More

    ಮಧುಗಿರಿಯಲ್ಲಿ ಜಲಕ್ಷಾಮ ; ವಾರದ ನಂತರ ಪಟ್ಟಣದಲ್ಲಿ ಕುಡಿಯುವ ನೀರು ಬಂದ್

    ಮಧುಗಿರಿ: ಪ್ರತೀ ವರ್ಷವೂ ಮಧುಗಿರಿ ತಾಲೂಕು ಬರಕ್ಕೆ ತುತ್ತಾಗುತ್ತಿದ್ದು, ಜನತೆ ಕುಡಿಯುವ ನೀರಿಗೆ ತತ್ತರಿಸುತ್ತಿರುವುದು ವಿಪರ್ಯಾಸವೆನಿಸಿದೆ. ಈ ಬೇಸಿಗೆಯಲ್ಲೂ ಅದು ಪುನರಾವರ್ತನೆಯಾಗಿದ್ದು, ಪಟ್ಟಣವೂ ಸೇರಿ ತಾಲೂಕಿನ ಕೆಲವು ಹೋಬಳಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ.

    ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಿದ್ದಾಪುರ ಕೆರೆ ಖಾಲಿಯಾಗುತ್ತಿದ್ದು, ಇನ್ನೊಂದು ವಾರ ಅಲ್ಲಿಂದ ಪಟ್ಟಣಕ್ಕೆ ನೀರು ಕೊಡಬಹುದು. ನಂತರದ ಪರಿಸ್ಥಿತಿ ಭೀಕರವಾಗಿರಲಿದ್ದು, ಜನ ಟ್ಯಾಂಕರ್ ನೀರಿನ ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ. ಮೇ 3ರ ನಂತರ ಮತ್ತೊಂದು ಅವಧಿಗೆ ಪಟ್ಟಣದ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎನ್ನಲಾಗಿತ್ತಾದರೂ ರಾಜಕೀಯ ದೊಂಬರಾಟದಿಂದಾಗಿ ಹೇಮೆ ಹರಿದಿಲ್ಲ.

    ವಿಪರ್ಯಾಸವೆಂದರೆ ಕಳೆದ ವರ್ಷವೂ ಸಿದ್ದಾಪುರ ಕೆರೆಗೆ ಹೇಮೆ ನೀರು ಸಮರ್ಪಕವಾಗಿ ಹರಿಯದೆ ಪಟ್ಟಣದ ಜನತೆ ಬಹಳಷ್ಟು ತತ್ತರಿಸಿದ್ದರು. ಆದರೆ ಈ ವರ್ಷವೂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಳೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಹಳ್ಳಿಗಳಲ್ಲೂ ನೀರಿಗೆ ಬರ: ಕಸಬಾ ವ್ಯಾಪ್ತಿಯ ಹಳ್ಳಿಗಳು, ದೊಡ್ಡೇರಿ, ಗಿರೇಗೌಡನಹಳ್ಳಿ, ಗೊಲ್ಲರಹಟ್ಟಿ, ದಬ್ಬೇಗಟ್ಟ ಸೇರಿ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಿದೆ. ಕೊಡಿಗೇನಹಳ್ಳಿಯ ಕಸಿನಾಯಕನಹಳ್ಳಿ, ಪರ್ತಿಹಳ್ಳಿ, ಕೊಡಿಗೇನಹಳ್ಳಿ, ತೆರಿಯೂರು, ಕಲಿದೇವಪುರ, ದಂಡಿಪುರ, ಐಡಿಹಳ್ಳಿ ಹೋಬಳಿಯ ಯಲ್ಕೂರು, ತಾಂಡ, ದೊಡ್ಡದಾಳವಟ್ಟ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗಿದೆ.

    ಕೆಎನ್‌ಆರ್ ಅವಧಿಯಲ್ಲಿ ಹೀಗಿರಲಿಲ್ಲ : ಕೆ.ಎನ್.ರಾಜಣ್ಣ ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣ ಸೇರಿ ತಾಲೂಕಿನ ಯಾವುದೇ ಗ್ರಾಮಗಳಲ್ಲೂ ಕುಡಿವ ನೀರಿನ ಅಭಾವ ಕಂಡು ಬಂದಿರಲಿಲ್ಲ. ಹೇಮೆ ನೀರು ಪೂರೈಸುವ ಅಧಿಕಾರಿಗಳು ರಾಜಣ್ಣ ಅವರ ಆದೇಶದಂತೆ ತಾಲೂಕಿನ ಭಾಗದ ಅಷ್ಟೂ ನೀರನ್ನು ಬಿಡುತ್ತಿದ್ದರು. ಅವರ ಅವಧಿಯಲ್ಲಿ 5 ವರ್ಷವೂ ಪಟ್ಟಣದ ಸಿದ್ದಾಪುರ ಕೆರೆಗೆ ನಿರಂತರವಾಗಿ ಹೇಮೆ ನೀರು ಹರಿದಿತ್ತು. ಆದರೆ, ಎರಡು ವರ್ಷಗಳಿಂದ ಸಮರ್ಪಕವಾಗಿ ಹೇಮೆ ಹರಿಯುತ್ತಿಲ್ಲ. ಇದರಿಂದ ಪಟ್ಟಣದ ಜನತೆ ಕುಡಿಯುವ ನೀರಿಗೆ ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪುರಸಭೆ ಸದಸ್ಯ ಲಾಲಾ ಪೇಟೆ ಮಂಜುನಾಥ್.

    ಇನ್ನೊಂದು ವಾರದ ನಂತರ ಪಟ್ಟಣಕ್ಕೆ ನೀರು ಪೂರೈಸುವ ಸಿದ್ದಾಪುರ ಕೆರೆಯ ನೀರು ಬರಿದಾಗಲಿದ್ದು, ಪುರಸಭೆ ವತಿಯಿಂದ 5 ಟ್ಯಾಂಕರ್ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಕಂಡು ಬರುವ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.
    ಅಮರ್ ನಾರಾಯಣ್, ಮುಖ್ಯಾಧಿಕಾರಿ ಪುರಸಭೆ

    ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಆಯಾ ಪಿಡಿಒಗಳಿಗೆ ಸೂಚಿಸಲಾಗಿದೆ. ತೀವ್ರ ಅಭಾವವಿರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
    ದೊಡ್ಡಸಿದ್ದಯ್ಯ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts