More

    ಡಿ. 30ರವರೆಗೆ ನೀರು ಹರಿಸಿ

    ರಟ್ಟಿಹಳ್ಳಿ: ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ಡಿ. 30ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಯ ಅನುದಾನದಲ್ಲಿ ಅವ್ಯವಹಾರವಾಗಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ಹೇಮಣ್ಣ ಮುದರೆಡ್ಡೇರ, ಬಂಗಾರಪ್ಪ ಈಕ್ಕೇರಿ, ಚಂದ್ರಪ್ಪ ಸಾಸ್ವೆಹಳ್ಳಿ ಆಗ್ರಹಿಸಿದರು.

    ಪಟ್ಟಣದ ತಾ.ಪಂ. ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಯುಟಪಿ ಅಧಿಕಾರಿ ಮುಕಂದರಾಜ, ನ. 30 ರವರೆಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ ಎಂದಾಗ ಸದಸ್ಯರು ಡಿ. 30ರವರೆಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ ಮತ್ತು ಸದಸ್ಯರು, ‘ರೈತರು ಈಗಾಗಲೇ ಹಿಂಗಾರು ಬೆಳೆಗಳಾದ ಸೂರ್ಯಕಾಂತಿ, ಜೋಳ, ಕಡಲೆ ಸೇರಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ಹೀಗಾಗಿ ನೀರಿನ ಅವಶ್ಯಕತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ನೀರು ಬಿಡುವ ಮತ್ತು ಬಂದ್ ಮಾಡುವ ಮೊದಲೇ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.

    ಗುಡ್ಡದಮಾದಪುರ ಏತ ನೀರಾವರಿ ಯೋಜನೆಯನ್ನು ನ. 28ಕ್ಕೆ ಸಚಿವರ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದರು.

    ಸಿ.ಡಿ.ಪಿ.ಒ. ವಿಜಯಕುಮಾರ ಮಾತನಾಡಿ, ತಾಲೂಕಿನ ಒಟ್ಟು 55 ಅಂಗನವಾಡಿಗಳಿಗೆ ತಲಾ 20 ಸಾವಿರದಂತೆ ಒಟ್ಟು 11 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ ಎಂದರು. ಚಂದ್ರಪ್ಪ ಸಾಸ್ವೆಹಳ್ಳಿ ಮತ್ತು ಹೇಮಣ್ಣ ಮುದರೆಡ್ಡೇರ ಮಾತನಾಡಿ, ಎಲ್ಲ ಅಂಗನವಾಡಿಗಳಲ್ಲಿ ಕೇವಲ 3ರಿಂದ 4 ಸಾವಿರ ರೂ. ಮಾತ್ರ ವ್ಯಯ ಮಾಡಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ‘ಕಡೂರು, ಕುಡುಪಲಿ, ಮಾಸೂರು ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಕೆಲವು ವೈದ್ಯರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು ಆಗ್ರಹಿಸಿದರು. ಕಡೂರ ಆರೋಗ್ಯ ಕೇಂದ್ರದ ವೈದ್ಯರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಜಡ್.ಆರ್. ಮಕಾಂದರ ತಿಳಿಸಿದರು.

    ಅಧಿಕಾರಿಗಳ ಗೈರು: ರೇಷ್ಮೆ, ಉಪನೋಂದಣಿ ಇಲಾಖೆ, ಎ.ಪಿ.ಎಂ.ಸಿ., ತೋಟಗಾರಿಕೆ, ಮೀನುಗಾರಿಕೆ, ಹಾಲು ಶೀತಲೀಕರಣ, ಪ್ರಾದೇಶಿಕ ಅರಣ್ಯ, ಸಣ್ಣ ನೀರಾವರಿ, ನಿರ್ವಿುತ ಕೇಂದ್ರ, ಅಬಕಾರಿ, ಲೋಕೋಪಯೋಗಿ ಇಲಾಖೆ, ಪಿ.ಎಲ್.ಡಿ. ಬ್ಯಾಂಕ್ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

    ಸಾಮೂಹಿಕ ರಾಜೀನಾಮೆ ಎಚ್ಚರಿಕೆ: ನೂತನ ತಾಲೂಕು ಪಂಚಾಯಿತಿ ಕಚೇರಿಯಾಗಿ 1 ವರ್ಷ ಕಳೆದಿದೆ. ಸರ್ಕಾರದಿಂದ ತಾ.ಪಂ.ಗೆ ಯಾವುದೇ ಅನುದಾನ ಬರುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲ್ಲ ತಾ.ಪಂ. ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts