More

    ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

    ಹನೂರು: ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಸೂಚನೆ ನೀಡಿದರು.

    ಕುಡಿಯುವ ನೀರಿನ ಸಂಬಂಧ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ತಾಲೂಕಿನ 25 ಗ್ರಾಪಂಗಳ ಪೈಕಿ 19 ಗ್ರಾಪಂನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಆಯಾ ಗ್ರಾಪಂ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಈ ದಿಸೆಯಲ್ಲಿ ಮೊದಲು ಸ್ಥಳೀಯ ಖಾಸಗಿ ಜಮೀನಿನ ಮಾಲೀಕರನ್ನು ಮನವೊಲಿಸಿ ಕೊಳವೆ ಬಾಯಿಯಿಂದ ಕುಡಿಯುವ ನೀರಿನ ಸಂಪರ್ಕ ಪಡೆದು ಗ್ರಾಮಗಳಿಗೆ ಪೂರೈಸಬೇಕು. ಇಲ್ಲವೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಬಳಿಕ ಕ್ರಿಯಾಯೋಜನೆ ತಯಾರಿಸಿ ಬೋರ್‌ವೆಲ್ ಕೊರೆಯಿಸಿ ನೀರು ಪೂರೈಸಲು ಮುಂದಾಗಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದರು.

    ಅಂತರ್ಜಲ ಮಟ್ಟ ದಿನೇ ದಿನೆ ಕುಸಿಯುತ್ತಿರುವುದರಿಂದ ಮುಂದಿನ 15 ದಿನಗಳಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇನ್ನು ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸಿ ನೀರು ಪೂರೈಸಬೇಕು ಎಂದು ತಿಳಿಸಿದರು.

    ಎಲ್ಲೇಮಾಳ ಪಿಡಿಒಗೆ ತರಾಟೆ: ತಾಲೂಕಿನ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿರುವುದರಿಂದ ಬೋರ್‌ವೆಲ್ ಕೊರೆಸುವಂತೆ ಜನರಿಂದ ಒತ್ತಾಯ ಕೇಳಿ ಬರುತ್ತಿದೆ. ಹೀಗಿರುವಾಗ ಬೋರ್‌ವೆಲ್ ಕೊರೆಸಿ 15 ದಿನ ಕಳೆದರೂ ನೀರು ಪೂರೈಸಲು ಯಾವುದೇ ಕ್ರಮ ವಹಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಇದು ನಿಮ್ಮ ಕಾರ್ಯವೈಖರಿಯಲ್ಲಿ ನಿರ್ಲಕ್ಷ್ಯ ತೋರಿಸುತ್ತದೆ. ಹಾಗಾಗಿ ಕೂಡಲೇ ಕ್ರಮವಹಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಲ್ಲೇಮಾಳ ಗ್ರಾಪಂ ಪಿಡಿಒ ಅಶ್ವಿನಿ ಅವರನ್ನು ತಾಪಂ ಇಒ ಉಮೇಶ್ ತರಾಟೆಗೆ ತೆಗೆದುಕೊಂಡರು.

    ಮಾ.15 ರಂದು ಬಂಡಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ನಿವೇಶನ ಫಲಾನುಭವಿಗಳ ಮಂಜೂರಾತಿ ಪ್ರತಿ ವಿತರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ತೆರಳುವ ಮುನ್ನಾ ತೆರಳಿದ್ದ ಶಾಗ್ಯ ಗ್ರಾಪಂ ಪಿಡಿಒ ಸಿದ್ದಪ್ಪ ಹಾಗೂ ಮಣಗಳ್ಳಿ ಗ್ರಾಪಂ ಪಿಡಿಒ ರಾಮು ಅವರಿಗೆ ನೋಟಿಸ್ ನೀಡುವಂತೆ ವ್ಯವಸ್ಥಾಪಕ ಬಾಲಾಜಿ ಅವರಿಗೆ ಸೂಚಿಸಲಾಯಿತು.

    ಸಭೆಯಲ್ಲಿ ಪ್ರತಿ ಪಿಡಿಒ ಅವರಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೊಳವೆ ಬಾವಿ ಕೊರೆಸುವ ಸಂಬಂಧ ಅಗತ್ಯ ಮಾಹಿತಿ ಪಡೆದು ಚರ್ಚಿಸಲಾಯಿತು. ಇಂಜಿನಿಯರ್ ಮಹೇಶ್, ಪಿಡಿಒಗಳಾದ ಸುರೇಶ್, ನಂಜುಂಡಸ್ವಾಮಿ, ಮಾದೇಶ್, ರಘುನಾಥ್, ದೊರೆಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts