More

    ರೈತರ ಪಾದಯಾತ್ರೆಗೆ ಚಾಲನೆ

    ಹನೂರು: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಲೆ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರ ಪಾದಯಾತ್ರೆಗೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.

    ಮಾದಪ್ಪನ ದೇಗುಲದ ಮುಂಭಾಗ ಗೋ ಪೂಜೆ ಹಾಗೂ ನೇಗಿಲ ಪೂಜೆಯನ್ನು ನೆರವೇರಿಸಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ರೈತರು ಪಾದಯಾತ್ರೆ ಆರಂಭಿಸಿದರು.

    ಈ ವೇಳೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳ ಜನರು ಅಗತ್ಯ ಮೂಲ ಸೌಕರ್ಯವಿಲ್ಲದ ಪರಿಣಾಮ ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಜತೆಗೆ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ದಿಸೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರಕ್ಕೆ ಹಮ್ಮಿಕೊಂಡಿರುವ ಪಾದಯಾತ್ರೆ ಯಶಸ್ವಿಯಾಗುವುದರ ಮೂಲಕ ನಿರ್ಧರಿಸುವ ಉದ್ದೇಶ ಈಡೇರಲಿ ಎಂದು ಆಶಿಸಿದರು.

    ವಿಜ್ಞಾನಿ ಮಂಜುನಾಥ್ ಮಾತನಾಡಿ, ಮಹದೇಶ್ವರ ಬೆಟ್ಟದ ಭಾಗದಲ್ಲಿ ಬೆಳೆಯುವ ಬೆಳೆಗಳಿಗೆ ಜಿ.ಐ ಟ್ಯಾಗ್ ಕೊಡಿಸುವುದರ ಜತೆಗೆ ರೈತರ ಜ್ವಲಂತ ಸಮಸ್ಯೆಗಳು ಈಡೇರಬೇಕು. ಬುಡಕಟ್ಟು ಜನರ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕು. ಈ ದಿಸೆಯಲ್ಲಿ ರೈತ ಸಂಘದಿಂದ ನೂರಾರು ರೈತರು ಪಾದಯಾತ್ರೆಯ ಮೂಲಕ ಪ್ರತಿ ನಿತ್ಯ 50 ಕಿ.ಮೀ. ಕ್ರಮಿಸಿ, ಜಿಲ್ಲಾ ಕೇಂದ್ರಕ್ಕೆ ತೆರಳಲಿದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಮ್ಮಿಕೊಂಡಿರುವ ಈ ಹೋರಾಟ ನಿಜಕ್ಕೂ ಅರ್ಥಪೂರ್ಣ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಪ್ರಗತಿಪರ ರೈತ ಹಾಗೂ ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್ ಮಾತನಾಡಿ, ಮಹದೇಶ್ವರ ಬೆಟ್ಟದ ತಪ್ಪಲ್ಲಿನಲ್ಲಿರುವ ಕಾಡಂಚಿನ ಗ್ರಾಮಗಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಕರ್ಯದ ಕೊರತೆ ಇದೆ. ಇಲ್ಲಿನ ಜನರು ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಬೇಕು. ಇನ್ನು ಮಹದೇಶ್ವರ ಬೆಟ್ಟದ ಸರ್ವೇ ನಂ. 124 ರಲ್ಲಿ ಹಲವು ಎಕರೆಗಳಿಗೆ ಪೋಡಿ ಆಗಬೇಕಿದೆ. ಇತ್ತ ವಡಕೆಹಳ್ಳದ 400ಕ್ಕೂ ಹೆಚ್ಚು ಎಕರೆಗಳಿಗೆ ಪೋಡಿಯಾಗದ ಪರಿಣಾಮ ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಬೇಕು. ಇದಲ್ಲದೇ ಕಾಡಂಚಿನ ವಾಸಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ತಾಲೂಕು ಕೇಂದ್ರದಲ್ಲಿ ಹಾಸ್ಟೆಲ್ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

    ಹಿರಿಯ ರೈತ ಹೋರಾಟಗಾರ ಕೆ.ಟಿ ಗಂಗಾಧರ, ವಿಜ್ಞಾನಿ ಡಾ.ಮಂಜುನಾಥ್, ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್, ರೈತ ಮುಖಂಡರಾದ ಪ್ರಶಾಂತ್, ಜಯರಾಮ್, ಜಗದೀಶ್, ಶಾಂತಕುಮಾರ್ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts