More

    ವ್ಹೀಲ್ಚೇರ್ ಸ್ನೇಹಿ ವಿಶ್ರಾಂತಿ ತಾಣಕ್ಕೆ ಚಾಲನೆ

    ಬೆಂಗಳೂರು: ವಿಶ್ವ ಅಂಗವಿಕಲರ ದಿನದಂದೇ ದೈಹಿಕ ಅಂಗವೈಕಲ್ಯಕ್ಕೆ ಒಳಗಾಗಿರುವ ಆನ್‌ಲೈನ್ ಫುಡ್ ಡೆಲಿವರಿ ಕೆಲಸಗಾರರಿಗೆ ವ್ಹೀಲ್ಚೇರ್ ಸ್ನೇಹಿ ವಿಶ್ರಾಂತಿ ತಾಣದ ಕೊಡುಗೆ ದೊರೆತಿದೆ. ಇಂತಹದ್ದೊಂದು ವಿನೂತನ ಹಾಗೂ ದೇಶದಲ್ಲೇ ಪ್ರಥಮವಾದ ಕೇಂದ್ರವು ಭಾನುವಾರ ಉದ್ಘಾಟನೆ ಕಂಡಿದೆ.

    ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರ ಕಚೇರಿ ಬಳಿ ತೇಜಸ್ವಿ ಸೂರ್ಯ ಅವರು ಈ ಹೊಸ ಪರಿಕಲ್ಪನೆಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.

    ಎಂಪಿ ನಿಧಿ ಅಡಿಯಲ್ಲಿ ಈ ವಿಶ್ರಾಂತಿ ತಾಣವನ್ನು ನಿರ್ಮಾಣ ಮಾಡಲಾಗಿದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಆರಾಮದಾಯಕ ಸೀಟಿಂಗ್ ಸೌಲಭ್ಯ, ಟಾಯ್ಲೆಟ್, ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಫುಡ್ ಡೆಲಿವರಿ ಕೆಲಸಗಾರರಿಗೆ ವಿರಾಮ ತೆಗೆದುಕೊಳ್ಳಲು ಇದನ್ನು ನಿರ್ಮಿಸಲಾಗಿದೆ. ವ್ಹೀಲ್ಚೇರ್ ಸ್ನೇಹಿ ತಾಣ ಇದಾಗಿದ್ದು, ನಿಯೋ ಮೋಷನ್ ಸಂಸ್ಥೆಯ ಸಹಯೋಗ ದೊರೆತಿದೆ.

    ಪ್ರಸ್ತುತ ದೇಶಾದ್ಯಂತ ರೆಮ್ಯಾಟೊ ಕಂಪನಿಯಲ್ಲಿ 200ಕ್ಕೂ ಅಧಿಕ ವ್ಹೀಲ್ಚೇರ್ ಡೆಲಿವರಿ ಪಾರ್ಟ್ನರ್‌ಗಳಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ನಿಯೋ ಮೋಷನ್ ಕಂಪನಿ ನಿರ್ಮಿಸಿಕೊಟ್ಟಿದೆ.

    ವ್ಹೀಲ್ಚೇರ್ ಸ್ನೇಹಿ ವಿಶ್ರಾಂತಿ ತಾಣವನ್ನು ಉದ್ಘಾಟಿಸಿ ಮಾತನಾಡಿದ ತೇಜಸ್ವಿ ಸೂರ್ಯ, ನಾವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಟ್ರಾಫಿಕ್, ಮಳೆ, ಹವಾಮಾನ ವೈಪರಿತ್ಯದ ನಡುವೆಯೂ ಗ್ರಾಹಕರಿಗೆ ಸಕಾಲದಲ್ಲಿ ತಲುಪಿಸುವ ಫುಡ್ ಡೆಲಿವರಿ ಕೆಲಸಗಾರರ ಕಾರ್ಯ ಶ್ಲಾಘನೀಯ. ಎಲೆಕ್ಟ್ರಿಕ್ ವ್ಹೀಲ್ಚೇರ್ ಮೂಲಕ ತೆರಳಿ, ಆರ್ಡರ್ ಅನ್ನು ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಕ್ಲಿಷ್ಟಕರ. ಇಂತಹವರಿಗೆ ಕೆಲಸದ ವೇಳೆ ವಿರಾಮ ತೆಗೆದುಕೊಳ್ಳಲು ಹೊಸ ವ್ಯವಸ್ಥೆಯು ಅನುಕೂಲ ಮಾಡಿಕೊಡಲಾಗಿದೆ ಎಂದರು.

    ಈಗಾಗಲೇ ವೆಗಾ ಸಿಟಿ ಮಾಲ್ ಬಳಿ ಸಣ್ಣ ಪ್ರಮಾಣದಲ್ಲಿ ವಿಶ್ರಾಂತಿ ತಾಣ ನಿರ್ಮಾಣಗೊಂಡಿದೆ. ಸಂಸದರ ನಿಧಿಯಿಂದ ತಮ್ಮ ಕಚೇರಿ ಬಳಿ ಪೂರ್ಣ ಪ್ರಮಾಣದ ರೆಸ್ಟಿಂಗ್ ಪಾಯಿಂಟ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧೆಡೆ ಇನ್ನಷ್ಟು ವಿಶ್ರಾಂತಿ ತಾಣಗಳನ್ನು ನಿರ್ಮಿಸುವ ಉದ್ದೇಶ ಇದೆ ಎಂದು ತೇಜಸ್ವಿ ಸೂರ್ಯ ವಿವರಿಸಿದರು.

    ದಶಕದ ಹಿಂದೆ ಅಪಘಾತಕ್ಕೆ ಒಳಗಾದ ನಾನು ವ್ಹೀಲ್ಚೇರ್ ಬಳಸಿ ತಿರುಗಾಡುತ್ತಿದೆ. ಆನಂತರ ರೆಮ್ಯಾಟೊ ಕಂಪನಿ ಕೆಲಸ ನೀಡಿದ್ದು, ಪ್ರತೀ ದಿನ 20 ಡೆಲಿವರಿ ಮಾಡುತ್ತಿದ್ದೇನೆ. ಬಿಡುವಿನ ವೇಳೆ ಯಾವುದಾದರೂ ಹೋಟೆಲ್, ಟಾಯ್ಲೆಟ್ ಬಳಿ ವಾಹನ ನಿಲ್ಲಿಸಿ ವಿರಾಮ ಪಡೆಯುವುದು ತ್ರಾಸದಾಯಕವಾಗಿದೆ. ಈಗ ಈ ವಿಶ್ರಾಂತಿ ತಾನದಲ್ಲಿ ನನ್ನಂಥವರಿಗೆ ಊಟ ಮಾಡಲು, ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜ್ ಮಾಡಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ.
    – ಧರ್ಮೇಶ್, ಡೆಲಿವರಿ ಪಾರ್ಟ್ನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts