More

    ಜಲಜೀವನ್ ಮಿಷನ್‌ಗೆ ಹಿನ್ನಡೆ

    ಹರೀಶ್ ಮೋಟುಕಾನ ಮಂಗಳೂರು

    ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಜಲಜೀವನ್ ಮಿಷನ್’ಗೆ ಕರಾವಳಿಯಲ್ಲಿ ಮೊದಲ ವರ್ಷವೇ ಹಿನ್ನಡೆಯಾಗುವ ಸಾಧ್ಯತೆ ಗೋಚರಿಸಿದೆ.

    ಯೋಜನೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಕಾಮಗಾರಿ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವ ಕಾರಣ ಇಲಾಖೆ ನಿಗದಿಪಡಿಸಿದ ವೆಚ್ಚದಲ್ಲಿ ಕಾಮಗಾರಿ ನಿರ್ವಹಣೆ ಅಸಾಧ್ಯ ಎಂದು ಗುತ್ತಿಗೆದಾರರು ಟೆಂಡರ್ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವು ಕಾಮಗಾರಿಗಳಿಗೆ ಮರು ಟೆಂಡರ್ ಹಾಕಲಾಗಿದೆ. ಗುತ್ತಿಗೆದಾರರನ್ನು ಅಧಿಕಾರಿಗಳು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

    2024ರಲ್ಲಿ ಪ್ರತಿ ಮನೆಗೂ ಸಂಪರ್ಕ: ಪ್ರಸ್ತುತ ಇರುವ ಬಹುಗ್ರಾಮ ಕುಡಿಯುವ ನೀರು ಅಥವಾ ಕೊಳವೆ ಬಾವಿಯಿಂದ ನೀರು ಪೂರೈಸುವ ಜತೆಗೆ ಹೊಸ ಮೂಲಗಳಿಂದಲೂ ನೀರು ಪೂರೈಸಲು ಅವಕಾಶವಿದೆ. 2024ರಲ್ಲಿ ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ನೀಡುವ ಉದ್ದೇಶ ಹೊಂದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೆಲವು ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಈ ಯೋಜನೆಯಡಿ ನೀರು ಸಂಪರ್ಕ ನೀಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ 7 ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ನೀರಿನ ಸಂಪರ್ಕಗಳನ್ನು ವಿಸ್ತರಿಸುವ ಯೋಜನೆಯನ್ನು ಜಲಜೀವನ್ ಮಿಷನ್‌ನಲ್ಲೇ ಕೈಗೆತ್ತಿಕೊಳ್ಳಲಾಗುತ್ತಿದೆ. ಅಗತ್ಯ ಇರುವಲ್ಲಿ ಕೊಳವೆಬಾವಿ ಕೊರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆ ಸ್ವರೂಪ: 2020-21ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ 75 ಸಾವಿರ ಹಾಗೂ ಉಡುಪಿ ಜಿಲ್ಲೆಯ 57,414 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆ ಕಾರ್ಯ ರೂಪಕ್ಕೆ ಬರುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಕೆಲವೇ ಕೆಲವು ಕಾಮಗಾರಿ ಮಾತ್ರ ಚಾಲನೆ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ 46, ಬೆಳ್ತಂಗಡಿ 42, ಪುತ್ತೂರು 20, ಸುಳ್ಯ 15 ಮತ್ತು ಮಂಗಳೂರು ತಾಲೂಕಿನ 94 ಸಹಿತ ಒಟ್ಟು 217 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ದ.ಕ. ಜಿಲ್ಲೆಗೆ 174 ಕೋಟಿ ರೂ. ಹಾಗೂ ಉಡುಪಿ ಜಿಲ್ಲೆಗೆ 126.18 ಕೋಟಿ ರೂ. ಮೀಸಲಿಡಲಾಗಿದೆ.

    2020-21ರ ಕಾಮಗಾರಿ:
    ಜಿಲ್ಲೆ ಗುರಿ ಆರಂಭ
    ದ.ಕ- 467 60
    ಉಡುಪಿ- 344 53

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ 467 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರು ಕೆಲವು ಕಡೆ ಹಿಂದಕ್ಕೆ ಸರಿದ ಕಾರಣ ಮರು ಟೆಂಡರ್ ಕರೆಯಲಾಗಿದೆ. ಕಾಮಗಾರಿಗಳಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಡಾ.ಕುಮಾರ್, ಸಿಇಒ ದ.ಕ ಜಿಪಂ

    ಉಡುಪಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್‌ನ ಟೆಂಡರ್ ಪ್ರಕ್ರಿಯೆ ನಡೆದಿದೆ. ಕೆಲವು ಗುತ್ತಿಗೆದಾರರು ಹಿಂದೆ ಸರಿದಿದ್ದು, ಅವರ ಮನವೊಲಿಸುವ ಪ್ರಯತ್ನ ನಡೆದಿದೆ. ಅಗತ್ಯ ಇರುವಲ್ಲಿ ಮರು ಟೆಂಡರ್ ಕರೆಯಲಾಗಿದೆ.

    ಡಾ.ನವೀನ್ ಭಟ್, ಸಿಇಒ, ಉಡುಪಿ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts