More

  ದಶಕ ಸಂದರೂ ನಡೆಯದ ಚಿತ್ರಕಲಾ ಶಿಕ್ಷಕರ ನೇಮಕಾತಿ

  ರಾಜೇಶ್ ಶೆಟ್ಟಿ ದೋಟ, ಮಂಗಳೂರು
  ಸೃಜನಶೀಲತೆ ಬೆಳೆಸಿ ಮಕ್ಕಳನ್ನು ಬೌದ್ಧಿಕವಾಗಿ ಗಟ್ಟಿಗೊಳಿಸುವ ಕಾರ್ಯದಲ್ಲಿ ಚಿತ್ರಕಲಾ ಶಿಕ್ಷಣದ ಪಾತ್ರ ಹಿರಿದು. ಶಾಲಾ ಚಟುವಟಿಕೆಗಳಿಗೆ ಸಂಬಂಧಿಸಿ ಚಿತ್ರಕಲಾ ಶಿಕ್ಷಕರ ಜವಾಬ್ದಾರಿಯೂ ದೊಡ್ಡದು. ಆದರೆ ರಾಜ್ಯದಲ್ಲಿ ಈ ಚಿತ್ರಕಲಾ ಶಿಕ್ಷಕರ ನೇಮಕಾತಿ ನಡೆಯದೆ 13 ವರ್ಷಗಳೇ ಸಂದಿವೆ!

  2008ರ ಬಳಿಕ ಈ ಹುದ್ದೆಗೆ ನೇಮಕಾತಿ ನಡೆದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಈ ನೇಮಕಾತಿ ನಡೆಯದೆ 16 ವರ್ಷಗಳೇ ಕಳೆದಿದೆ. ಚಿತ್ರಕಲೆಯಲ್ಲಿ ಡಿಎಂಸಿ, ಎಎಂ(ಆರ್ಟ್ ಮಾಸ್ಟರ್) ಡಿಪ್ಲೋಮ, ಜಿಡಿ ಆರ್ಟ್ ಹಾಗೂ ಬಿಎಫ್‌ಎ, ಬಿವಿಎ ಪದವಿ ಪಡೆದ ಸಾವಿರಾರು ಮಂದಿ ಕಾಯುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸರ್ಕಾರಿ ನೌಕರಿ ಪಡೆಯುವ ವಯಸ್ಸಿನ ಅರ್ಹತೆ ಮೀರಿದ್ದಾರೆ. ಕೆಲವರಂತೂ ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ.

  ಬಿಡುಗಡೆಯಾಗದ ಅಂತಿಮ ಪಟ್ಟಿ: ಕರ್ನಾಟಕ ಲೋಕಾಸೇವಾ ಆಯೋಗ ಕರ್ನಾಟಕ ವಸತಿ ಶಿಕ್ಷಣ ಸಂಘದ ವ್ಯಾಪ್ತಿಯ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ 460 ಚಿತ್ರಕಲಾ ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆದು 5 ವರ್ಷ ಕಳೆದಿದೆ. 7 ಬಾರಿ ಮೂಲ ದಾಖಲಾತಿ ಪರಿಶೀಲಿಸಿ 7 ಬಾರಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದೇ ಏ.27ರಂದು ಪರಿಷ್ಕೃತ ನೇಮಕಾತಿ ಹಾಗೂ ಆಯ್ಕೆಪಟ್ಟಿ ಸಿದ್ಧಪಡಿಸುವ ವಿಧಾನದ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ನೇಮಕಾತಿಗೆ ತೊಡಕಾಗಿದ್ದ ಕಗ್ಗಂಟನ್ನು ಬಿಡಿಸಿದೆ ಎಂದು ಆಯೋಗ ತಿಳಿಸಿದೆ. ಆದರೆ ಈವರೆಗೂ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲ್ಲ.

  ಸಾವಿರಾರು ಹುದ್ದೆಗಳು ಖಾಲಿ: ರಾಜ್ಯದಲ್ಲಿ 19,463 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 2,883 ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಿಲ್ಲ. ದ.ಕ.ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಿರುವ ಸರ್ಕಾರಿ ಶಾಲೆಗಳು 41. ಅನುದಾನಿತ 35, ಖಾಸಗಿ 65 ಸೇರಿ ಒಟ್ಟು 141 ಶಿಕ್ಷಕರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ 40, ಅನುದಾನಿತ 20, ಖಾಸಗಿ 20 ಸೇರಿ 80 ಶಿಕ್ಷಕರಷ್ಟೇ ಇದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಪಠ್ಯಕ್ರಮದಂತೆ ಚಿತ್ರಕಲೆ ಮತ್ತು ಸಂಗೀತ ವಿಷಯಗಳಿಗೆ ಒತ್ತು ನೀಡಲಾಗಿದೆ. ಆದರೆ ಈ ವಿಷಯಗಳಿಗೆ ಆದ್ಯತೆ ಮೇಲೆ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ತರಬೇತಿಯ ಪಠ್ಯಕ್ರಮ ರಚಿಸಿ 1981ರಿಂದ 2000ರವರೆಗೆ ಸಾವಿರಾರು ಪದವೀಧರರಿಗೆ ತರಬೇತಿ ನೀಡಿದೆ. ಇಷ್ಟಾಗಿಯೂ ಮೂರು ದಶಕಗಳಿಂದ 247 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಂಡಿದೆ. ನೆರೆಯ ಕೇರಳ, ಮಹಾರಾಷ್ಟ್ರ, ಗೋವಾದಲ್ಲಿ ಪ್ರತಿ ವರ್ಷವೂ ನೇಮಕಾತಿ ನಡೆಯುತ್ತಿದೆ.

  ಬೋಧಿಸಲು ಶಿಕ್ಷಕರೇ ಇಲ್ಲ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಡಿಎಸ್‌ಇಆರ್‌ಟಿಯಿಂದ 2012-13ನೇ ಸಾಲಿನಲ್ಲಿ ಎನ್‌ಸಿಎಫ್ 2005 ಆಧಾರದಲ್ಲಿ 1ರಿಂದ 10ನೇ ತರಗತಿವರೆಗೆ ಪಠ್ಯವಸ್ತು ಸಿದ್ಧಪಡಿಸಲಾಗಿದೆ. ಚಿತ್ರಕಲಾ ಶಿಕ್ಷಕರು ಕೈಗೊಳ್ಳಬೇಕಾದ ಬೋಧನಾ ಚಟುವಟಿಕೆಗಳ ಬಗ್ಗೆಯೂ ಶಿಕ್ಷಣ ಇಲಾಖೆ ಕಾಲಕಾಲಕ್ಕೆ ಮಾರ್ಗಸೂಚಿ ಹೊರಡಿಸುತ್ತಲೇ ಇದೆ. ಆದರೆ ವಿಷಯ ಬೋಧಿಸಲು ಶಿಕ್ಷಕರೇ ಇಲ್ಲ.

  ಹುದ್ದೆಯೇ ತೆರವು: ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದಾಗ ಚಿತ್ರಕಲೆ, ಕ್ರಾಫ್ಟ್, ಸಂಗೀತ ವಿಷಯವನ್ನೇ ಕೈಬಿಡಲಾಗಿದೆ. ಇದರಿಂದ ಆ ಹುದ್ದೆಯೇ ಇಲ್ಲ. ಕೆಲವು ಶಾಲೆಗಳಲ್ಲಿ ಡ್ರಾಯಿಂಗ್, ಕ್ರಾಫ್ಟ್ ಹಾಗೂ ನಾಟಕ ವಿಷಯ ಒಳಗೊಂಡಂತೆ ವೃತ್ತಿ ಶಿಕ್ಷಣ ಎಂಬ ಹೊಸ ವಿಷಯ ಸೃಷ್ಟಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇವರನ್ನು ವಿಶೇಷ ಶಿಕ್ಷಕರು ಎಂದು ಇಲಾಖೆ ಘೋಷಿಸಿದೆ.

  ಆರು ಸೆಕ್ಷನ್‌ಗಳಿರುವ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ನೇಮಿಸಬೇಕು ಎಂಬ ನಿಯಮ ಇದೆ. ಆದರೆ ಸರ್ಕಾರದ ಕೆಲ ನೀತಿಗಳಿಂದ ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿದೆ.
  ಮಲ್ಲೇಸ್ವಾಮಿ ಡಿಡಿಪಿಐ, ಮಂಗಳೂರು

  ಶಾಲೆಯಲ್ಲಿ ಚಿತ್ರಕಲೆ ಕಲಿಸುವ ಉದ್ದೇಶ ವಿದ್ಯಾರ್ಥಿ ಭವಿಷ್ಯದಲ್ಲಿ ದೊಡ್ಡ ಚಿತ್ರಕಾರನಾಗಬೇಕು ಎಂಬುದಲ್ಲ. ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ವಿಕಸನ, ಸೃಜನಶೀಲತೆ, ನೈತಿಕ ಮೌಲ್ಯ ಬೆಳೆಯಲು ಚಿತ್ರಕಲೆ ಪೂರಕ. ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯ. ಶಿಕ್ಷಕರನ್ನೇ ನೇಮಿಸದಿದ್ದರೆ ವಿದ್ಯಾರ್ಥಿಗಳು ಚಿತ್ರಕಲೆಯಿಂದ ವಂಚಿತರಾಗುತ್ತಾರೆ. ಸರ್ಕಾರದ ಈ ಧೋರಣೆ ಸರಿಯಲ್ಲ.
  ತಾರನಾಥ ಕೈರಂಗಳ ಚಿತ್ರಕಲಾ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts