ದು, ರೈತರು ಮಧ್ಯವರ್ತಿಗಳ ಬಲೆಗೆ ಸಿಲುಕದೇ ಖರೀದಿ ಕೇಂದ್ರದಲ್ಲೇ ಮಾರಾಟ ಮಾಡಬೇಕು ಎಂದರು.

    ಖರೀದಿ ಅಧಿಕಾರಿ ಮಂಜುನಾಥ್ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ 4716 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಒಟ್ಟು 1,15,660 ಕ್ವಿಂಟಾಲ್ ಪ್ರಮಾಣದ ರಾಗಿ ಖರೀದಿ ಮಾಡಲಾಗುತ್ತಿದೆ. ಒಬ್ಬ ರೈತನಿಗೆ ಗರಿಷ್ಠ 1000 ಕ್ವಿಂಟಾಲ್ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಕಾರ್ಮಿಕರು ಇನ್ನಿತರ ಸಿಬ್ಬಂದಿಯೊಂದಿಗೆ ಖರೀದಿ ಕಾರ್ಯವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.

    ಎಪಿಎಂಸಿ ಕಾರ್ಯದರ್ಶಿ ಒ.ಹಂಪಣ್ಣ, ಉಗ್ರಾಣ ವ್ಯವಸ್ಥಾಪಕ ಜಗದೀಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕಿ ಲಕ್ಷ್ಮೀ, ಶಿರಸ್ತೇದಾರ್ ಶರವಣ, ರೈತ ಮುಖಂಡ ಗೋವಿಂದೇಗೌಡ, ನಾಗರಾಜೇಗೌಡ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts